ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಚಿತ್ತದ ಚಿತ್ತಾರಕ್ಕೆ ಬಣ್ಣಧಾರೆ….

0

ಪುತ್ತೂರು: ಪರೀಕ್ಷೆ ಮುಗಿದಾಕ್ಷಣ ಮಕ್ಕಳೆಲ್ಲರು ಹಗ್ಗ ಬಿಟ್ಟ ಕರುವಿನಂತೆ ಎಲ್ಲೆಂದರಲ್ಲಿ ಓಡುತ್ತಾ ಚೆಲುವಿನ ನಗೆ ಬೀರುತ್ತಾ , ಕಾಲ ಕಳೆಯುತ್ತಾರೆ. ಮೊಬೈಲ್‌ ,ಟಿ ವಿ ಎಂದು ಸಮಯ ವ್ಯರ್ಥ ಮಾಡುವ ಮಕ್ಕಳೂ ಇರುತ್ತಾರೆ. ಅವರ ಸುಂದರ ಯೋಚನೆಗಳಿಗೆ ಸೃಜನಶೀಲ ವೇದಿಕೆ ಸಿಕ್ಕಾಗ ಭಾವ  ಚಿತ್ರಕ್ಕೆ ಹಾಡಿಗೆ,ಕುಣಿತಕ್ಕೆ ತಿರುಗಿ, ಮನಸ್ಸು ಹೊಸತನವನ್ನು ಒಪ್ಪಿಕೊಳ್ಳುತ್ತದೆ. ಅದು ಹವ್ಯಾಸಕ್ಕೆ ವೇದಿಕೆಯಾಗುತ್ತದೆ. ಕೆಟ್ಟ ಯೋಚನೆಗಳಿಗೆ ಬ್ರೇಕ್‌ ಹಾಕುತ್ತದೆ. ಕಲಿಕೆ  ಇಂತಹ ಮನಸ್ಸನ್ನು ಅರಳಿಸುವ ಕಾರ್ಯ ಪಿಎಂಶ್ರೀ ಶಾಲೆ ವೀರಮಂಗಲದಲ್ಲಿ ನಡೆಯುತ್ತಿದೆ.

ಸ್ಪೋಕನ್‌ ಇಂಗ್ಲಿಷ್‌ , ಸಂಭಾಷಣೆ, ನಾಟಕಾಭಿನಯದೊಂದಿಗೆ ಆರಂಭವಾದ ಮಕ್ಕಳ ಕಲಿಕಾ ಸಮಯ ಎರಡನೆ ದಿನ ಚಿತ್ರ,ಚಿತ್ತಾರಕ್ಕೆ ಮೀಸಲಾಯಿತು .ಚಿತ್ರಕ್ಕೆ ಬಣ್ಣ ತುಂಬಿಸುವುದು ವಾಟರ್‌ ಕಲರ್‌ ಬಳಸಿ ಚಿತ್ರ ಮಾಡುವುದು, ಎಲೆ ಕೊಲಾಜ್‌ ,ಪೇಪರ್‌ ಕೊಲಾಜ್‌, ಪೇಪರ್‌ ಕ್ರಾಪ್ಟ್‌ ಇತ್ಯಾದಿ ಚಟುವಟಿಕೆಗಳು ಎಲ್ಲಾ ಮನಸ್ಸುಗಳನ್ನು ತೊಡಗುವಂತೆ ಮಾಡಿತು. ಮತ್ತೆ ಮೂರು ದಿನಗಳ ಕಾಲ ನಡೆಯುವ ಜನಪದ ಕುಣಿತಗಳ ಕಾರ್ಯಾಗಾರದಲ್ಲಿ  ದೇಸಿಯ ಸಂಸ್ಕೃತಿಗಳ ಅನಾವರಣ, ಮೂಲ ಜನಪದ ಹಾಡುಗಳು,ಕಂಸಾಳೆ,ವೀರಗಾಸೆ,ನಂದಿಕೋಲು,ಪಟದ ಕುಣಿತ,ಮಾರಮ್ಮನ ಕುಣಿತ, ಹಾಲಕ್ಕಿ, ಗೊರವರ  ಕುಣಿತ, ಕೋಲಾಟ, ತುಳು ಜನಪದ ಕುಣಿತಗಳಾದ, ಕಂಗೀಲು,ಕರಂಗೋಲು,ಚೆನ್ನು, ಮಾಂಕಾಳಿ, ಸಿದ್ಧವೇಷ, ಹುಲಿಕುಣಿತ, ದುಡಿ ಕುಣಿತ, ಕನ್ಯಾಪು ಕುಣಿತ ಇತ್ಯಾದಿ ದೇಸಿ ಕುಣಿತಗಳು ಆಧುನಿಕ ಬದುಕಿನ ಸಂಕೀರಣತೆಗೆ ಮೂರ್ತ ಭಾವ ತೋರುವ  ಶಾಲಾ ಮುಖ್ಯಗುರು ತಾರಾನಾಥ ಸವಣೂರು ನಿರ್ದೇಶನದಲ್ಲಿ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶ್ರೀಲತಾ, ಕವಿತಾ,ಹೇಮಾವತಿ,ಶಿಲ್ಪರಾಣಿ,ಸೌಮ್ಯ ಇವರು ಮಕ್ಕಳ ಕಲಾ ಮನಸ್ಸಿಗೆ  ಜೀವ ತುಂಬಿದರು.

ಜೊತೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಚಿತ್ರ ಕಲಾವಿದ ಗಿರೀಶ್‌ ವೀರಮಂಗಲ  ಜನಪದ ಕಲಾವಿದ ರಮೇಶ್‌ ಮೆಟ್ಟಿನಡ್ಕ, ಜನಪದ ಹಾಡುಗಾರ ದೇವಿಪ್ರಸಾದ್‌ ಸುಳ್ಯ ಇವರು ಭಾಗವಹಿಸಿ ಜನಪದ ಲೋಕವನ್ನು ಪರಿಚಯಿಸಿದರು. ಶಾಲಾ ಮಕ್ಕಳ ಸಂಭ್ರಮ ಕಲಿಕೆಯೊಂದಿಗೆ ಸೃಜನಶೀಲ ಮನಸ್ಸನ್ನು ಅರಳಿಸಲು ವೇದಿಕೆ ಸಿಕ್ಕಿರುವುದು ಶಾಲೆಯ ಉತ್ತುಂಗತೆಗೆ ಕನ್ನಡಿಯಾಯಿತು.

LEAVE A REPLY

Please enter your comment!
Please enter your name here