ಕಾಣಿಯೂರು: ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯೊಂದಿಗೆ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಮೂಲಕ ಮುಂದೆ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಕಡಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸವಣೂರು ನೋಡೆಲ್ ಅಧಿಕಾರಿ ಬಾಲಕೃಷ್ಣ ಕೆ ಹೇಳಿದರು. ಅವರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ, ಬೆಳಂದೂರು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸೆ 11ರಂದು ನಡೆದ ಸವಣೂರು ವಲಯ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕ ಬಾಲಕಿಯರ ವಿಭಾಗದ ಖೋ ಖೋ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಕ್ರೀಡಾಪಟುಗಳು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮಪಟ್ಟರೆ ಗೆಲುವು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕ್ರೀಡಾಂಗಣ ಉದ್ಘಾಟಿಸಿ ಕ್ರೀಡೆಗೆ ಚಾಲನೆ ನೀಡಿದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ಕ್ರೀಡೆ ಎಂಬುದು ವಿದ್ಯಾರ್ಥಿ ಜೀವನದ ಒಂದು ಭಾಗ. ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡವರು ಸರ್ವಾಂಗೀಣ ಬೆಳವಣಿಗೆಗೆ ಸಾಧ್ಯ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದಾಗ ಭವಿಷ್ಯದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಿದೆ ಎಂದರು. ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಅಬೀರ ಮಾತನಾಡಿ, ಕ್ರೀಡೆ ಮಗುವಿನ ಮಾನಸಿಕ, ದೈಹಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಪ್ರಾಮಾಣಿಕವಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದರು.
ಕಾಣಿಯೂರು ಕ್ಲಸ್ಟರ್ ಸಿ ಆರ್ ಪಿ ಯಶೋದ ಮಾತನಾಡಿ, ಶಿಕ್ಷಣ ಇಲಾಖೆಯ ವತಿಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಸಹಕಾರ ನೀಡುತ್ತಿರುವ ಪ್ರಗತಿ ವಿದ್ಯಾಸಂಸ್ಥೆ ಇನ್ನಷ್ಟು ಸಾಧನೆಯ ಹಾದಿಯಲ್ಲಿ ಸಾಗಲಿ ಎಂದು ಶುಭಹಾರೈಸಿದರು. ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ ಮಾತನಾಡಿ, ಮಕ್ಕಳ ವ್ಯಕ್ತಿತ್ವ, ಮಾನಸಿಕ, ದೈಹಿಕ ವಿಕಸನಕ್ಕೆ ಕ್ರೀಡೆ ಪರಿಣಾಮಕಾರಿ. ಆರೋಗ್ಯ ಸಂವರ್ಧನೆಗೆ ಕ್ರೀಡೆ ಅತ್ಯವಶ್ಯ. ಮಕ್ಕಳು ಕಲಿಕೆಯ ಜೊತೆ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಸಾಧಕರಾಗಬೇಕೆಂದರು.
ಬೆಳಂದೂರು ಗ್ರಾ.ಪಂ. ಸದಸ್ಯೆ ಗೌರಿ ಮಾದೋಡಿ, ಪುತ್ತೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ರೈ, ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ಚಂದ್ರಹಾಸ ರೈ ಅಗಲ್ಪಾಡಿ, ನಾಗೇಶ್ ರೈ ಮಾಳ, ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷ ಉಮೇಶ್ ಕೆ.ಎಂ.ಬಿ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶರಣ್ಯ, ಭವಿಷ್ಯ, ಗೋಷಿಕಾ, ಪ್ರಣವಿ ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ. ಶೆಟ್ಟಿ ವಂದಿಸಿ, ಆಂಗ್ಲಮಧ್ಯಮದ ಮುಖ್ಯಸ್ಥೆ ಅನಿತಾ ಜೆ. ರೈ ಕಾರ್ಯಕ್ರಮ ನಿರೂಪಿಸಿದರು.