ಕಿಲ್ಲೆ ಮೈದಾನ ಮಹಾಗಣೇಶೋತ್ಸವ-ಸರ್ವ ಧರ್ಮ ಸಮ್ಮೇಳನ

0

ಸುಂದರ ಸಮಾಜ ನಿರ್ಮಾಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯ-ರಮಾನಾಥ ರೈ

ಪುತ್ತೂರು:ಮನುಷ್ಯ ಮನುಷ್ಯರ ನಡುವಿನ ಅಪನಂಬಿಕೆ, ಅವಿಶ್ವಾಸವನ್ನು ದೂರ ಮಾಡಿ ಮನುಷ್ಯ ಮನುಷ್ಯರ ನಡುವೆ ಪ್ರೀತಿಯನ್ನು ಹೆಚ್ಚು ಮಾಡುವ ಕಾರ್ಯಕ್ರಮದ ಮೂಲಕ ವರ್ತಮಾನ ದಿನದಲ್ಲಿ ಸುಂದರ ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.


ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ಏಳು ದಿನಗಳ ಕಾಲ, ದಿ.ಎನ್.ಸುಧಾಕರ್ ಶೆಟ್ಟಿಯವರ ಪುತ್ರ ಅಭಿಜಿತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ 6ನೇ ದಿನ ಸೆ.12ರಂದು ನಡೆದ ಸರ್ವಧರ್ಮ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪುತ್ತೂರಿನ ದೇವತಾ ಸಮಿತಿಯವರು ಬಹಳ ಸುಂದರವಾಗಿ ಕಾರ್ಯಕ್ರಮ ನೆರವೇರಿಸುತ್ತಾರೆ.ಇದು ಜಿಲ್ಲೆಯಲ್ಲೇ ಹೆಸರು ಪಡೆದ ಉತ್ಸವ. ಈ ಉತ್ಸವದ ಸಾಮಾಜಿಕ ಬದುಕಿನಲ್ಲಿ ಪುತ್ತೂರಿನಲ್ಲಿ ನನಗೆ ಬಹಳ ಹತ್ತಿರದ ವ್ಯಕ್ತಿಯಾಗಿ ಸುಧಾಕರ್ ಶೆಟ್ಟಿ ಇದ್ದರು.ಅವರು ದೇವರ ಪಾದ ಸೇರಿದ್ದರೂ ಅವರ ನೆನಪು ಮತ್ತೆ ಮತ್ತೆ ಆಗುತ್ತಿದೆ ಎಂದ ರಮಾನಾಥ ರೈ ಅವರು, ಇವತ್ತು ಸಮಾಜದ ಎಲ್ಲಾ ಜಾತಿ ಧರ್ಮದವರು ಒಂದಾಗಿರಬೇಕು.ಭೂಮಿ ಮೇಲೆ ಬರುವಾಗ ನಾವು ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟಿದವರಲ್ಲ.ದೇವರು ಕೊಟ್ಟ ಜನ್ಮವನ್ನು ಸಾರ್ಥಕ ಮಾಡುವುದು ನಮ್ಮ ಧರ್ಮ. ಹಾಗಾಗಿ ಕಾರ್ಯಕ್ರಮಗಳಿಗೆ ಎಲ್ಲರೂ ಬರುವಂತಹ ನಡವಳಿಕೆ ಇರಬೇಕು.ಆದರೆ ಕೆಲವು ಕಾರ್ಯಕ್ರಮದಲ್ಲಿ ಅವರು ಬರಬಾರದು,ಇವರು ಬರಬಾರದು ಎನ್ನುವವರೂ ಇದ್ದಾರೆ.ಕಿಲ್ಲೆ ಮೈದಾನದಲ್ಲಿ ನಡೆಯುವ ಗಣೇಶೋತ್ಸವ ಸೌಹಾರ್ದತೆಯ ಕಾರ್ಯಕ್ರಮವಾಗಿದೆ.ಈ ನಿಟ್ಟಿನಲ್ಲಿ ಮುಂದಿನ ಸಮಾಜ ಸುಂದರ, ಸಾಮರಸ್ಯದ ಸಮಾಜ ಆಗಬೇಕು.ಸುಂದರ ಭಾರತ, ಭಾವೈಕ್ಯತೆಯ ಭಾರತ ಆಗಬೇಕೆಂದರು.


