ಸ್ವ ಉದ್ಯೋಗ, ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಲಿ: ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ
ಕಡಬ: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಸಮೀಪ ನೂತನವಾಗಿ ನಿರ್ಮಾಣಗೊಂಡ ಲಕ್ಷ್ಮೀರಾಮ ಕಾಂಪ್ಲೆಕ್ಸ್ ಹಾಗೂ ಜಿ.ಎಲ್.ಕಾಂಪ್ಲೆಕ್ಸ್ ಸೆ.16ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ನೂತನ ಕಟ್ಟಡ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಒಳ್ಳೆಯ ಯೋಚನೆ ಹಾಗೂ ಯೋಜನೆ ಹಾಕಿಕೊಂಡು ರಾಮಣ್ಣ ಗೌಡ ಹಾಗೂ ಗೋಪಣ್ಣ ಗೌಡ ಸಹೋದರರೂ ಸೇರಿಕೊಂಡು ಆಲಂಕಾರಿನಲ್ಲಿ ಅತ್ಯುತ್ತಮ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದು ಆಲಂಕಾರು ಪೇಟೆಯ ಅಭಿವೃದ್ಧಿಯ ಜೊತೆಗೆ ಕಡಬ ತಾಲೂಕಿಗೂ ಶಕ್ತಿ ತುಂಬಲಿದೆ. ಸಾಕಷ್ಟೂ ಜನರಿಗೆ ಸ್ವಾವಲಂಬಿ ಜೀವನ ನಡೆಸಲು ಈ ಕಾಂಪ್ಲೆಕ್ಸ್ ಸಹಕಾರಿಯಾಗಲಿದೆ. ಗುರು, ದೈವ, ದೇವರ ಆಶೀರ್ವಾದದೊಂದಿಗೆ ಪ್ರಾಮಾಣಿಕವಾಗಿ ದುಡಿಯುವ ಚೈತನ್ಯವೂ ಇರಬೇಕು. ಇಲ್ಲಿ ವ್ಯಾಪಾರ ಮಾಡುವವರ ಅಭಿವೃದ್ಧಿಯೊಂದಿಗೆ ರಾಮಣ್ಣ ಹಾಗೂ ಗೋಪಣ್ಣ ಗೌಡರವರ ಅವಿಭಕ್ತ ಕುಟುಂಬವೂ ಬೆಳೆಯಲಿ ಎಂದು ನುಡಿದರು.
ಅತಿಥಿಯಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು ಅವರು ಮಾತನಾಡಿ, ಕೃಷಿಯ ಜೊತೆಗೆ ಕೃಷಿಕನ ಬದುಕೂ ಸಮಾಜಕ್ಕೆ ಪರಿಚಯಿಸುವ ಕೆಲಸ ಆಗಬೇಕು. ಹಳ್ಳಿಯ ಕೃಷಿಕರಿಂದಲೇ ಪೇಟೆ ಬೆಳೆಯುವುದರೊಂದಿಗೆ ಸಮಾಜದಲ್ಲಿ ಪರಿವರ್ತನೆಯನ್ನೂ ಕಾಣಬಹುದಾಗಿದೆ. ಕೃಷಿಕರು ಹಳ್ಳಿಯನ್ನು ಪೇಟೆಯಾಗಿ ಪರಿವರ್ತಿಸುವುದರ ಜೊತೆಗೆ ಸಾಕಷ್ಟೂ ಮಂದಿಗೆ ಉದ್ಯೋಗ ನೀಡಿದ್ದಾರೆ. ಇದಕ್ಕೆ ಲಕ್ಷ್ಮೀರಾಮ ಮತ್ತು ಜಿ.ಎಲ್.ಕಾಂಪ್ಲೆಕ್ಸ್ ಸಹ ಪ್ರೇರಣೆಯಾಗಿದೆ. ಯುವಕರು ಸ್ವ ಉದ್ಯೋಗಿಗಳಾಗಿ ಒಂದಷ್ಟು ಜನರಿಗೆ ಉದ್ಯೋಗ ನೀಡಬೇಕು. ಇದರಿಂದ ಊರು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಇನ್ನೋರ್ವ ಅತಿಥಿ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ಚಿದಾನಂದ ಬೈಲಾಡಿ ಅವರು ಮಾತನಾಡಿ, ಸಹೋದರರು ಸೇರಿಕೊಂಡು ಹೊಸ ಕಾಂಪ್ಲೆಕ್ಸ್ ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ಹೊಸ ಸಂದೇಶ ಕೊಡುವ ಕೆಲಸ ಮಾಡಿದ್ದಾರೆ. ಇವರ ಕೀರ್ತಿಯೊಂದಿಗೆ ಇಲ್ಲಿ ವ್ಯಾಪಾರ ಮಾಡುವವರ ಕೀರ್ತಿಯೂ ಬೆಳೆಯಲಿ. ಆಲಂಕಾರು ಪೇಟೆಯೂ ಅಭಿವೃದ್ಧಿಯಾಗಲಿ ಎಂದರು.
ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ, ಒಳ್ಳೆಯ ಮನಸ್ಸು ಮತ್ತು ಅರ್ಪಣಾ ಮನೋಭಾವ ಇದ್ದಾಗ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ. ಯುವಕರು ಸರಕಾರಿ ಉದ್ಯೋಗ ಬಯಸದೇ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಪರವೂರಿಗೆ ಹೋಗುವುದು ತಪ್ಪುತ್ತದೆ ಎಂದು ಹೇಳಿದ ಅವರು, ಈ ಕಟ್ಟಡದಲ್ಲಿ ವ್ಯವಹಾರ ಮಾಡುವ ಎಲ್ಲರೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಕೆ.ಮಾತನಾಡಿ, ಆಲಂಕಾರು ಪೇಟೆಯಲ್ಲಿ ಅತ್ಯುತ್ತಮವಾಗಿ ನಿರ್ಮಾಣಗೊಂಡಿರುವ ಲಕ್ಷ್ಮೀರಾಮ ಹಾಗೂ ಜಿ.ಎಲ್.ಕಾಂಪ್ಲೆಕ್ಸ್‌ನ ಮಾಲಕರಿಗೂ ಇಲ್ಲಿ ವ್ಯವಹಾರ ಮಾಡುವ ಎಲ್ಲರಿಗೂ ದೇವರ ಅನುಗ್ರಹ ಸಿಗಲಿ ಎಂದು ಶುಭಹಾರೈಸಿದರು.
ಗೌರವಾರ್ಪಣೆ:
ಸ್ವಾಮೀಜಿಯವರಿಗೆ ಕಾಂಪ್ಲೆಕ್ಸ್‌ನ ಮಾಲಕರಾದ ಗೋಪಣ್ಣ ಗೌಡ-ಲೀಲಾವತಿ ದಂಪತಿ ಕೊರಂಬಾಡಿ, ರಾಮಣ್ಣ ಗೌಡ-ಲಕ್ಷ್ಮೀ ಪಿ.ದಂಪತಿ ದೋಳ ನೆಕ್ಕರೆ ಅವರು ತುಳಸಿ ಮಾಲಾರ್ಪಣೆ ಮಾಡಿ ಫಲತಾಂಬೂಲ ನೀಡಿ ಗೌರವಾರ್ಪಣೆ ಮಾಡಿದರು. ಕಟ್ಟಡದ ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಹಾಗೂ ಗುತ್ತಿಗೆದಾರರಾದ ಮನೋಹರ್ ಅವರನ್ನು ಕಟ್ಟಡದ ಮಾಲಕರ ಪರವಾಗಿ ಸ್ವಾಮೀಜಿ ಗೌರವಿಸಿದರು.
ಜಿ.ಎಲ್.ಕಾಂಪ್ಲೆಕ್ಸ್‌ನ ಮಾಲಕರಾದ ಗೋಪಣ್ಣ ಗೌಡ, ಲೀಲಾವತಿ ಗೋಪಣ್ಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮಿರಾಮ ಕಾಂಪ್ಲೆಕ್ಸ್‌ನ ಮಾಲಕ, ಶಿಕ್ಷಕರೂ ಆದ ರಾಮಣ್ಣ ಗೌಡ ಸ್ವಾಗತಿಸಿದರು. ಜಿ.ಎಲ್.ಕಾಂಪ್ಲೆಕ್ಸ್‌ನ ಮಾಲಕ ಯತೀಶ್ ಗೌಡ ವಂದಿಸಿದರು. ಲಕ್ಷ್ಮೀ ಪಿ.ಕಾರ್ಯಕ್ರಮ ನಿರೂಪಿಸಿದರು. ಚಂಚಲ, ಕಾವ್ಯಶ್ರೀ, ದೀಕ್ಷಾ ಪ್ರಾರ್ಥಿಸಿದರು. ಆಲಂಕಾರಿನ ವರ್ತಕರು, ವಿವಿಧ ಸಂಘಟನೆಗಳ ಮುಖಂಡರು ಆಗಮಿಸಿ ಶುಭಹಾರೈಸಿದರು. ನೂತನ ಕಟ್ಟಡದ ಜೊತೆಗೆ ಕಟ್ಟಡದಲ್ಲಿ ಹೊಸದಾಗಿ ಆರಂಭಗೊಂಡ ಸೃಜನ್ ಸೆಲೂನು, ದಿ.ಪವರ್ ಪ್ಲಸ್ ಹಾಗೂ ಮಿತ್ರ ಎಂಬ್ರಾಯಿಡರಿ ಮಳಿಗೆಯನ್ನೂ ಸ್ವಾಮೀಜಿ ಉದ್ಘಾಟಿಸಿದರು.