ರೂ.2.06ಲಕ್ಷ ಲಾಭ, ಶೇ.15 ಡಿವಿಡೆಂಡ್, 66ಪೈಸೆ ಬೋನಸ್
ಪುತ್ತೂರು;ಕಬಕ ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ರೂ.80,59,443.40 ವ್ಯವಹಾರ ನಡೆಸಿದೆ. ರೂ.2.06,468 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ 66 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ದಾಮೋದರ ಗೌಡ ಘೋಷಣೆ ಮಾಡಿದರು.
ಸಭೆಯು ಸೆ.11ರಂದು ಕಬಕ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷಾಂತ್ಯಕ್ಕೆ ಸಂಘದಲ್ಲಿ 265 ಸದಸ್ಯರಿಂದ ರೂ.62,450 ಪಾಲು ಬಂಡವಾಳ ಹೊಂದಿದೆ. ವರದಿ ಸಾಲಿನಲ್ಲಿ ಹೈನುಗಾರರಿಂದ 1,46,884.29 ಲೀಟರ್ ಹಾಲನ್ನು ಸಂಗ್ರಹಿಸಲಾಗಿದೆ. 24,996.9 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಹಾಲು ವ್ಯಾಪಾರದಿಂದ ರೂ.5,98,389.34 ಆದಾಯ ಗಳಿಸಿದೆ. 1655 ಚೀಲ ಪಶು ಆಹಾರ, 787 ಕೆ.ಜಿ ಲವಣ ಮಿಶ್ರಣವನ್ನು ಮಾರಾಟ ಮಾಡಿದೆ. ಲಾಭಾಂಶವನ್ನು ಸಂಘದ ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ.
ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಆವಶ್ಯಕತೆಗಿಂತ ಹಾಲಿನ ಸಂಗ್ರಹಣೆ ಕಡಿಮೆಯಾಗುತ್ತಿದೆ. ನಿರ್ವಹಣಾ ವೆಚ್ಚ ಅಧಿಕವಾಗುವ ಹಿನ್ನೆಲೆಯಲ್ಲಿ ಹೈನುಗಾರಿಕೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಆದರೆ ಇತರ ಜಿಲ್ಲೆಗಳಿಂಗೆ ಹೋಲಿಕೆ ಮಾಡಿದರೆ ನಮ್ಮ ಜಿಲ್ಲೆಯಲ್ಲಿಯೇ ಹಾಲಿಗೆ ಅಧಿಕ ದರವಿದೆ ಎಂದರು.
ಸಹಾಯಕ ವ್ಯವಸ್ಥಾಪಕ ಡಾ.ಅನುದೀಪ್ ಮಾತನಾಡಿ, ಹಸುಗಳ ಪಾಲನೆ, ಪೋಷಣೆ ಮತ್ತು ವೈಜ್ಞಾನಿಕ ವಿಧಾನಗಳನ್ನು ತಿಳಿಸಿದರು. ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಪ್ರತಿಭಾ ಪುರಸ್ಕಾರ, ಅಭಿನಂದನೆ:
ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಗೆ ನೀಡಲಾಗುವ ಪ್ರತಿಭಾ ಪುರಸ್ಕಾರವನ್ನು ಹಿತೇಶ್, ತೇಜಸ್ವಿಯವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ವಿಜಯ ಹಾರ್ವಿನ್ ಹಾಗೂ ನಾರಾಯಣ ಸಪಲ್ಯರವರನ್ನು ಅಭಿನಂದಿಸಲಾಯಿತು. ಎಲ್ಲಾ ಹೈನುಗಾರರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಮೋಹನ ಗೌಡ, ನಿರ್ದೇಶಕ ವಸಂತ, ಪುರುಷೋತ್ತಮ, ಅಬ್ದುಲ್ ಹಮೀದ್, ಪ್ರಸಾದ್ ಕುಮಾರ್, ವೇದಾವತಿ, ನೀಲಪ್ಪ ಗೌಡ, ರೂಪಲತಾ ಹಾಗೂ ನೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗೀತಾ ಎಸ್. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಚಂದ್ರಶೇಖರ ನಾÊಕ್ ಸ್ವಾಗತಿಸಿ, ವಂದಿಸಿದರು. ಹಾಲು ಪರೀಕ್ಷಕಿ ಗೀತಾ ಸಹಕರಿಸಿದರು.
ಹೈನುಗಾರರು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬೇಕು. ಗುಣಮಟ್ಟದ ಹಾಲನ್ನೇ ಸಂಘಕ್ಕೆ ನೀಡಬೇಕು. ಹಿರಿಯರು ಕಟ್ಟಿ ಬೆಳೆಸಿದ ಸಂಘವನ್ನು ಉಳಿಸಬೇಕಾಗಿದೆ. ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿದೆ. ಸಂಘಕ್ಕೆ ಜಾಗದ ವ್ಯವಸ್ಥೆಯಾಗಿ ಅಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
-ದಾಮೋದರ ಗೌಡ, ಅಧ್ಯಕ್ಷರು