ಪರಧರ್ಮವನ್ನೂ ಗೌರವಿಸಬೇಕು:
ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅವರು ಮಾತನಾಡಿ ಅನೇಕ ಧಾರ್ಮಿಕ ಸಭೆ ನಡೆಸುವುದು ಅಲ್ಲಿ ಒಬ್ಬ ಉಪನ್ಯಾಸಕನನ್ನು ಕರೆಯುವುದು.ಹೆಚ್ಚಿನ ಕಡೆಗಳಲ್ಲಿ ಧಾರ್ಮಿಕ ಉಪನ್ಯಾಸದಲ್ಲಿ, ನಮ್ಮ ಧರ್ಮದ ನ್ಯೂನ್ಯತೆ ಬಗ್ಗೆ ಮತ್ತು ಅಳಿದು ಹೋದ ಸಂಸ್ಕೃತಿಯ ಬಗ್ಗೆ ಮಾತನಾಡದೆ ಪರಧರ್ಮವನ್ನು ನಿಂದಿಸುವುದೇ ಆಗಿರುತ್ತದೆ.ಇತ್ತೀಚಿಗಿನ ದಿನದಲ್ಲಿ ಪರಧರ್ಮವನ್ನು ನಿಂದಿಸುವುದೇ ಧಾರ್ಮಿಕ ಉಪನ್ಯಾಸವಾಗಿರುವುದನ್ನು ಕಾಣುತ್ತಿದ್ದೇವೆ.ಈ ರೀತಿಯ ಸಂಪ್ರದಾಯವನ್ನು ನಾನು ವಿರೋಽಸುತ್ತೇನೆ.ನಮ್ಮ ಧರ್ಮವನ್ನು ಹೇಗೆ ಗೌರವದಿಂದ ಕಾಣುತ್ತೇವೆಯೋ ಅಷ್ಟೇ ಪರಧರ್ಮವನ್ನೂ ಗೌರವದಿಂದ ಕಾಣಬೇಕು ಎಂದರು.


ಯಾರೇ ಆಗಲಿ ಇಲ್ಲಿಗೊಮ್ಮೆ ಬಂದು ಹೋಗದೆ ಇರುವುದಿಲ್ಲ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ 67 ವರ್ಷದಲ್ಲಿ ಈ ಗಣೇಶೋತ್ಸವಕ್ಕೆ ಈ ಭಾಗದ ಭಕ್ತರು, ಯಾವುದೇ ಅಽಕಾರಿ, ಉದ್ಯಮಿ, ವ್ಯಾಪಾರಿಗಳಿರಲಿ, ಸಾರ್ವಜನಿಕರಿರಲಿ ಎಲ್ಲರೂ ಒಮ್ಮೆ ಇಲ್ಲಿಗೆ ಬಂದು ಹೋಗದೆ ಇರುವುದಿಲ್ಲ.ಯಾಕೆಂದರೆ ಇಲ್ಲಿನ ಗಣಪತಿಯೇ ವಿಶೇಷ.ಸಾರ್ವಜನಿಕ ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ಆಯಾ ಕೆಲಸಗಳನ್ನು ಮಾಡುವ ಮೂಲಕ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯಲು ಶ್ರೀ ಗಣೇಶನ ಕೃಪೆ ಈ ಭಾಗದ ಎಲ್ಲರಿಗೂ ಇರಲಿ ಎಂದರು.


ನಮ್ಮ ಇಂಡಿಯಾ ಅಪ್ಘಾನ್, ಪಾಕಿಸ್ತಾನ ಆಗಬಾರದು:
ಧಾರ್ಮಿಕ ಉಪನ್ಯಾಸ ನೀಡಿದ ಮುಸ್ಲಿಂ ಧಾರ್ಮಿಕ ಮುಖಂಡ ಎಸ್.ಬಿ.ದಾರಿಮಿ ಅವರು ಮಾತನಾಡಿ ಹಿಂದು ಮುಸ್ಲಿಂ ಕ್ರೈಸ್ತರಲ್ಲಿ ಹಿಂದುಗಳು ನಮ್ಮ ಹಿರಿಯರ ಸ್ಥಾನದಲ್ಲಿ ನಿಲ್ಲುತ್ತಾರೆ. ಯಾಕೆಂದರೆ ಇಲ್ಲಿನ ಮುಸಲ್ಮಾನ, ಕ್ರೈಸ್ತರ ರಕ್ಷಣೆ ಹಿಂದುಗಳ ಕೈಯಲ್ಲಿದೆ.ಬಹುಸಂಖ್ಯಾತರಾಗಿ ಹಿಂದುಗಳಿರುವಾಗ ಅವರ ಆಚಾರ ವಿಚಾರ ಮೇಳೈಸಬೇಕು.ಅದು ಪ್ರಕೃತಿ ಧರ್ಮ.ಅವರು ಪೂರ್ವಿಕ ಹಾದಿಯನ್ನು ಬಿಟ್ಟು ಹೋದಾಗ ಸಮಸ್ಯೆ ಉದ್ಭವಿಸುತ್ತದೆ.ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಇಂತಹ ಗಣೇಶೋತ್ಸವವನ್ನು ಬಾಲಗಂಗಾಧರ ತಿಲಕ್ ಅವರು ವ್ಯಾಪಕವಾಗಿ ಆಚರಿಸಿದರು.ಆ ಸಂದರ್ಭ ಗಣೇಶೋತ್ಸವದಲ್ಲಿ ಜಾತಿ ಮತ ಭೇದವಿರಲಿಲ್ಲ.ಹಿಂದು ಎಂದರೆ ಮತವಲ್ಲ ಅದು ದೇಶದ ಸಂಸ್ಕೃತಿ.ಅದರಲ್ಲಿ ಎಲ್ಲಾ ಜಾತಿ, ಧರ್ಮಗಳು ಸೇರಿಕೊಂಡಿವೆ.ನಮ್ಮ ದೇಶದ ಸೌಂದರ್ಯ ವೈವಿಧ್ಯತೆಯಿಂದ ಕೂಡಿದೆ.ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದುಗಳಿಗೆ ಬಿಡಿ ಮುಸಲ್ಮಾನರಿಗೂ ಬದುಕಲು ಕಷ್ಟ.ಅದು ಅಲ್ಲಿನ ರಕ್ತ ಗುಣ ಏನೂ ಮಾಡಲು ಆಗುವುದಿಲ್ಲ. ಅದೇ ರೀತಿ ಮಲೇಷಿಯ, ಇಂಡೋನೇಷಿಯಗಳಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ. ಎಲ್ಲರಿಗೂ ಸುರಕ್ಷತೆ ಹೆಚ್ಚಿದೆ. ಅದೇ ರೀತಿ ನಮ್ಮ ಇಂಡಿಯಾ ಆಗಬೇಕು. ನಮ್ಮ ಇಂಡಿಯ ಅಪ್ಘಾನ್, ಪಾಕಿಸ್ತಾನ ಆಗಬಾರದು. ನಮಗೆ ಪಾಕಿಸ್ತಾನ, ಅಪ್ಘಾನ್ ಮಾದರಿಯಲ್ಲ.ಅಲ್ಲಿ ಶುಕ್ರವಾರ ನಮಾಜ್ ಮಾಡುವಾಗ ಬಾಂಬ್ ಬೀಳುತ್ತದೆ.ಆದರೆ ಭಾರತದಲ್ಲಿ ನಮಾಜ್ ಮಾಡುವಾಗ ಬಾಂಬ್ ಬಿದ್ದ ಘಟನೆ ಇಲ್ಲಿನ ತನಕ ಆಗಿಲ್ಲ.ಅದು ಇನ್ನೂ ಆಗಬಾರದು.ಅದಕ್ಕೆ ಆಸ್ಪದವೂ ಕೊಡಬಾರದು. ಅದು ರಾಜಕೀಯದವರ ಡೊಂಬರಾಟ ಮಾಡಲು ಬಿಡಬಾರದು.ನಮ್ಮ ಇಂಡಿಯಾ ಇಂಡಿಯಾ ಆಗಿಯೇ ಉಳಿಯಬೇಕು ಎಂದರು.


