ಸುಬ್ರಹ್ಮಣ್ಯ: ಪಶ್ಚಿಮವಲಯಕ್ಕೆ ಸಂಬಂಧ ಪಟ್ಟ 4 ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಕ್ಷಣ ನಮ್ಮ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸ್ಪಂದಿಸುತ್ತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ. ಯಾವುದೇ ಘಟನೆಗಳು ಸಂಭವಿಸಿದ್ದಲ್ಲಿ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅತೀ ವೇಗವಾಗಿ ಸುದ್ದಿಗಳು ತಿಳಿಯುತ್ತವೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜ ಸೇವೆಯುಳ್ಳವರಾಗಿರುತ್ತಾರೆ ಎಂದು ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್ ಹೇಳಿದರು.
ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಿಬ್ಬಂದಿಗಳೊಂದಿಗೆ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇಶ ವಿದೇಶದಲ್ಲಿ ಪ್ರಸಿದ್ಧವಾದ ಕ್ಷೇತ್ರವಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ನಿತ್ಯ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ನಿಯೋಜನೆ ಬಹಳ ಮುಖ್ಯ. ಇದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು. ಇಲ್ಲಿನ ಸುರಕ್ಷತೆ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲ್ಲಿಗೆ ಹೆಚ್ಚುವರಿ ಸಿಬಂದಿ ನಿಯೋಜಿಸುವ ಬಗ್ಗೆ ಇಲಾಖಾ ಹಂತದಲ್ಲಿ ಪ್ರಸ್ತಾವಿಸಿ, ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಸುಬ್ರಹ್ಮಣ್ಯ ಠಾಣೆಯ ಹೊಸ ಕಟ್ಟಡ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಕಟ್ಟಡ ಉದ್ಘಾಟಿಸಲಾಗುವುದು ಎಂದರು.

ಐಜಿಪಿ ಅಮಿತ್ ಸಿಂಗ್ ಅವರನ್ನು ಎಸ್ಐ ಕಾರ್ತಿಕ್, ಮಹೇಶ್ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಐಜಿಪಿ ಅವರು ಠಾಣೆಯ ದಾಖಲೆ ಪತ್ರಗಳನ್ನು ಕಡತ ಗಳನ್ನು ಪರಿಶೀಲಿಸಿದರು. ಠಾಣೆ ಅಧಿಕಾರಿ ಗಳು, ಸಿಬಂದಿ ಜತೆ ಸಭೆ ನಡೆಸಿ ಮಾರ್ಗದರ್ಶನಗಳನ್ನು ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇದ್ರ ಕುಮಾರ್ ಡಿ.ಎಸ್., ಪುತ್ತೂರು ಉಪವಿಭಾಗ ಡಿವೈಎಸ್ಪಿ ಡಾ| ಅರುಣ್ ನಾಗೇಗೌಡ ಮತ್ತಿತರರಿದ್ದರು.