ಸೇವಕರ ಸೇವೆಯ ಭಾಗ್ಯವನ್ನು ಪಡೆಯುವುದೇ ನಾಯಕತ್ವ-ಸತೀಶ್ ಬೋಳಾರ್
ಪುತ್ತೂರು: ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ತ್ಯಾಗದ ಮನೋಭಾವನೆಯನ್ನು ಮೂಡಿಸುವವರು ಶಿಕ್ಷಕರು. ಶಿಕ್ಷಕ ವೃತ್ತಿಗಿಂತ ಗೌರವದ ವೃತ್ತಿ ಬೇರೊಂದಿಲ್ಲ. ಸೇವಕರ ಸೇವೆಯ ಭಾಗ್ಯವನ್ನು ಪಡೆಯುವುದೇ ನಾಯಕತ್ವವಾಗಿದೆ ಎಂದು ರೋಟರಿ ಜಿಲ್ಲೆ 3181 ಇದರ 2026-27ರ ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ರವರು ಹೇಳಿದರು.
ಪುತ್ತೂರಿನ ಹಿರಿಯ ರೋಟರಿ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಹಾಗೂ ಇನ್ನರ್‌ವೀಲ್ ಕ್ಲಬ್ ಜಂಟಿ ಸಹಭಾಗಿತ್ವದಲ್ಲಿ ಸೆ.6ರಂದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರು ಹುತಾತ್ಮಕತೆಯನ್ನು ಪಡೆದರೂ ಮಕ್ಕಳ ಭವಿಷ್ಯಕ್ಕೋಸ್ಕರ ತನ್ನ ಸುಖವನ್ನು ಧಾರೆಯೆರುವ ಪೋಷಕರು, ವಿದ್ಯಾರ್ಥಿಗಳನ್ನು ತಿದ್ದಿ ತೀಡುವಲ್ಲಿ ತ್ಯಾಗದ ಮನೋಭಾವನೆಯನ್ನು ತೋರ್ಪಡಿಸುವ ಶಿಕ್ಷಕರು, ದೇಶದ ಗಡಿಯನ್ನು ಹಗಲಿರುಳು ಕಾಯುವ ಸೈನಿಕರು ಇವರೂ ಕೂಡ ಹುತಾತ್ಮಕತೆಯನ್ನು ಪಡೆದವರಾಗಿದ್ದಾರೆ. ಜೀವನದಲ್ಲಿ ಜೋರಾಗಿ ಮಾತನಾಡಿದರೆ ಯಾರೂ ಬರೋದಿಲ್ಲ ಆದರೆ ಯಾರು ಜೀವನದಲ್ಲಿ ಎಲ್ಲರನ್ನು ಪ್ರೀತಿಯಿಂದ ನೋಡುತ್ತಾರೋ ಅವಾಗ ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಸ್ವಾಗತಿಸಿ ಮಾತನಾಡಿ, ಸಮಾಜದಲ್ಲಿನ ಶಿಕ್ಷಕರ ಪಾತ್ರ ಬಹಳ ದೊಡ್ಡದು ಮಾತ್ರವಲ್ಲ ಅವರು ವಿದ್ಯಾರ್ಥಿಗಳ ಮೇಲೆ ಬಹಳ ಪ್ರಭಾವ ಬೀರಲು ಶಕ್ತರಾಗಿರುತ್ತಾರೆ. ಒಬ್ಬ ವಿದ್ಯಾರ್ಥಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಬೇಕಾದರೆ ಆತನ ಹಿಂದೆ ಶಿಕ್ಷಕರ ಶ್ರಮ ಖಂಡಿತಾ ಇದೆ ಎನ್ನುವುದಕ್ಕೆ ತಾನು ವೈದ್ಯ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭ ತನ್ನ ಪ್ರೀತಿಯ ಶಿಕ್ಷಕರ ಪ್ರಭಾವವೇ ಕಾರಣ ಎಂದರು.