ಎಲ್ಲಾ ಧರ್ಮಗಳು ಶಾಂತಿಯ ಸಂದೇಶವನ್ನೇ ಕೊಡುತ್ತವೆ:
ಮಾಯಿದೆ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು -|ಲೋಹಿತ್ ಅಜೇಯ್ ಮಸ್ಕರೇನ್ಹಸ್ ಎಲ್ಲಾ ಧರ್ಮಗಳು ನಮಗೆ ಶಾಂತಿ ಸಂದೇಶ ಕೊಡುತ್ತವೆ. ಧರ್ಮ ಇರುವುದು ನಮ್ಮನ್ನು ಮನುಷ್ಯನನ್ನಾಗಿ, ನಾಗರಿಕರನ್ನಾಗಿ ಮಾಡಲು ಮತ್ತು ಒಳ್ಳೆಯ ಸಮಾಜ ಕಟ್ಟಲು.ಯಾವ ಧರ್ಮವೂ ಕೆಡುಕುಂಟು ಮಾಡುವುದಿಲ್ಲ.ಎಲ್ಲಾ ಧರ್ಮದಲ್ಲೂ ಒಳ್ಳೆಯ ವಿಚಾರವನ್ನು ಒಟ್ಟಿಗೆ ಸೇರಿಸಿದಾಗ ನಮ್ಮ ದೇಶ ಪ್ರಗತಿಯ ಕಡೆಗೆ ಹೋಗುತ್ತದೆ. ಏಸುಕ್ರಿಸ್ತರು ಪ್ರೀತಿ ಮತ್ತು ಕ್ಷಮೆ ಎಂಬ ಎರಡು ಗುಣಗಳು ನಮ್ಮಲ್ಲಿರುವಂತೆ ತಿಳಿಸಿದ್ದಾರೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಅಹಿತಕರ ಘಟನೆ ನಡೆಯುವುದಿಲ್ಲ. ಶತ್ರುತ್ವದ ಮನೋಭಾವ ದೂರವಾಗಿ ಉತ್ತಮ ಸಂಬಂಧಗಳು ಬೆಳೆಯುತ್ತದೆ. ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಅದಕ್ಕಾಗಿ ನಮ್ಮ ಜೀವನದಲ್ಲಿ ಸಹಿಷ್ಣುತೆ, ಕ್ಷಮೆಯ ಮನೋಭಾವನೆ ಇದ್ದಾಗ ನಾವು ಎಲ್ಲಾ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುತ್ತೇವೆ ಎಂದರು.


