5.76 ಲಕ್ಷ ರೂ.ನಿವ್ವಳ ಲಾಭ; ಶೇ.13 ಡಿವಿಡೆಂಡ್, ಪ್ರತೀ ಲೀ.ಹಾಲಿಗೆ 69 ಪೈಸೆ ಬೋನಸ್ ಘೋಷಣೆ
ರಾಮಕುಂಜ: ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘ ಗೋಕುಲನಗರ ಕೊಯಿಲ ಇದರ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.24ರಂದು ಬೆಳಿಗ್ಗೆ ಕೊಯಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಮುರಳೀಕೃಷ್ಣ ಬಡಿಲ ಅವರು ಮಾತನಾಡಿ, 58 ಸಂವತ್ಸರಗಳನ್ನು ಪೂರೈಸಿರುವ ಸಂಘವು ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ, ನಿರ್ದೇಶಕರು ಹಾಗೂ ಸದಸ್ಯರ ಸಹಕಾರದೊಂದಿಗೆ ಉತ್ತಮ ಸಂಘವಾಗಿ ಬೆಳೆದಿದೆ. ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಸಂಘದ ಸದಸ್ಯರಿಗೆ ಸಿಗುವ ಸವಲತ್ತು ವಿತರಣೆ ಮಾಡಲಾಗುತ್ತಿದೆ. ಸಂಘದಲ್ಲಿ 79,600 ಪಾಲು ಬಂಡವಾಳವಿದೆ. ಪ್ರಸ್ತುತ ದಿನಂಪ್ರತಿ 950 ಲೀ.ಹಾಲು ಸಂಗ್ರಹಿಸಲಾಗುತ್ತಿದೆ. ಆತೂರಿನಲ್ಲಿರುವ ಖರೀದಿ ಉಪಕೇಂದ್ರದಲ್ಲಿ ಸರಾಸರಿ 250 ಲೀ.ಹಾಲು ಸಂಗ್ರಹವಾಗುತ್ತಿದೆ. ಬಿಎಂಸಿಯಲ್ಲಿ 2000 ಲೀ.ಹಾಲು ಶೀತಲಿಕರಿಸಿ ಒಕ್ಕೂಟಕ್ಕೆ ಕಳುಹಿಸಲಾಗುತ್ತದೆ. 2023-24ನೇ ಸಾಲಿನಲ್ಲಿ ಹಾಲು ಉತ್ಪಾದಕರಿಂದ 3,97,311.32 ಲೀ.ಹಾಲು ಸಂಗ್ರಹಿಸಿ 3,96,105 ಕೆ.ಜಿ.ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಒಕ್ಕೂಟದಿಂದ ಪಶು ಆಹಾರ, ಲವಣ ಮಿಶ್ರಣ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ಸಂಘವು ರೂ.6,81,10,603.37 ವ್ಯವಹಾರ ನಡೆಸಿದ್ದು 5,76,608.31 ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.13 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತೀ ಲೀ.ಹಾಲಿಗೆ 69 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪುತ್ತೂರು ವಲಯದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್‌ರವರು ಮಾತನಾಡಿ, ಹಸು ಸಾಕಾಣಿಕೆಗೆ ಇರುವ ಸವಾಲು, ನಿರ್ವಹಣಾ ವೆಚ್ಚದ ಬಗ್ಗೆ ತಿಳಿಸಿದರು. ಪಶು ಆಹಾರ ಬಳಕೆ ಕಡಿಮೆ ಮಾಡಿ ಹೆಚ್ಚು ಪೌಷ್ಠಿಕತೆಯುಳ್ಳ ಹಸಿರು ಮೇವು ಬಳಕೆ ಮಾಡಬೇಕು. ಹೈನುಗಾರಿಕೆಗೆ ಪೂರಕವಾಗಿ ದ.ಕ.ಹಾಲು ಒಕ್ಕೂಟ ಅನುಷ್ಟಾನಗೊಳಿಸಿರುವ ವಿವಿಧ ಸೌಲಭ್ಯಗಳನ್ನು, ಅನುದಾನಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ಹಸಿರು ಮೇವಿನ ಬೆಳೆಯನ್ನು ಹೆಚ್ಚು ಬೆಳೆಸಲು ಒಕ್ಕೂಟದಿಂದ ನೀಡುತ್ತಿರುವ ವಿವಿಧ ಮೇವಿನ ಬೀಜಗಳನ್ನು ಬಳಕೆ ಮಾಡಿ ಹಸಿ ಮೇವು ಬೆಳೆಸಿ ಜಾನುವಾರು ಸಾಕಾಣಿಕೆ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಲಿಂಗ ನಿರ್ಧರಿತ ವೀರ‍್ಯನಳಿಕೆಯನ್ನು ಕೃತಕ ಗರ್ಭಧಾರಣೆಯಲ್ಲಿ ಬಳಸುವುದರಿಂದ 95 ಶೇ.ಹೆಣ್ಣು ಕರು ಜನನವಾಗುತ್ತಿದೆ ಎಂದು ಹೇಳಿದ ಅವರು, ಜಾನುವಾರುಗಳಿಗೆ ವಿಮೆ ಮಾಡಿಕೊಳ್ಳುವಂತೆಯೂ ಸಲಹೆ ನೀಡಿದರು.
