ಪುತ್ತೂರು: ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕೇಂದ್ರ ರಕ್ಷಣಾ ಸಂಶೋಧನಾ ವಿಭಾಗದ ಮಾಜಿ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಡಾ.ಕಲಾಂ ಅವರ ಶಿಷ್ಟಾಚಾರ ಅಧಿಕಾರಿಯಾಗಿದ್ದ ಜಯಪ್ರಕಾಶ್ ರಾವ್.ಕೆ [ಜಯಪ್ರಕಾಶ್ ಪುತ್ತೂರು ] ಇವರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನಾಗರಿಕ ಶಿಸ್ತು ಹಾಗೂ ದೇಶಪ್ರೇಮ ಎಂಬ ವಿಚಾರದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ನಮ್ಮ ದೇಶದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಪಡೆಯುವಲ್ಲಿ ವಿದ್ಯಾರ್ಥಿಗಳು ದೊಡ್ಡ ಪಾತ್ರ ವಹಿಸಬೇಕಾಗಿದೆ . ಅದರಿಂದ ದೇಶದಿಂದ ಆಗುತ್ತಿರುವ ನಿರ್ಯಾತದ ದೊಡ್ಡ ಮೊತ್ತವನ್ನು ಉಳಿಸಬಹುದು. ಆಗ ನಿಜವಾದ ಸ್ವಾವಲಂಬನೆ ಸಾಧಿಸಿ ತಲೆ ಏತ್ತಿ ನಿಂತು ಮುಂದೊಂದು ದಿನ ಇಡೀ ವಿಶ್ವದಲ್ಲಿ ಸೂಪರ್ ಪವರ್ ಸ್ಥಾನ ಪಡೆಯಬಹುದು. ಹೀಗಾಗಿ ಕಲಿಕೆಯಲ್ಲಿಯೇ ದೇಶಕ್ಕಾಗಿ ಪಣ ತೊಟ್ಟು ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಜನೆ ,ಸೈನ್ಯದಲ್ಲಿ ಸೇವೆ ಮಾಡುವ ಆಸಕ್ತಿ ಹಾಗೂ ನಾಗರಿಕ ಶಿಸ್ತು ಮತ್ತು ದೇಶ ಭಕ್ತಿಯನ್ನು ಬೆಳಸಿಕೊಳ್ಳಬೇಕಾಗಿದೆ ಎಂದರು.
ಚಂದ್ರ ಶೇಖರ ನಾಯರ ಅವರ ಹಿರಿತನದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ಗಣ್ಯರು ಜಯಪ್ರಕಾಶ್ ರಾವ್.ಕೆ ರನ್ನು ಸನ್ಮಾನಿಸಿದರು. ವೆಂಕಟೇಶ ಶರ್ಮ ನೆರವಿನಿಂದ ಏರ್ಪಟ್ಟ ಸಭೆಯನ್ನು ಕನ್ನಡ ಶಿಕ್ಷಕ ಅರವಿಂದ ಸ್ವಾಗತಿಸಿದರು. ಶಿಕ್ಷಕ ಸುಬ್ರಹ್ಮಣ್ಯ ವಂದಿಸಿದರು.