ಎಲ್ಲಾ ಧರ್ಮದಲ್ಲೂ ಸಮಸ್ಯೆಯಿದೆ ಅದನ್ನು ಪ್ರಾಮಾಣಿಕವಾಗಿ ಒಪ್ಪಬೇಕು:
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಕಿಲ್ಲೆ ಮೈದಾನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ ನಿಜವಾದ ಸಮಾಜೋತ್ಸವ. ಇದು ಎಲ್ಲಾ ಕಡೆ ಆಗಬೇಕು.ಇಂತಹ ಪರಿವರ್ತನೆಗೆ ತುಂಬ ಸಮಯ ತೆಗೆದುಕೊಳ್ಳುತ್ತದೆ ಎಂದ ಅವರು ಮೌಲ್ಯಗಳು ಒಂದೇ.ಆಚರಣೆಗಳಿಂದಾಗಿ ಮೂರು ಧರ್ಮಗಳು ಬೇಕಾದಷ್ಟು ಡ್ಯಾಮೇಜುಗಳನ್ನು ಅವರೊಳಗೆ ಮತ್ತು ಇನ್ನೊಬ್ಬರಿಗೂ ಮಾಡಿದೆ ಎಂಬುದನ್ನು ಒಪ್ಪಲೇ ಬೇಕು.ಹಿಂದು,ಮುಸಲ್ಮಾನ,ಕ್ರೈಸ್ತ ಧರ್ಮ ಪ್ಯೂರ್ ಆಗಿದೆ.ಆದರೆ ತುಂಬಾ ಸಮಸ್ಯೆ ಇದೆ. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಅದು ಒಳಗೆ ಹುಣ್ಣು ಇದ್ದಾಗ ಅದಕ್ಕೆ ಔಷಽ ತೆಗೆದುಕೊಳ್ಳದೆ ಹೋದರೆ ಹೊರಗಡೆ ಲೇಪ ಹಾಕಿದ ಹಾಗೆ ಆಗುತ್ತದೆ.ಆ ರೀತಿಯಲ್ಲಿ ಸಮಸ್ಯೆಗಳಿವೆ. ನಮ್ಮ ಸಭೆಯಲ್ಲಿ ಇಂಥವರು ಭಾಗವಹಿಸಬಾರದು ಎಂದು ಹೇಳಲು ಹೊರಟರೆ ನಾವು ಮತ ಆಗುತ್ತೇವೆ. ನಾವು ಧರ್ಮ ಆಗುವುದಿಲ್ಲ.ಮತ ಅಂದರೆ ಅಭಿಪ್ರಾಯ. ಹಾಗಾಗಿ ಅಭಿಪ್ರಾಯ ಬಿಟ್ಟು ನಾವು ಮೌಲ್ಯವನ್ನು ಸಂಘಟಿಸಬೇಕು.ಭಾರತದಲ್ಲಿ ಶೇ.90 ಹಿಂದುಗಳು ಸರ್ವಧರ್ಮ ಸಮಭಾವವನ್ನು ಅಪೇಕ್ಷೆ ಪಡುವವರು ಆಗಿರುವ ಕಾರಣ ಇಲ್ಲಿ ಕ್ರೈಸ್ತರು, ಮುಸಲ್ಮಾನರು ನೆಮ್ಮದಿಯಲ್ಲಿದ್ದಾರೆ.ನಮ್ಮ ಧರ್ಮದ ಹೆಸರಿನಲ್ಲಿ ತಪ್ಪು ಮಾಡಿದರೆ ಅದನ್ನು ತಪ್ಪು ಎಂದು ಹೇಳಬೇಕು. ಇನ್ನೊಂದು ಧರ್ಮವನ್ನು ವೇದಿಕೆಯಲ್ಲಿ ಬೈಯುತ್ತಿದ್ದಾಗ ನಾವು ಅದನ್ನು ಪ್ರಶ್ನೆ ಮಾಡದಿದ್ದರೆ ನಮ್ಮ ಧರ್ಮದ ಕುರಿತು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ.ಹಾಗಾಗಿ ತಪ್ಪನ್ನು ತಪ್ಪು ಎಂದು ಹೇಳಬೇಕು ಎಂದರು.ಶ್ರೀ ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ,ಅತಿಥಿಗಳನ್ನು ಗೌರವಿಸಿದರು.ಶರಣ್ಯ ಮತ್ತು ಶ್ರಾವಣ್ಯ ರೈ ಅವರು ಪ್ರಾರ್ಥಿಸಿದರು.