ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೆ.ಶೇಖರ ರೈ ಕುರಿಕ್ಕಾರರವರಿಗೆ ಬೀಳ್ಕೊಡುಗೆ

0

ನೇರ ನಡೆನುಡಿ, ಪ್ರಾಮಾಣಿಕ ಸೇವೆಯೇ ಶೇಖರ ರೈಯವರ ವಿಶೇಷತೆಯಾಗಿದೆ: ಎಸ್.ಬಿ.ಜಯರಾಮ ರೈ

ಪುತ್ತೂರು: ತನ್ನೊಳಗೆ ನೂರಾರು ನೋವುಗಳಿದ್ದರು ಅದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ತಾನು ಮಾಡುವ ಕರ್ತವ್ಯವನ್ನು ಶ್ರದ್ಧೆ ಪ್ರಾಮಾಣಿಕತೆಯಿಂದ ಮಾಡುವ ಮೂಲಕ ಎಲ್ಲರೊಂದಿಗೆ ನಗುವನ್ನು ಹಂಚಿದ ವ್ಯಕ್ತಿ ಇದ್ದರೆ ಅದು ಶೇಖರ ರೈಯವರು ಆಗಿದ್ದಾರೆ. ತನ್ನ ನೇರ ನಡೆನುಡಿಯಿಂದಲೇ ಎಲ್ಲರ ಪ್ರೀತಿ ಗಳಿಸಿದ ವ್ಯಕ್ತಿಯಾಗಿದ್ದಾರೆ ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಹೇಳಿದರು.


ಅವರು ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕೆ.ಶೇಖರ ರೈ ಕುರಿಕ್ಕಾರರವರ ಬೀಳ್ಕೊಡುಗೆ ಸಮಾರಂಭವನ್ನು ಅ.1ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶೇಖರ ರೈಯವರು ತನ್ನ ಸಂಘದ ಬೆಳವಣಿಗೆಗಾಗಿ ಶ್ರಮಪಟ್ಟವರಾಗಿದ್ದಾರೆ. ಒಕ್ಕೂಟದ ಆರಂಭದ ದಿನಗಳಲ್ಲಿ ಅವರು ಸಂಘದ ಕಾರ್ಯದರ್ಶಿಯಾಗಿದ್ದರು. ಅಂದಿನಿಂದ ಇಂದಿನವರೇಗೆ ಸಂಘವನ್ನು ಉತ್ತಮ ರೀತಿಯಾಗಿ ನಡೆಸಿಕೊಂಡು ಬಂದಿದ್ದಾರೆ ಎಂದ ಅವರು, ಶೇಖರ ರೈಯವರ ಕರ್ತವ್ಯ ನಿಷ್ಠೆ ಹಾಗೂ ಅವರು ರೈತ ಬಂಧುಗಳೊಂದಿಗೆ ಇಟ್ಟುಕೊಂಡಿದ್ದ ಸಂಬಂಧ, ಪ್ರೀತಿ ಇಂದು ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ಒಮ್ಮೊಮ್ಮ ಅವರ ಮಾತಿನಲ್ಲಿ ನಿಷ್ಠುರತೆ ಕಂಡು ಬಂದರೂ ಅದು ಒಳ್ಳೆಯದಕ್ಕಾಗಿ ಆಗಿರುತ್ತದೆ. ಆದ್ದರಿಂದಲೇ ಒಳಮೊಗ್ರು ಸಂಘ ಅಭಿವೃದ್ಧಿಯನ್ನು ಕಂಡಿದೆ ಎಂದು ಹೇಳಿ ಅವರು ಮುಂದಿನ ಜೀವನಕ್ಕೆ ಶುಭ ಹಾರೈಸಿದರು.


