ಗಾಂಧಿಗ್ರಾಮ ಪುರಸ್ಕಾರ: ತಾತ್ಕಾಲಿಕ ಪಟ್ಟಿಯಲ್ಲಿ ಕೋಡಿಂಬಾಡಿ, ಆಲಂಕಾರು ಗ್ರಾ.ಪಂ. ಹೆಸರು

0

ಪುತ್ತೂರು: 2023-24ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಡುಗಡೆಗೊಂಡಿರುವ ತಾತ್ಕಾಲಿಕ ಪಟ್ಟಿಯಲ್ಲಿ ಪತ್ತೂರು ತಾಲೂಕಿನ ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಆಲಂಕಾರು ಗ್ರಾಮ ಪಂಚಾಯತ್‌ಗಳು ಸ್ಥಾನ ಪಡೆದುಕೊಂಡಿದೆ.


ದ.ಕ. ಜಿಲ್ಲಾ ಪಂಚಾಯತ್‌ನ(ತಾಲೂಕು ನೋಡಲ್ ಅಧಿಕಾರಿಗಳು) ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನೀಡಿದ ವರದಿಯಂತೆ ದ.ಕ. ಜಿಲ್ಲೆಯಿಂದ ಒಟ್ಟು 9 ಗ್ರಾಮ ಪಂಚಾಯತ್‌ಗಳ ಹೆಸರುಗಳನ್ನು ಆಯ್ಕೆ ಮಾಡಿ ತಾತ್ಕಾಲಿಕ ಪಟ್ಟಿಯಲ್ಲಿ ಪ್ರಕಟಿಸಲಾಗಿದ್ದು ಈ ಬಗ್ಗೆ ಸಾರ್ವಜನಿಕ ಆಕ್ಷೇಪಣೆಗಳಿದ್ದಲ್ಲಿ ಸೆ.29ರ ಬೆಳಿಗ್ಗೆ 11 ಗಂಟೆಯೊಳಗೆ ದ.ಕ. ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಪುತ್ತೂರು ತಾಲೂಕಿನಲ್ಲಿ ಆರ್ಯಾಪು, ಕೋಡಿಂಬಾಡಿ, ಬನ್ನೂರು, ನಿಡ್ಪಳ್ಳಿ ಹಾಗೂ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್‌ಗಳು ಈ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದವು. ಈ ಪೈಕಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಒಟ್ಟು 842 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಗಾಂಧಿ ಗ್ರಾಮ ಪುರಸ್ಕಾರದ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಕಡಬ ತಾಲೂಕಿನಲ್ಲಿ ಆಲಂಕಾರು, ಕುಟ್ರುಪ್ಪಾಡಿ, ಎಡಮಂಗಲ, ಸುಬ್ರಹ್ಮಣ್ಯ ಮತ್ತು ಕೊಂಬಾರು ಗ್ರಾಮ ಪಂಚಾಯತ್‌ಗಳು ಈ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದವು. ಈ ಪೈಕಿ ಒಟ್ಟು 651 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಆಲಂಕಾರು ಗ್ರಾಮ ಪಂಚಾಯತ್ ಈ ಪ್ರತಿಷ್ಠಿತ ಪುರಸ್ಕಾರದ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ದ.ಕ. ಜಿಲ್ಲೆಯಿಂದ ಒಟ್ಟು 9 ಗ್ರಾಮ ಪಂಚಾಯತ್‌ಗಳು ಗಾಂಧಿ ಗ್ರಾಮ ಪುರಸ್ಕಾರದ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು ಮಂಗಳೂರು ತಾಲೂಕಿನ ನೀರುಮಾರ್ಗ ಗ್ರಾ.ಪಂ, ಮೂಡಬಿದ್ರೆ ತಾಲೂಕಿನ ಪಡುಮಾರ್ನಾಡು ಗ್ರಾ.ಪಂ., ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾ.ಪಂ., ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾ.ಪಂ., ಕಡಬ ತಾಲೂಕಿನ ಆಲಂಕಾರು ಗ್ರಾ.ಪಂ., ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾ.ಪಂ., ಸುಳ್ಯ ತಾಲೂಕಿನ ಕಳಂಜ ಗ್ರಾ.ಪಂ., ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾ.ಪಂ. ಹಾಗೂ ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತ್ ಈ ಪುರಸ್ಕಾರದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here