ಕ್ಲಬ್‌ನಲ್ಲಿನ ಶಿಕ್ಷಕರಿಗೆ ಗೌರವ:
ಕ್ಲಬ್ ಸದಸ್ಯರಾಗಿ ಶಿಕ್ಷಕ ವೃತ್ತಿಯಲ್ಲಿ ಸೇವೆ ನಿರ್ವಹಿಸಿದ್ದು ಮಾತ್ರವಲ್ಲ ಕ್ಲಬ್ ಸದಸ್ಯರ ಪತ್ನಿಯರು ಶಿಕ್ಷಕ ವೃತ್ತಿಯನ್ನು ನಿಭಾಯಿಸುತ್ತಿದ್ದ ಕ್ಲಬ್ ಹಿರಿಯ ಶಿಕ್ಷಕ ಸುರೇಶ್ ಶೆಟ್ಟಿ, ಪ್ರೊ|ಝೇವಿಯರ್ ಡಿ’ಸೋಜ, ಪ್ರೊ|ದತ್ತಾತ್ರೇಯ ರಾವ್, ಸುಬ್ಬಪ್ಪ ಕೈಕಂಬ, ಡಾ.ಶ್ರೀಪತಿ ರಾವ್, ಡಾ.ಗೋಪಿನಾಥ್ ಪೈ, ಕಿಶನ್ ಬಿ.ವಿ, ಪ್ರೀತಾ ಹೆಗ್ಡೆ, ಸತೀಶ್ ಕುಂದ್ಯ, ಶ್ರೀಮತಿ ಶಂಕರಿ ಎಂ.ಎಸ್ ಭಟ್, ತನುಜಾ ಝೇವಿಯರ್, ಇವಾನ್ ಫೆರ್ನಾಂಡೀಸ್, ಜಲಜಾಕ್ಷಿ ಪ್ರೇಮಾನಂದ್, ಶ್ರೀಲತಾ ಕಿಶೋರ್, ಅನಸೂಯ ಜಗದೀಶ್, ರೇಖಾ ಪ್ರಕಾಶ್, ಮೀನಾಕ್ಷಿ ಸತೀಶ್ ಕಂಬ್ಯ, ಪವಿತ್ರಾ ರೂಪೇಶ್, ಸಂಧ್ಯಾ ಬೈಲಾಡಿ, ತೆರೇಜಾ ಎಂ.ಸಿಕ್ವೇರಾರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ಇನ್ನರ್‌ವೀಲ್ ಕ್ಲಬ್ ಶಿಕ್ಷಕರಿಗೆ ಗೌರವ;
ಇನ್ನರ್‌ವೀಲ್ ಕ್ಲಬ್ ಸದಸ್ಯರಾಗಿದ್ದು ವಿವಿಧ ಕಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಶಂಕರಿ ಎಂ.ಎಸ್ ಭಟ್, ನಿರ್ಮಲ ಪಿ.ಕೆ, ಜ್ಯೋತಿ ದಿವಾಕರ್, ವೀಣಾ ಬಿ.ಕೆ, ಜಲಜಾಕ್ಷಿ ಕೆ.ಎಂ, ರಮಾ ಪ್ರಭಾಕರ್, ಪ್ರಭಾ ಜಿ.ಎಸ್, ವೀಣಾ ಎಂ.ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಇನ್ನರ್‌ವೀಲ್ ಕ್ಲಬ್ ಸದಸ್ಯೆ ವಿಜಯಲಕ್ಷ್ಮಿ ಶೆಣೈರವರು ಕಾರ್ಯಕ್ರಮ ನಿರ್ವಹಿಸಿದರು.
ಕೊಡುಗೆಗಳು:
ಕ್ಲಬ್ ವತಿಯಿಂದ ಓಜಾಲ ಶಾಲೆಗೆ ಕ್ಲಬ್ ಸದಸ್ಯ ಉದಯಕೃಷ್ಣ ಭಟ್‌ರವರಿಂದ ಶಿಕ್ಷಕ ವೇತನದ ಕೊಡುಗೆ ಹಾಗೂ ಕೋಡಿಂಬಾಡಿ ಶಾಲೆಗೆ ಕಂಪ್ಯೂಟರ್ ಅನ್ನು ಕ್ಲಬ್ ವತಿಯಿಂದ ಜೊತೆಗೆ ಕ್ಲಬ್ ಸದಸ್ಯ ಸತೀಶ್ ನಾಯಕ್‌ರವರ ರೂ.10 ಸಾವಿರ ಕೂಡುವಿಕೆಯಿಕೆಯಿಂದ ಹಸ್ತಾಂತರಿಸಲಾಯಿತು.
ಇನ್ನರ್‌ವೀಲ್ ಸದಸ್ಯೆ ಶ್ರೀಮತಿ ಮನೋರಮಾ ಸೂರ್ಯನಾರಾಯಣ ಪ್ರಾರ್ಥಿಸಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ, ಕಾರ್ಯಕ್ರಮ ಸಂಯೋಜಕ ಶ್ರೀಧರ್ ಕಣಜಾಲು ಉಪಸ್ಥಿತರಿದ್ದರು. ವೃತ್ತಿಪರ ವಿಭಾಗದ ನಿರ್ದೇಶಕ ಚಿದಾನಂದ ಬೈಲಾಡಿರವರು ನಿವೃತ್ತ ಶಿಕ್ಷಕರ ಪರಿಚಯ ಮಾಡಿದರು. ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಸದಸ್ಯ ಪರಮೇಶ್ವರ ಗೌಡ ಹಾಗೂ ವಸಂತ್ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.
23 ನಿವೃತ್ತ ಶಿಕ್ಷಕರಿಗೆ ಸನ್ಮಾನ..
ಪ್ರಸ್ತುತ ಸಾಲಿನಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಾದ ಶಿಕ್ಷಕರಾದ ಬಿ.ಶೋಭಾ, ಇಂದಿರಾ ಕೆ, ಮೀನಾಕ್ಷಿ ಪಿ, ಜಯರಾಂ ಶೆಟ್ಟಿ ಕೆ, ಸೀತಾರಾಮ ಗೌಡ, ಸುಬ್ರಹ್ಮಣ್ಯ ಭಟ್ ಎಸ್, ಸತ್ಯಶಂಕರ್ ಭಟ್, ಪ್ರವೀಣ ಕುಮಾರಿ, ಮೆಟಿಲ್ಡಾ ಆಲ್ವಾರಿಸ್, ಕುಶಾಲಾವತಿ ವೈ.ಎಸ್, ಪ್ರೇಮಲತಾ, ತೆರೆಜಾ ಎಂ.ಸಿಕ್ವೇರಾ, ಯಮುನಾ ಬಿ, ಶುಭಲತಾ, ಸವಿತಾ ಕುಮಾರಿ ಎಂ.ಡಿ, ಲೀಲಾವತಿ ಕೆ, ಸಾವಿತ್ರಿ ಎನ್, ಇಂದಿರಾ ಕೆ(ತೆಗ್ಗು, ಕಟ್ಟತ್ತಾರು ಶಾಲೆ), ಸೊಬಿನಾ ಎನ್.ನೊರೋನ್ಹಾ, ಭಾಸ್ಕರ ಎನ್, ತಾರಾ ಎಸ್, ವಿಷ್ಣುಭಟ್ ಎಂ, ತಿಮ್ಮಪ್ಪ ಆರ್.ಎಸ್ ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ತಮ್ಮ ಜೀವನದಲ್ಲಿ ಪ್ರಭಾವ ಬೀರಿದ ಮಾದರಿ ವ್ತಕ್ತಿಗಳು ಯಾರು?, ಹಾಗೂ ಸಮಾಜಕ್ಕೆ ತಾವು ನೀಡುವ ಸಂದೇಶ ಏನು? ಎಂಬ ಸೂಚನೆಯನ್ನು ನೀಡಲಾಗಿತ್ತು.
ಆಡು ಮುಟ್ಟದ ಸೊಪ್ಪಿಲ್ಲ..