ಕಾರ್ಯಕ್ರಮ ಸಂಯೋಜಕ ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಡಾ| ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ದೇವತಾ ಸಮಿತಿಯ ದಿನೇಶ್ ಪಿ.ವಿ ಮತ್ತು ಸುದೇಶ್ ಚಿಕ್ಕಪುತ್ತೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ನಾಗಮಂಗಲದಲ್ಲಿ ನಡೆದ ಘಟನೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು
ನಾಗಮಂಗಲದಲ್ಲಿ ಆದ ಘಟನೆ ನೋಡಿ ಬೇಸರ ಆಗಿದೆ.ಆದರೆ ಯಾರೇ ಆಗಲಿ ತಪ್ಪಿತಸ್ಥರನ್ನು ಜೈಲಿಗೆ ಹಾಕಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಈ ಸಭೆಯಲ್ಲಿ ಸರಕಾರಕ್ಕೆ ಮನವಿ ಮಾಡುತ್ತೇನೆ.ಇವತ್ತು ಶಾಂತಿ ಕದಡಿದರೆ ಎಲ್ಲರಿಗೂ ತೊಂದರೆ. ಸ್ವಲ್ಪ ದಿನ ಕಳೆದರೆ ಮಿಲಾದ್ ರ‍್ಯಾಲಿ ಹೋಗುತ್ತದೆ ಅದಕ್ಕೆ ಕಲ್ಲು ಬಿದ್ದರೆ ಏನು ಮಾಡುವುದು?ಎಲ್ಲರಿಗೂ ಅವರವರ ಧರ್ಮದ ಮೆರವಣಿಗೆ ಮಾಡಲು ಎಲ್ಲರೂ ಸೇರಿ ಅವಕಾಶ ಮಾಡಿಕೊಡಬೇಕು.ದಕ್ಷಿಣ ಕನ್ನಡದಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ ನೀಡಿ ಶೋಭಾಯಾತ್ರೆಗೆ ನಾವು ಸ್ವಾಗತಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವತ್ತೂ ಗಣೇಶ ಶೋಭಾಯಾತ್ರೆಗ ಕಲ್ಲು ಎಸೆದ ಇತಿಹಾಸ ಇಲ್ಲ.ಆದ್ದರಿಂದ ಎಲ್ಲೋ ಒಂದು ಕಡೆ ಕಹಿ ಘಟನೆ ಆಗಿದೆ.ಅದನ್ನು ಇಡೀ ಸಮಾಜದ ಮೇಲೆ ದೂಷಿಸುವುದು ಬಹಳ ಶೋಚನೀಯ ವಿಚಾರ.
ಇತರ ಸಮುದಾಯದವರು ಆರಾಧಿಸುವ ಮೂರ್ತಿಗೆ ಯಾವುದೇ ಅಪಹಾಸ್ಯ ಆಗಲೀ,ನಿಂದನೆಯಾಗಲಿ ಮಾಡಕೂಡದು ಎಂದು ಖುರಾನ್‌ನಲ್ಲೇ ಇದೆ.ಅದೇ ರೀತಿ ತೊಂದರೆಗೀಡಾದವರಿಗೆ ಸಾದ್ಯವಾದಷ್ಟು ಒಳಿತನ್ನು ಮಾಡಬೇಕೆಂದು ಖುರಾನ್‌ನಲ್ಲಿದೆ.ಈ ಕುರಿತು ಯಾರಿಗಾದರೂ ಸಂಶಯ ಇದ್ದರೆ ನಾನು ತೋರಿಸಿಕೊಡಲು ಸಿದ್ದನಿದ್ದೇನೆ
ಎಸ್.ಬಿ.ದಾರಿಮಿ

LEAVE A REPLY

Please enter your comment!
Please enter your name here