ಶೇಖರ ರೈಯವರನ್ನು ಶಾಲು,ಹಾರ,ಪೇಟಾ ತೊಡಿಸಿ, ಫಲಪುಷ್ಪ, ಸ್ಮರಣಿಕೆ ಕೊಟ್ಟು ಸನ್ಮಾನಿಸಿದ ದ.ಕ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ, ಶೇಖರ ರೈಯವರು ಒಬ್ಬ ಸಂಘ ಜೀವಿ, ಎಲ್ಲರನ್ನು ಪ್ರೀತಿಸುವ ವ್ಯಕ್ತಿ ಎಂಬುದಕ್ಕೆ ಇಂದು ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಸೇರಿದ ಜನರೇ ಸಾಕ್ಷಿಯಾಗಿದ್ದಾರೆ. ಅವರು ಮಾತಿನಲ್ಲಿ ಕಠೋರತೆ ಇದ್ದರೂ ಯಾರನ್ನೂ ಕೂಡ ದೂರ ಮಾಡದೇ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ಬೆರೆಯುತ್ತಿದ್ದ ವ್ಯಕ್ತಿಯಾಗಿದ್ದರು ಎಂದು ಹೇಳಿ ಅವರ ಮುಂದಿನ ಜೀವನ ಸುಖ, ಸಂತೋಷ ಸಮೃದ್ಧಿಯಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಶೇಖರ ರೈಯವರಿಗೆ ಚಿನ್ನದ ಉಂಗುರು ತೊಡಿಸಿ ಅಧ್ಯಕ್ಷರು ಅಭಿನಂದಿಸಿದರು. ಸಾರ್ವಜನಿಕರ ಪರವಾಗಿ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಿಂದ ಶೇಖರ ರೈಯವರನ್ನು ಸನ್ಮಾನಿಸಲಾಯಿತು. ಇದಲ್ಲದೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಅಮ್ಮಣ್ಣ ರೈ ದೇರ್ಲ, ಕುಂಬ್ರ ದಯಾಕರ ಆಳ್ವ, ಪುರಂದರ ರೈ ಮಿತ್ರಂಪಾಡಿ, ಸತೀಶ್ ರೈ ಗೋಳ್ತಿಲ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟ ಮುಡಾಲ, ಬಿ.ಸಿ ಚಿತ್ರಾ, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್, ನಾರಾಯಣ ಪೂಜಾರಿ ಕುರಿಕ್ಕಾರ, ಬಾಬು ಪೂಜಾರಿ ಬಡಕ್ಕೋಡಿ, ಪುರಂದರ ಶೆಟ್ಟಿ ಮುಡಾಲ ಸೇರಿದಂತೆ ಹಲವು ಮಂದಿ ಶೇಖರ ರೈಯವರಿಗೆ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ಶೇಖರ ರೈಯವರ ಪಾತ್ರ ಬಹಳ ದೊಡ್ಡದು. ಸಂಘಕ್ಕೆ ಸ್ವಂತ ನಿವೇಶನದಿಂದ ಹಿಡಿದು ಸ್ವಂತ ಕಟ್ಟಡ ಆಗುವವರೆಗೆ ಶೇಖರ ರೈಯವರು ಶ್ರಮಪಟ್ಟಿದ್ದಾರೆ. ನೇರ ನಡೆನುಡಿ ಇದ್ದರೂ ಒಬ್ಬ ಸಂಘ ಜೀವಿಯಾಗಿ ಎಲ್ಲರನ್ನು ನಗಿಸುತ್ತಾ ಇದ್ದವರು, ಸಂಘ ಸದಾ ಅವರಿಗೆ ಚಿರಋಣಿಯಾಗಿರುತ್ತದೆ. ಅವರ ಸೇವೆ ಇನ್ನೂ ಕೂಡ ಸಂಘಕ್ಕೆ ಇರಲಿ ಎಂದು ಹೇಳಿ ಶುಭ ಹಾರೈಸಿದರು. ಅಭಿನಂದನಾ ಮಾತುಗಳನ್ನಾಡಿದ ಹಿರಿಯ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು, ಶೇಖರ ರೈಯವರು ಒಬ್ಬ ಚಾರ್ಲಿ ಚಾಪ್ಲಿನ್ ಥರದ ವ್ಯಕ್ತಿ. ತನ್ನೊಳಗೆ ಅದೆಷ್ಟೇ ನೋವಿದ್ದರೂ ಅದನ್ನು ಸಮಾಜಕ್ಕೆ ತೋರಿಸದೆ ತನ್ನ ಕರ್ತವ್ಯ ನಿಷ್ಠೆ ಹಾಗೂ ಜನರೊಂದಿಗೆ ಅವರು ಬೆರೆಯುತ್ತಿದ್ದ ರೀತಿ ವಿಶೇಷವಾಗಿತ್ತು. ಅವರೊಬ್ಬ ಕೇವಲ ಸಂಘದ ಕಾರ್ಯದರ್ಶಿಯಾಗಿರದೆ ಸಂಘದ ಎಲ್ಲಾ ಕೆಲಸಗಳನ್ನು ನಿಭಾಯಿಸಿದವರು ಆಗಿದ್ದಾರೆ. ಕೃಷಿಕರಾಗಿ, ನಾಟಕ, ಯಕ್ಷಗಾನ ಕಲಾವಿದರಾಗಿ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯ ಸದಸ್ಯರಾಗಿ ಸೇವೆ ಮಾಡಿದವರರಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.


