ಸಾಲ ಮರುಪಾವತಿ ಮಾಡುವಂತೆ ಸೂಚನೆ ನೀಡಲು ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಆರೋಪ – ಸಂತ್ರಸ್ತೆಯಿಂದ ಪ್ರತಿ ದೂರು

0

ʼಮಾನಭಂಗಕ್ಕೆ ಪ್ರಯತ್ನಿಸಿದ ವಿಚಾರಕ್ಕೆ ಸಂಬಂಧಿಸಿ ದೂರು ನೀಡಿದರೆ ಕರ್ತವ್ಯಕ್ಕೆ ಅಡ್ಡಿ, ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆಂದು ದೂರು ನೀಡಿ ನಿಮ್ಮನ್ನು ಒಳಗೆ ಹಾಕುವುದಾಗಿ ಬೆದರಿಕೆʼ – ಸಂತ್ರಸ್ತೆ

ಪುತ್ತೂರು: ಮಾಡಿದ ಸಾಲವನ್ನು ಮರುಪಾವತಿ ಮಾಡುವಂತೆ ಸೂಚನೆ ನೀಡಲು ಮನೆಯೊಂದಕ್ಕೆ ಹೋದ ಬ್ಯಾಂಕ್ ಸಿಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ, ʼಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಾಲ ತೀರಿಸುವ ಬದಲು ನಮ್ಮೊಂದಿಗೆ ಬರಬೇಕೆಂದು ಮಾನಭಂಗಕ್ಕೆ ಯತ್ನಿಸಿದ ಹಾಗೂ ದೂರು ನೀಡಿದರೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆಂದು ದೂರು ನೀಡಿ ನಿಮ್ಮನ್ನು ಒಳಗೆ ಹಾಕುತ್ತೇವೆ ಎಂದು ಬೆದರಿಸಿದ್ದಾರೆಂದುʼ ಮನೆಯಲ್ಲಿದ್ದ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.

ಮನೆಯಲ್ಲಿದ್ದ ಮಹಿಳೆಯ ದೂರು:
ಘಟನೆಗೆ ಸಂಬಂಧಿಸಿ ಬಲ್ನಾಡು ಉಜುರಪಾದೆ ನಿವಾಸಿ ಕೀರ್ತಿ ಅಖಿಲೇಶ್ ಅವರು ನೀಡಿದ ದೂರಿನಂತೆ ಪೊಲೀಸರು ಬ್ಯಾಂಕ್‌ನ ಮೂವರು ಸಿಬ್ಬಂದಿಗಳ ವಿರುದ್ಧ ದೂರು ಸ್ವೀಕರಿಸಿದ್ದಾರೆ. ಸೆ.25ರ ಮಧ್ಯಾಹ್ನ ಗಂಟೆ 3ಕ್ಕೆ ಗಂಡಸರು ಇಲ್ಲದ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದಲ್ಲದೆ ವಿಚಾರಿಸಿದಾಗ ತಮ್ಮ ಗುರುತು ಪರಿಚಯ ನೀಡದೆ ನಮಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ಮನೆಯನ್ನು ಜಪ್ತಿ ಮಾಡಿ ನಿಮ್ಮನ್ನು ಬೀದಿಗೆ ಎಳೆಯುತ್ತೇವೆ ಎಂದು ಹೆದರಿಸಿ ಆರೋಪಿಗಳ ಪೈಕಿ ಚೈತನ್ಯ ಮತ್ತು ಆಕಾಶ್ ಎಂಬವರು ನಿಮ್ಮ ಲೋನ್ ತೀರಿಸುವ ಬದಲು ನಮ್ಮೊಂದಿಗೆ ಬಂದರೆ ಸಾಕು ಎಂದು ಹೇಳಿ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಇನ್ನೋರ್ವ ಆರೋಪಿ ದಿವ್ಯಾಶ್ರೀ ಎಂಬವರು ಇಬ್ಬರು ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ.

ಘಟನೆಯನ್ನು ನೋಡಿದ ಕೀರ್ತಿ ಅವರ ಅತ್ತೆ, ಅಖಿಲೇಶ್ ಅವರಿಗೆ ಕರೆ ಮಾಡಿದ ವಿಚಾರ ತಿಳಿಸಿದ್ದಾರೆ. ಅಖಿಲೇಶ್ ಅವರು ಬಂದು ವಿಚಾರಿಸಿದಾಗ ನಾವು ಎಸ್‌ಬಿಐ ಬ್ಯಾಂಕ್‌ನ ಪುತ್ತೂರು ಶಾಖೆಯ ಸಿಬ್ಬಂದಿಗಳೆಂದು ತಿಳಿಸಿದ್ದಾರೆ. ದೂರುದಾರೆ ಕೀರ್ತಿ ಅವರ ಸಂಸ್ಥೆಯ ಸಿಬ್ಬಂದಿಗಳ ಸಂಬಳ, ಖಾತೆ, ಓ.ಡಿ ಮತ್ತು ಇನ್ನಿತರ ವ್ಯವಹಾರಗಳು ಎಸ್‌ಬಿಐ ಬ್ಯಾಂಕಿನೊಂದಿಗೆ ನಡೆಯುತ್ತಿದ್ದು, ಬ್ಯಾಂಕಿನ ವ್ಯವಹಾರಗಳು ಶೋರೂಮ್‌ನಲ್ಲಿ ಗಂಡ ಅಖಿಲೇಶ್ ಅವರ ಜೊತೆಯಲ್ಲಿ ಆಗುತ್ತಿದೆ.

ಆದರೆ ಈ ಬಾರಿ ಬ್ಯಾಂಕಿನವರು ಯಾವುದೇ ಪೂರ್ವಭಾವಿ ನೋಟೀಸ್ ನೀಡದೆ ಸಕಾರವಣವಿಲ್ಲದೆ ಮನೆಗೆ ಅಕ್ರಮ ಪ್ರವೇಶ ಮಾಡಿ ಕಾನೂನ ಬಾಹಿರವಾಗಿ ದೂರುದಾರರಿಗೆ ಕಿರಿಕಿರಿ ಉಂಟು ಮಾಡಿ ಅವಾಚ್ಯವಾಗಿ ಬೈದು ಮನಬಂದಂತೆ ಅಸಭ್ಯವಾಗಿ ವರ್ತಿಸಿ, ಮಾನಭಂಗಕ್ಕೆ ಪ್ರಯತ್ನಿಸಿದ ವಿಚಾರಕ್ಕೆ ಸಂಬಂಧಿಸಿ ದೂರು ನೀಡಿದರೆ ಕೀರ್ತಿ ಅವರ ಗಂಡ ಅಖಿಲೇಶ್ ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಮತ್ತು ಪಿಸ್ತೂಲ್ ತೋರಿಸಿದ್ದಾರೆ ಎಂದು ದೂರು ಕೊಟ್ಟು, ನಿಮ್ಮನ್ನೆಲ್ಲ ಒಳಗೆ ಹಾಕಿಸುವುದಾಗಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರು ದಾರೆ ಕೀರ್ತಿ ಅವರು ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here