ರೋಟರಿ ಸಂಸ್ಥೆಯು ಜಗತ್ತಿನ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದು ಸಮಾಜದಲ್ಲಿ ಸರ್ವೇ ಜನ ಸುಖಿನೋ ಭವಂತು ಎಂಬಂತೆ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಎಲ್ಲರೂ ಒಂದಾಗಿ ಬಾಳಬೇಕು ಎನ್ನುವ ಧ್ಯೇಯೋದ್ಧೇಶಗಳೊಂದಿಗೆ ಮಾತ್ರವಲ್ಲ ಒಂದು ಶಕ್ತಿ ಎಂಬಂತೆ ಕಾರ್ಯನಿರ್ವಹಿಸುತ್ತಿದೆ. ಪುತ್ತೂರಿನಲ್ಲಿ ರೋಟರಿ ಸಂಸ್ಥೆ ಬ್ಲಡ್‌ಬ್ಯಾಂಕ್ ಅನ್ನು ಸ್ಥಾಪಿಸಿ ಜನರ ಜೀವ ಉಳಿಸುತ್ತಿದೆ, ಕಣ್ಣಿನ ಆಸ್ಪತ್ರೆ, ಶಿಕ್ಷಣಕ್ಕಾಗಿ ಕೊಡುಗೆ, ಮನೆ ನಿರ್ಮಿಸಿ ಆಶ್ರಯವನ್ನು ನೀಡುವ ಕಾರ್ಯ, ಬಸ್ಸು ತಂಗುದಾಣದ ಕೊಡುಗೆ ಹೀಗೆ ಹಲವು ಕಾರ್ಯಗಳನ್ನು ಮಾಡುತ್ತಾ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲಿ ಕೈಯಾಡಿಸುತ್ತಿದೆ ರೋಟರಿ ಸಂಸ್ಥೆ. ನನ್ನ ನಿವೃತ್ತಿ ನಂತರ ನಾನೂ ಕೂಡ ಸಮಾಜಕ್ಕೆ ಒಂದಂಶ ನೀಡಲು ಬಯಸುತ್ತೇನೆ.
-ಸುಬ್ರಹ್ಮಣ್ಯ ಭಟ್, ನಿವೃತ್ತ ಶಿಕ್ಷಕರು.
ರೋಟರಿ ಸೇವೆ ಹಳ್ಳಿಯತ್ತನೂ ಪಸರಿಸಲಿ..
ತನ್ನ ವೃತ್ತಿ ಜೀವನದಲ್ಲಿ ಹಾಗೂ ಕೌಟುಂಬಿಕ ಜೀವನದಲ್ಲಿ ರೋಟರಿ ಸಂಸ್ಥೆ ಬಹಳಷ್ಟು ಪ್ರಭಾವ ಬೀರಿದೆ. ರೋಟರಿ ಸಂಸ್ಥೆ ಜಾತ್ಯಾತೀಯತೆ, ಪರಸ್ಪರ ಪ್ರೀತಿಸುವ ಮನೋಭಾವ, ಸಮಾನತೆ, ಕಷ್ಟ-ಸುಖದಲ್ಲಿ ಸ್ಪಂದಿಸುವ ಗುಣ ಹೀಗೆ ಎಲ್ಲವನ್ನೂ ಹೊಂದಿದೆ. ಎಸೆಸ್ಸೆಲ್ಸಿಯಿಂದ ಪಿ.ಎಚ್.ಡಿ ಪಡೆದವರೂ ಒಂದೇ ಎಂಬಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಟರಿ ಸಂಸ್ಥೆಯಿಂದ ನಮ್ಮ ಸರಕಾರಿ ಶಾಲೆಗೆ ಸಾಕಷ್ಟು ಕೊಡುಗೆಗಳು ಸಿಕ್ಕಿವೆ ಎಂಬುದಕ್ಕೆ ಖುಶಿಯಾಗುತ್ತದೆ ಜೊತೆಗೆ ಪ್ರತಿಭಾವಂತ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ. ರೋಟರಿ ಸೇವೆಗಳನ್ನು ಬರೀ ಪೇಟೆಯಲ್ಲಿ ಮಾತ್ರವಲ್ಲ ಹಳ್ಳಿಯತ್ತನೂ ರೋಟರಿ ಸೇವೆಯನ್ನು ಪರಿಚಯಿಸಬೇಕು.
-ತೆರೆಜಾ ಎಂ.ಸಿಕ್ವೇರಾ, ನಿವೃತ್ತ ಶಿಕ್ಷಕರು