ವಿವಿಧ ಸಲಹೆ ಸೂಚನೆ:
ಸಂಘದ ಮಾಜಿ ಅಧ್ಯಕ್ಷರಾದ ರಾಮ ಭಟ್ ಅವರು ಮಾತನಾಡಿ, ಸಂಘದ ಸಿಬ್ಬಂದಿಗಳಿಗೆ ಆರೋಗ್ಯ ವಿಮಾ ಸೌಲಭ್ಯ ಜಾರಿಗೊಳಿಸಬೇಕೆಂದು ಹೇಳಿದರು. ಸದಸ್ಯ ಝನೈದ್ ಅವರು ಯಶಸ್ವಿನಿ ಯೋಜನೆ ಬಗ್ಗೆ ಪ್ರಸ್ತಾಪಿಸಿ, ಈ ಯೋಜನೆಯಡಿ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸಾ ಸೌಲಭ್ಯ ಸಿಗಬೇಕೆಂದು ಹೇಳಿದರು. ಸದಸ್ಯರಾದ ದಾಸಪ್ಪ ಕುಲಾಲ್, ಧನಂಜಯ ಗೌಡ ಪೆರ್ಜಿ, ತೇಜಕುಮಾರ್ ರೈಯವರು ವಿವಿಧ ಸಲಹೆ ಸೂಚನೆ ನೀಡಿದರು.
ಸಂಘದ ಉಪಾಧ್ಯಕ್ಷ ಪ್ರವೀಣ ಡಿ.ದೇರೆಜಾಲು, ನಿರ್ದೇಶಕರಾದ ಯನ್.ಸುಬ್ರಹ್ಮಣ್ಯ ಭಟ್ ಬರೆಂಪಾಡಿ, ಮೋನಪ್ಪ ಮೂಲ್ಯ ಬಿ.ಬೊಳ್ಳರೋಡಿ, ಬಾಲಕೃಷ್ಣ ಗೌಡ ಬಿ.ಬೇಂಗದಪಡ್ಪು, ಸುರೇಶ್ ನಾಕ್ ಕೆ.ಕೊಯಿಲ, ಪ್ರಕಾಶ್ ಕೆ.ಆರ್.ಕೆಮ್ಮಾರ, ರೇಖಾ ಶೆಟ್ಟಿ ಬರೆಂಬಾಡಿ, ವಿಶ್ವನಾಥ ಮೂಲ್ಯ ಕೆ.ಕುಂಡಡ್ಕ, ರವಿಪ್ರಸನ್ನ ಸಿ.ಕೆ.ಕುಂಡಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರವೀಣ ಡಿ.ದೇರೆಜಾಲು ವರದಿ ವಾಚಿಸಿದರು. ನಿರ್ದೇಶಕರಾದ ಬಾಲಕೃಷ್ಣ ಗೌಡ ನಿವ್ವಳ ಲಾಭ ವಿತರಣೆ ತಖ್ತೆ ಹಾಗೂ ರೇಖಾ ಶೆಟ್ಟಿ ಮುಂಗಡ ಬಜೆಟ್ ಮಂಡಿಸಿದರು. ಅಧ್ಯಕ್ಷ ಮುರುಳೀಕೃಷ್ಣ ಬಡಿಲ ಸ್ವಾಗತಿಸಿ, ಯನ್.ಸುಬ್ರಹ್ಮಣ್ಯ ಭಟ್ ಬರೆಂಪಾಡಿ ವಂದಿಸಿದರು. ನಿರ್ದೇಶಕ ಪ್ರಕಾಶ್ ಕೆ.ಆರ್.ಕೆಮ್ಮಾರ ನಿರೂಪಿಸಿದರು. ಜನಾರ್ದನ ಕೊಯಿಲ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಚಿತ್ತರಂಜನ, ಹಾಲು ಪರೀಕ್ಷಕ ಪಿ.ಹರಿಪ್ರಸಾದ್, ಕಂಪ್ಯೂಟರ್ ನಿರ್ವಾಹಕಿ ಜಲಜಾಕ್ಷಿ, ಬಿ.ಎಂ.ಸಿ.ಸಹಾಯಕ ಪಿ.ಧರ್ಣಪ್ಪ ಗೌಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.