ಉಪ್ಪಿನಂಗಡಿ: ಶ್ರೀ ಗಣಪತಿ ದೇವರ ವಿಸರ್ಜನಾ ಮೆರವಣಿಗೆ

0

ಉಪ್ಪಿನಂಗಡಿ: ಇಲ್ಲಿನ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ಮೂರು ದಿನಗಳ ಕಾಲ ಆರಾಧಿಸಲ್ಪಟ್ಟ ಶ್ರೀ ಗಣಪತಿ ದೇವರ ವಿಗ್ರಹದ ವಿಸರ್ಜನಾ ಮೆರವಣಿಗೆಯು ಸೆ.9ರಂದು ರಾತ್ರಿ ನಡೆಯಿತು.


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ ಈ ಬಾರಿ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇದಾಗಿದ್ದು, ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ಶ್ರೀ ಗಣಪತಿ ದೇವರ ವಿಗ್ರಹವನ್ನು ಭವ್ಯ ಶೋಭಾಯಾತ್ರೆಯ ಮೂಲಕ ವಿದ್ಯುದೀಪಾಲಂಕಾರಗೊಂಡ ರಥಬೀದಿಯಾಗಿ, ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಾಗಿ, ಸರಕಾರಿ ಪದವಿ ಪೂರ್ವ ಕಾಲೇಜಿನವರೆಗೆ ತೆಗೆದುಕೊಂಡು ಹೋಗಿ ಬಳಿಕ ವಾಪಸ್ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಗೆ ಬಂದು ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ಸ್ಥಳದಲ್ಲಿ ವಿಸರ್ಜಿಸಲಾಯಿತು.

ತಾಲೀಮು, ಗೊಂಬೆ ಕುಣಿತ, ಹುಲಿವೇಷ, ಶ್ರೀ ಶಾರದಾ ಅಂಧರ ಗೀತೆ ಗಾಯನ ಕಲಾ ಸಂಘ ಮಂಗಳೂರು ಇವರಿಂದ ‘ಭಕ್ತಿ-ಗಾನ’ ಚಲಿಸುವ ರಸಮಂಜರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಪ್ರಸಾದ್ ದೇವಾಡಿಗ ತಂಡದಿಂದ ಸ್ಯಾಕ್ಸೋಫೋನ್ ವಾದನ ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು.


ಈ ಸಂದರ್ಭ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಕೊಲ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಸುನೀಲ್ ಕುಮಾರ್ ದಡ್ಡು, ಸುರೇಶ್ ಅತ್ರೆಮಜಲು, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ರವೀಶ್ ಎಚ್.ಟಿ., ಜಗದೀಶ್ ಶೆಟ್ಟಿ, ಗೋಪಾಲ ಹೆಗ್ಡೆ, ವಿಶ್ವನಾಥ ಶೆಟ್ಟಿ ಕಂಗ್ವೆ, ಸುದರ್ಶನ್, ವಿದ್ಯಾಧರ ಜೈನ್, ಪ್ರತಾಪ್ ಪೆರಿಯಡ್ಕ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಶಶಿಧರ ಶೆಟ್ಟಿ, ಬಿಪಿನ್, ಗಂಗಾಧರ ಟೈಲರ್, ಸ್ವಣೇಶ್ ಗಾಣಿಗ, ಕಿಶೋರ್ ಜೋಗಿ, ಯೊಗೀಶ್ ಶೆಣೈ, ಪುರುಷೋತ್ತಮ ಮುಂಗ್ಲಿಮನೆ, ಮಹೇಶ್ ಬಜತ್ತೂರು, ರವಿನಂದನ್ ಹೆಗ್ಡೆ, ಅನೂಫ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಸುಗಮ ವಾಹನ ಸಂಚಾರಕ್ಕೆ ಅವಕಾಶ
ರಥಬೀದಿಯಿಂದ ಹೊರಟ ಶ್ರೀ ಗಣಪತಿ ದೇವರ ವಿಸರ್ಜನಾ ಮೆರವಣಿಗೆಯು ನಾಲ್ಕು ಮಾರ್ಗಗಳು ಜೋಡಣೆಯಾಗುವ ಬಸ್ ನಿಲ್ದಾಣದ ವೃತ್ತದ ಬಳಿ ಬಂದಾಗ ಅಲ್ಲಿ ಮೆರವಣಿಗೆಯಲ್ಲಿದ್ದ ಎಲ್ಲಾ ಕಲಾ ತಂಡಗಳು ಅಲ್ಲಿ ಪ್ರದರ್ಶನ ನೀಡಿ ಮುಂದೆ ಸಾಗುತ್ತಿದ್ದವು. ಆ ಸಂದರ್ಭದಲ್ಲಿ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗದಂತೆ ಸಮಿತಿಯು ನೋಡಿಕೊಂಡಿತ್ತು. ಪ್ರದರ್ಶನದ ಬಳಿಕ ಒಂದೊಂದೇ ತಂಡಗಳನ್ನು ಬ್ಯಾಂಕ್ ರಸ್ತೆಗೆ ದಾಟಿಸುವಾಗ 2-3 ನಿಮಿಷ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯಾಗಿದ್ದು ಬಿಟ್ಟರೆ, ಇನ್ನುಳಿದಂತೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸಮಿತಿಯ ಈ ನಿರ್ಧಾರ ಹಲವರ ಮೆಚ್ಚುಗೆಗೂ ಪಾತ್ರವಾಯಿತು.

LEAVE A REPLY

Please enter your comment!
Please enter your name here