ಉಪ್ಪಿನಂಗಡಿ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಾಗಿ ಮೊದಲೇ ರಸ್ತೆ ಗುಂಡಿಗಳು, ಕೆಸರು, ಧೂಳು, ಚರಂಡಿ ಅವ್ಯವಸ್ಥೆಯಿಂದ ಜನತೆ ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲೇ ಸುಸ್ಥಿತಿಯಲ್ಲಿದ್ದ ಚರಂಡಿಗೆ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ಮಣ್ಣು ಹಾಕುವ ಮೂಲಕ ಚರಂಡಿಯಲ್ಲಿ ಮಲೀನ ನೀರು ನಿಲ್ಲುವಂತೆ ಮಾಡಿದ್ದಾರೆ ಎಂಬ ಆರೋಪ ಉಪ್ಪಿನಂಗಡಿಯಲ್ಲಿ ವ್ಯಕ್ತವಾಗಿದೆ.
ಇಲ್ಲಿನ ಸಿಟಿಲ್ಯಾಂಡ್ ಹೊಟೇಲ್ ಬಳಿಯ ರಸ್ತೆಯ ಬದಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆ ಕೆಎನ್‌ಆರ್ ಕಾಂಕ್ರೀಟ್ ಚರಂಡಿ ನಿರ್ಮಿಸಿತ್ತು. ಈ ಚರಂಡಿ ಸುಸ್ಥಿತಿಯಲ್ಲಿ ಇದ್ದುದರಿಂದ ಸುಮಾರು ನೂರು ಮೀಟರ್ ದೂರದ ಮಲೀನ ನೀರು, ಮಳೆ ನೀರು ಈ ಚರಂಡಿಯಲ್ಲಿ ಹರಿದು ಮುಂದಕ್ಕೆ ಸಾಗುತ್ತಿತ್ತು. ಆದರೆ ಇದೇ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯ ಸಿಬ್ಬಂದಿ ರಸ್ತೆ ಕಾಮಗಾರಿ ನಡೆಸುವಾಗ ಅದರ ಉಳಿಕೆ ಮಣ್ಣನ್ನು ಈ ಚರಂಡಿಗೆ ಹಾಕಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದೆ. ಇದರಿಂದಾಗಿ ಚರಂಡಿಯಲ್ಲಿ ಸರಾಗ ನೀರಿನ ಹರಿಯುವಿಕೆಗೆ ತಡೆಯಾಗಿದ್ದು, ನೀರು ಮುಂದಕ್ಕೆ ಹರಿಯಲು ಸಾಧ್ಯವಾಗದೇ ಅಲ್ಲೇ ನಿಲ್ಲುವಂತಾಗಿದೆ. ಮಲೀನ ಹಾಗೂ ಮಳೆ ನೀರು ನಿಂತು ಪರಿಸರದ ದುರ್ವಾಸನೆಗೆ ಕಾರಣವಾಗಿದೆಯಲ್ಲದೇ, ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ.