ಮಾನಭಂಗಕ್ಕೆ ಪ್ರಯತ್ನ-ದೂರು ನೀಡಿದರೆ ಕರ್ತವ್ಯಕ್ಕೆ ಅಡ್ಡಿ, ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆಂದು ದೂರು ನೀಡುವ ಬೇದರಿಕೆ- ಮಹಿಳೆಯಿಂದ ಪ್ರತಿದೂರು
ಬಲ್ನಾಡು ಉಜಿರುಪಾದೆಯಲ್ಲಿ ಘಟನೆ
ಇತ್ತಂಡದ ದೂರು ದಾಖಲಿಸಿಕೊಂಡ ಪೊಲೀಸರು
ಪುತ್ತೂರು:ಸಾಲ ಮರುಪಾವತಿ ಮಾಡುವಂತೆ ಸೂಚನೆ ನೀಡಲು ಮನೆಯೊಂದಕ್ಕೆ ಹೋದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ಘಟನೆಗೆ ಸಂಬಂಽಸಿ ಮನೆಯ ಮಹಿಳೆ ಪೊಲೀಸರಿಗೆ ಪ್ರತಿದೂರು ನೀಡಿದ್ದು,ಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಸಾಲ ತೀರಿಸುವ ಬದಲು ನಮ್ಮೊಂದಿಗೆ ಬರಬೇಕೆಂದು ಹೇಳಿ ಮಾನಭಂಗಕ್ಕೆ ಯತ್ನಿಸಿದ ಹಾಗು ದೂರು ನೀಡಿದರೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆಂದು ದೂರು ನೀಡಿ ನಿಮ್ಮನ್ನು ಒಳಗೆ ಹಾಕುತ್ತೇವೆ’ ಎಂದು ಬೆದರಿಸಿರುವುದಾಗಿ ಆರೋಪಿಸಿದ್ದಾರೆ.ಘಟನೆ ಸೆ.25ರ ಮಧ್ಯಾಹ್ನ ನಡೆದಿದ್ದು,ಎರಡೂ ಕಡೆಯವರು ಸೆ.26ಕ್ಕೆ ಪೊಲೀಸರಿಗೆ ದೂರು ನೀಡಿದ್ದು,ದೂರು-ಪ್ರತಿದೂರು ದಾಖಲಾಗಿದೆ.
ಬ್ಯಾಂಕ್ ಸಿಬ್ಬಂದಿಯ ದೂರು:
ಪುತ್ತೂರು ಕೋರ್ಟ್ ರೋಡ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಷನ್ಶಿಪ್ ಮ್ಯಾನೇಜರ್ ಆಗಿರುವ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಎಚ್.ಸಿ. ಅವರು ನೀಡಿದ ದೂರಿನಂತೆ ಅಖಿಲೇಶ್ ಮತ್ತು ಕೃಷ್ಣ ಕಿಶೋರ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಬೊಳುವಾರಿನ ತಿರುಮಲ ಸೈಕಲ್ ಸಂಸ್ಥೆಗೆ ಸಂಬಂಽಸಿದಂತೆ ಕೀರ್ತಿ ಅಖಿಲೇಶ್ ಎಂಬವರು ಪಡೆದುಕೊಂಡಿದ್ದ ರೂ.2 ಕೋಟಿ ಸಾಲದ ಮರುಪಾವತಿ ಕುರಿತು ಸೂಚನೆ ನೀಡಲು ಹೋದಾಗ ಈ ಘಟನೆ ನಡೆದಿದೆ.ಬಲ್ನಾಡು ಗ್ರಾಮದ ಉಜಿರ್ಪಾದೆ ನಿವಾಸಿ ಕೀರ್ತಿ ಎನ್ನುವವರು ಅಖಿಲೇಶ್ ಹೆಸರಿನಲ್ಲಿ ಎಸ್ಬಿಐ ಬ್ಯಾಂಕ್ನಲ್ಲಿ 2 ಕೋಟಿ ರೂ.ಸಾಲ ಮಾಡಿದ್ದು,ಸಾಲ ಮರುಪಾವತಿ ಮಾಡದೇ ಎನ್ಪಿಎ ಆಗಿತ್ತು.ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್ ನೊಟೀಸ್ ಮಾಡಿದ್ದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರಲಿಲ್ಲ.ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ ಬ್ಯಾಂಕ್ನ ರಿಲೇಷನ್ಶಿಪ್ ಮ್ಯಾನೇಜರ್ ಚೈತನ್ಯ ಎಚ್.ಸಿ ಹಾಗು ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ದಿವ್ಯಶ್ರೀ ಅವರು ಕೀರ್ತಿ ಅಖಿಲೇಶ್ ಅವರ ನಿವಾಸಕ್ಕೆ ತೆರಳಿದ್ದರು.ಈ ವೇಳೆ ಮನೆಯಲ್ಲಿದ್ದ ಶ್ರೀಮತಿ ಅರುಣ್ಕಿಶೋರ್ ಎಂಬವರು ಅವರನ್ನು ಮನೆಯೊಳಗೆ ಬರ ಮಾಡಿಕೊಂಡರು.ಆಗ ಅಖಿಲೇಶ್ ಅವರು ಮನೆಯಲ್ಲಿರಲಿಲ್ಲ.ಬ್ಯಾಂಕ್ನವರು ಬಂದ ವಿಚಾರವನ್ನು ಕೀರ್ತಿ ಅವರು ಪತಿ ಅಖಿಲೇಶ್ಗೆ ಕರೆ ಮಾಡಿ ತಿಳಿಸಿದ್ದರು.
ಅಖಿಲೇಶ್ ಅವರು ಮನೆಗೆ ಬಂದು ಬ್ಯಾಂಕ್ ಸಿಬ್ಬಂದಿ ಜತೆಗೆ, ಮನೆಗೆ ಬಂದಿರುವ ಬಗ್ಗೆ ತಕರಾರು ತೆಗೆದು ಮನೆಗೆ ಬರಲು ನಿಮಗೆ ಒಪ್ಪಿಗೆ ಕೊಟ್ಟವರು ಯಾರು ಎಂದು ಗದರಿಸಿರುವುದು ಮಾತ್ರವಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಬಂದ್ ಮಾಡಿ ಬಲವಂತವಾಗಿ ಕೂರಿಸಿದ್ದಾರೆ.ಬಳಿಕ ಕೃಷ್ಣಕಿಶೋರ್ ಅವರು ಮನೆಗೆ ಬಂದು ಮನೆಗೆ ಬಂದ ಬಗ್ಗೆ ನಮ್ಮಲ್ಲಿ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಬ್ಯಾಂಕಿನ ರಿಲೇಶನ್ಶಿಪ್ ಮ್ಯಾನೇಜರ್ ಚೈತನ್ಯ ಎಚ್.ಸಿ ಅವರು ನೀಡಿದ ದೂರಿನಂತೆ ಪೊಲೀಸರು ಸೆಕ್ಷನ್ 137,127(2),351(2), ಆರ್/ಡಬ್ಲ್ಯು 395), ಬಿ.ಎನ್.ಎಸ್ ಮತ್ತು ಕಲಂ 27 ಎಆರ್ಎಮ್ಎಸ್ ಆಕ್ಟ್ನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆ ಮಹಿಳೆಯಿಂದ ಪ್ರತಿ ದೂರು:
ಘಟನೆಗೆ ಸಂಬಂಧಿಸಿ ಬಲ್ನಾಡು ಉಜಿರುಪಾದೆ ನಿವಾಸಿ ಕೀರ್ತಿ ಅಖಿಲೇಶ್ ಅವರು ನೀಡಿದ ದೂರಿನಂತೆ ಪೊಲೀಸರು ಬ್ಯಾಂಕ್ನ ಮೂವರು ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಸೆ.25ರ ಮಧ್ಯಾಹ್ನ ಗಂಟೆ 3ಕ್ಕೆ ಗಂಡಸರು ಇಲ್ಲದ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೆ ವಿಚಾರಿಸಿದಾಗ ತಮ್ಮ ಗುರುತು ಪರಿಚಯ ನೀಡದೆ ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಮನೆಯನ್ನು ಜಪ್ತಿ ಮಾಡಿ ನಿಮ್ಮನ್ನು ಬೀದಿಗೆ ಎಳೆಯುತ್ತೇವೆ ಎಂದು ಹೆದರಿಸಿದ್ದಾರೆ.ಆರೋಪಿಗಳ ಪೈಕಿ ಚೈತನ್ಯ ಮತ್ತು ಆಕಾಶ್ ಎಂಬವರು, ನಿಮ್ಮ ಲೋನ್ ತೀರಿಸುವ ಬದಲು ನಮ್ಮೊಂದಿಗೆ ಬಂದರೆ ಸಾಕು ಎಂದು ಹೇಳಿ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ.ಈ ವೇಳೆ ಇನ್ನೋರ್ವ ಆರೋಪಿ ದಿವ್ಯಾಶ್ರೀ ಎಂಬವರು ಇಬ್ಬರು ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ.ಘಟನೆಯನ್ನು ನೋಡಿದ ಕೀರ್ತಿ ಅವರ ಅತ್ತೆ ಅಖಿಲೇಶ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.ಅಖಿಲೇಶ್ ಅವರು ಬಂದು ವಿಚಾರಿಸಿದಾಗ, ನಾವು ಎಸ್ಬಿಐ ಬ್ಯಾಂಕ್ನ ಪುತ್ತೂರು ಶಾಖೆಯ ಸಿಬ್ಬಂದಿಗಳೆಂದು ತಿಳಿಸಿದ್ದಾರೆ.ತಮ್ಮ ಸಂಸ್ಥೆಯ ಸಿಬ್ಬಂದಿಗಳ ಸಂಬಳ, ಖಾತೆ, ಓ.ಡಿ, ಇನ್ನಿತರ ವ್ಯವಹಾರಗಳು ಎಸ್ಬಿಐ ಬ್ಯಾಂಕಿನೊಂದಿಗೆ ನಡೆಯುತ್ತಿದ್ದು, ಬ್ಯಾಂಕಿನ ವ್ಯವಹಾರಗಳು ಶೋರೂಮ್ನಲ್ಲಿ ಗಂಡ ಅಖಿಲೇಶ್ ಅವರ ಜೊತೆಯಲ್ಲಿ ಆಗುತ್ತಿದೆ.ಆದರೆ ಈ ಬಾರಿ ಬ್ಯಾಂಕಿನವರು ಯಾವುದೇ ಪೂರ್ವಭಾವಿ ನೋಟೀಸ್ ನೀಡದೆ, ಸಕಾರಣವಿಲ್ಲದೆ ಮನೆಗೆ ಅಕ್ರಮ ಪ್ರವೇಶ ಮಾಡಿ ಕಾನೂನು ಬಾಹಿರವಾಗಿ ಕಿರಿಕಿರಿ ಉಂಟು ಮಾಡಿ ಅವಾಚ್ಯವಾಗಿ ಬೈದು ಮನಬಂದಂತೆ ಅಸಭ್ಯವಾಗಿ ವರ್ತಿಸಿ, ಮಾನಭಂಗಕ್ಕೆ ಪ್ರಯತ್ನಿಸಿದ ವಿಚಾರಕ್ಕೆ ಸಂಬಂಧಿಸಿ ದೂರು ನೀಡಿದರೆ ನಿಮ್ಮ ಗಂಡ ಅಖಿಲೇಶ್ ಅವರ ಮೇಲೆ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಮತ್ತು ಪಿಸ್ತೂಲ್ ತೋರಿಸಿದ್ದಾರೆ ಎಂದು ದೂರು ಕೊಟ್ಟು, ನಿಮ್ಮನ್ನೆಲ್ಲ ಒಳಗೆ ಹಾಕಿಸುವುದಾಗಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಕೀರ್ತಿ ಅವರು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.ಅವರ ದೂರಿನ ಮೇರೆಗೆ ಪೊಲೀಸರು ಬಿಎನ್ಎಸ್ 74, 329(3), 352, 351(2), 3(5) ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಎರಡೂ ದೂರನ್ನು ತನಿಖೆ ಮಾಡುತ್ತೇವೆ- ಎಸ್ಪಿ
ದ.ಕ.ಜಿಲ್ಲಾ ಪೊಲೀಸ್ ಅಧಿಕ್ಷಕ ಯತೀಶ್ ಎನ್.ಅವರು ಸೆ.27ರಂದು ಮಧ್ಯಾಹ್ನ ಪುತ್ತೂರಿಗೆ ಆಗಮಿಸಿ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.ಇದೇ ಸಂದರ್ಭ ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು.ಎಸ್ಬಿಐ ಬ್ಯಾಂಕ್ನ ಮ್ಯಾನೇಜರ್ ಅವರು ದೂರು ನೀಡಿದಂತೆ, ಬಲ್ನಾಡು ಉಜಿರುಪಾದೆಯ ವ್ಯಕ್ತಿಯೊಬ್ಬರು 2 ಕೋಟಿ ಸಾಲ ಮಂಜೂರು ಮಾಡಿಸಿಕೊಂಡು ಬೈಕ್ ಶೋರೂಮ್ ಅನ್ನು ತೆರೆದಿದ್ದಾರೆ.