ಸನ್ಮಾನ ಸ್ವೀಕರಿಸಿದ ಕೆ.ಶೇಖರ ರೈ ಕುರಿಕ್ಕಾರರವರು ತನ್ನ ಮೇಲೆ ಪ್ರೀತಿ ಇಟ್ಟು ನನ್ನೊಂದಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಅತಿಥಿಗಳಾಗಿದ್ದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ ರಘು, ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್, ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎ.ಜಿ ವಿಜಯ ಕುಮಾರ್ ರೈ, ಪಶು ವೈದ್ಯಾಧಿಕಾರಿ ಡಾ.ಪ್ರಕಾಶ್, ವಿಸ್ತರಣಾಧಿಕಾರಿ ಮಾಲತಿ, ಸಂಘದ ಉಪಾಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ದ.ಕ ಹಾಲು ಉತ್ಪಾದಕ ಒಕ್ಕೂಟದ ಮಾಜಿ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಉಷಾ ನಾರಾಯಣ್, ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರುಗಳು ಸಭಿಕರ ಪರವಾಗಿ ಶುಭ ಹಾರೈಸಿದರು.ಸಂಘದ ಉಪಾಧ್ಯಕ್ಷ ವಸಂತ ಶೆಟ್ಟಿ ಕಲ್ಲಡ್ಕ ಪ್ರಾರ್ಥಿಸಿದರು. ನಿರ್ದೇಶಕ ಚಂದ್ರಕಾಂತ ಶಾಂತಿವನ ಸ್ವಾಗತಿಸಿದರು. ನಿರ್ದೇಶಕ ಅಶೋಕ್ ಪೂಜಾರಿ ಬೊಳ್ಳಾಡಿ ವಂದಿಸಿದರು. ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರುಗಳಾದ ಸುಧಾಕರ ಶೆಟ್ಟಿ, ಮೋಹನ್‌ದಾಸ ರೈ ಕುಂಬ್ರ, ಕೆ.ದಿನೇಶ್ ರೈ, ವಾರಿಜಾಕ್ಷಿ ಪಿ.ಶೆಟ್ಟಿ, ಅದ್ದು ಯಾನೆ ಅದ್ರಾಮ, ಚಿತ್ರಾ ಎನ್.ಟಿ, ಕರುಣಾಕರ ಕೇಶವ, ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ನಳಿನಿ ರೈ, ಸುಷ್ಮಾ ಕುಮಾರಿ ಸಹಕರಿಸಿದ್ದರು.


ಕೊರೋನದಂತಹ ಕಷ್ಟಕಾಲದಲ್ಲೂ ಅವಿಭಜಿತ ಜಿಲ್ಲೆಯ ರೈತರ ಕೈ ಹಿಡಿದ ಸಂಸ್ಥೆಗಳೆಂದರೆ ಅದು ಕೆಎಂಎಫ್, ಕ್ಯಾಂಪ್ಕೋ ಮತ್ತು ಡಿಸಿಸಿ ಬ್ಯಾಂಕ್ ಆಗಿದೆ. ಇತರ ರಾಜ್ಯಗಳಲ್ಲಿ ಪ್ರತಿ ವರ್ಷ ರೈತರ ಆತ್ಮಹತ್ಯೆಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ನಮ್ಮ ಅವಿಭಜಿತ ಜಿಲ್ಲೆಗಳಲ್ಲಿ ರೈತರಿಗೆ ಯಾವುದೇ ಕಷ್ಟಗಳು ಬರದಂತೆ ಅವರ ಕೈ ಹಿಡಿದ ಸಂಸ್ಥೆಗಳು ಇದಾಗಿವೆ ಎಂದು ಸವಣೂರು ಕೆ.ಸೀತಾರಾಮ ರೈ ಹೇಳಿದರು.

ರೈತರಿಗೆ ಸಿಗುವ ಹಾಲಿನ ದರ ಕನಿಷ್ಠ 50 ರೂಪಾಯಿಗಳು ಆಗದಿದ್ದರೆ ಹೈನುಗಾರಿಕೆ ತುಂಬಾ ಕಷ್ಟ ಇದೆ. ಏಕೆಂದರೆ ಇಂದಿನ ದಿನಗಳಲ್ಲಿ ಪಶು ಆಹಾರಕ್ಕೆ ಬೆಲೆ ಜಾಸ್ತಿಯಾಗುತ್ತಿದ್ದು ಹಾಲಿನ ದರ ಕಡಿಮೆ ಆಗಿದೆ. ಇದರಿಂದ ಹೈನುಗಾರಿಕೆ ನಡೆಸುವುದು ಕಷ್ಟ ಸಾಧ್ಯವಾಗಿದೆ. ಈ ಬಗ್ಗೆ ಒಕ್ಕೂಟದ ವತಿಯಿಂದ ಸರಕಾರಕ್ಕೆ ಹಲವು ಸಲ ಬೇಡಿಕೆ ಇಟ್ಟಿದ್ದೇವೆ. ಹಾಲಿನ ದರವನ್ನು ಹೆಚ್ಚಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು ಸರಕಾರ ಇದಕ್ಕೆ ಒಪ್ಪಿಗೆ ಸೂಚಿಸದಿದ್ದರೆ ಒಕ್ಕೂಟದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಸ್.ಬಿ.ಜಯರಾಮ ರೈ ಬಳಜ್ಜ ಹೇಳಿದರು.

LEAVE A REPLY

Please enter your comment!
Please enter your name here