ಸಾಕಷ್ಟು ದಿನಗಳು ಕಳೆದರೂ ಅವರು ಸಾಲ ಮರುಪಾವತಿ ಮಾಡದೆ ಎನ್ಪಿಎ ಆಗಿದ್ದಾಗ ವಕೀಲರ ಮೂಲಕ ಸಾಕಷ್ಟು ನೋಟೀಸ್ ಕಳುಹಿಸಿದರೂ ಸಂಬಂಧಪಟ್ಟವರು ಸಾಲ ಮರು ಪಾವತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಹಾಗಾಗಿ ಮೇಲಾಧಿಕಾರಿಗಳ ಮೌಖಿಕ ಸೂಚನೆಯಂತೆ ಸೆ.25ರಂದು ಮಧ್ಯಾಹ್ನ ಸುಮಾರು 3 ರಿಂದ ಮೂರುವರೆ ಗಂಟೆ ಸಮಯಕ್ಕೆ ಸಾಲ ಪಡೆದಿರುವವರ ಮನೆಗೆ ದೂರುದಾರರು ಮತ್ತು ಇತರ ಇಬ್ಬರು ಸಿಬ್ಬಂದಿಗಳು ಹೋಗಿದ್ದ ಸಂದರ್ಭ ಮನೆಯಲ್ಲಿದ್ದ ಮಹಿಳೆ ಅವರನ್ನು ಕೂತುಕೊಳಿಸಿ ಪತಿಗೆ ಕರೆ ಮಾಡಿದ್ದರು.ಆಗ ಅವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಗೆ ಬಂದಿರುವುದು ಯಾಕೆಂದು ಪ್ರಶ್ನಿಸಿ ತಂದೆ ಬರುವ ತನಕ ಮನೆಯಲ್ಲಿ ಬೀಗ ಹಾಕಿ ಕೂತುಕೊಳಿಸಿರುತ್ತಾರೆ.ಕೊನೆಗೆ ಅವರ ತಂದೆ ಬಂದು ದೂರುದಾರರಿಗೆ ಮತ್ತು ಅವರೊಂದಿಗೆ ಬಂದ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ, ನೀವು ಮತ್ತೆ ಮನೆ ಕಡೆಗೆ ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವ ಕುರಿತು ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದೇವೆ.ಇದಕ್ಕೆ ಸಂಬಂಧಿಸಿ ಮನೆಯ ನಿವಾಸಿ ಮಹಿಳೆ, ಬ್ಯಾಂಕ್ನಿಂದ ಸಾಲ ವಸೂಲಾತಿಗೆ ಹೋದವರ ಮೇಲೆಯೂ ದೂರು ನೀಡಿದ್ದಾರೆ.ಮನೆಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಪರಿಚಯ ಮಾಡಿಕೊಳ್ಳದೆ ಅವಾಚ್ಯವಾಗಿ ನಿಂದಿಸಿ, ಅಸಭ್ಯವಾಗಿ ವರ್ತಿಸಿ, ಜಪ್ತಿ ಮಾಡುತ್ತೇವೆ ಎಂದು ಹೆದರಿಸಿದ್ದಾರೆಂದು ಅವರು ದೂರು ನೀಡಿದ್ದಾರೆ.ಈ ದೂರನ್ನು ಕೂಡಾ ದಾಖಲು ಮಾಡಿ ತನಿಖೆ ಮಾಡುತ್ತಿದ್ದೇವೆ.ಎರಡೂ ಪ್ರಕರಣಗಳ ತನಿಖೆ ಆರಂಭಿಸಿದ್ದೇವೆ.ಸತ್ಯಾಸತ್ಯತೆ ತನಿಖೆಯಲ್ಲಿ ಬಯಲಾಗಲಿದೆ.ಅವರಲ್ಲಿರುವ ಪಿಸ್ತೂಲ್ ಪರವಾನಿಗೆ ಹೊಂದಿರುವುದಾಗಿದೆ ಎಂದು ಸದ್ಯದ ಮಟ್ಟಿಗೆ ತಿಳಿದು ಬಂದಿದೆ.ಆದರೆ ಅದನ್ನು ಆ ರೀತಿ ತೋರಿಸುವುದು ತಪ್ಪು ಎಂದು ಎಸ್ಪಿ ಯತೀಶ್ ಎನ್.ಅವರು ತಿಳಿಸಿದ್ದಾರೆ.