ಗಾಂಧಿ ಜಯಂತಿ ಪ್ರಯುಕ್ತ ನಯಾ ಚಪ್ಪಲ್ ಬಜಾರ್‌ರವರಿಂದ 9 ಮಂದಿ ಪೌರ ಕಾರ್ಮಿಕರಿಗೆ ಸನ್ಮಾನ

0

ಪುತ್ತೂರು:ಅ.2 ರಂದು ಭಾರತದಾದ್ಯಂತ ಆಚರಿಸಲ್ಪಡುವ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ದರ್ಬೆ ನಯಾ ಚಪ್ಪಲ್ ಬಜಾರ್ ರವರಿಂದ ಪುತ್ತೂರು ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ ದರ್ಬೆ ಲೈನ್ ಮತ್ತು ಕೃಷ್ಣನಗರ ಲೈನ್‌ನಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿನ ನಯಾ ಚಪ್ಪಲ್ ಬಜಾರ್ ಮಳಿಗೆಯಲ್ಲಿ ನಡೆಯಿತು.


ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರು ಹೀರೊಗಳು-ಶ್ವೇತಾಕಿರಣ್:
ಮುಖ್ಯ ಅತಿಥಿ, ಪುತ್ತೂರು ನಗರಸಭೆಯ ಹಿರಿಯ ಆರೋಗ್ಯ ಅಧಿಕಾರಿ ಶ್ವೇತಾಕಿರಣ್ ಮಾತನಾಡಿ, ಪೌರ ಕಾರ್ಮಿಕರು ಕಸದವರು ಅಲ್ಲ, ಅವರು ಸ್ವಚ್ಚತಾಗಾರರು. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಹಾಗೂ ರೋಗ ಹರಡದಂತೆ ಮಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಕಾರಣ ಜೊತೆಗೆ ಅವರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಿದೆ. ನಿಜಕ್ಕೂ ಪೌರ ಕಾರ್ಮಿಕರು ನಿಜವಾದ ಹೀರೊಗಳು ಎಂದರು.


ಸತ್ಯ, ಸಹನೆ, ಶಾಂತಿ, ಸೌಹಾರ್ದತೆಯನ್ನು ಸಾರಿದವರು ಗಾಂಧೀಜಿಯವರು-ಡಾ.ಶ್ರೀಪತಿ ರಾವ್:
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಸತ್ಯ, ಸಹನೆ, ಶಾಂತಿ, ಸೌಹಾರ್ದತೆಯನ್ನು ಸಾರಿದವರು ರಾಷ್ಟ್ರಪಿತ ಗಾಂಧೀಜಿಯವರು. ಆದರೆ ಸ್ವಾತಂತ್ರ್ಯ ನಂತರ ಕೆಲವು ಅಹಿತಕರ ಘಟನೆಗಳು ನಡೆದಿದ್ದರೂ ಇಂದು ಹಿಂದಿನ ಆ ಆದರ್ಶ ಸಮಾಜ ಪುನರಾವರ್ತನೆ ಕಾಣುತ್ತಿದೆ. ಗಾಂಧೀಜಿಯವರ ಆದರ್ಶ ಹಾಗೂ ರೋಟರಿ ಸಂಸ್ಥೆಯ ಆದರ್ಶದಲ್ಲಿ ಬಹಳ ಸಾಮ್ಯತೆಯಿದೆ. ನಯಾ ಚಪ್ಪಲ್ ಬಜಾರ್ ಸಂಸ್ಥೆಯು ಜಾತಿ, ಮತ, ಬೇಧವಿಲ್ಲದೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.


ಸ್ವಚ್ಚತೆ ಬಗ್ಗೆ ಪ್ರತಿಪಾದಿಸಿದವರು ಮಹಾತ್ಮ ಗಾಂಧೀಜಿಯವರು-ಪ್ರೊ|ಝೇವಿಯರ್ ಡಿ’ಸೋಜ:
ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಹಾಗೂ ಪುತ್ತೂರು ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜಾ, ಮಾತನಾಡಿ, ಎಂ.ಜಿ ರಫೀಕ್‌ರವರು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ನಿಸ್ಸೀಮರು. ಸ್ವಚ್ಚತೆ ಬಗ್ಗೆ ಪ್ರತಿಪಾದಿಸಿದವರು ಮಹಾತ್ಮ ಗಾಂಧೀಜಿಯವರು. ಮಾತ್ರವಲ್ಲ ಅವರ ಮೊಗದಲ್ಲಿನ ಕನ್ನಡಕ ಸ್ವಚ್ಚತೆಯನ್ನು ಪ್ರತಿಪಾದಿಸುತ್ತದೆ. ನಾವು ಕಸ ಮಾಡಿ ಪೌರ ಕಾರ್ಮಿಕರಿಗೆ ಕೊಡುವವರು, ಪೌರ ಕಾರ್ಮಿಕರು ಕಸ ತೆಗೆದುಕೊಂಡು ಸ್ವಚ್ಚತೆಯನ್ನು ಮಾಡುವವರು ಎಂದರು.


ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ-ಡಾ.ನಝೀರ್ ಅಹಮದ್:
ಕಲ್ಲಾರೆ ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್‌ನ ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ಮಾತನಾಡಿ, ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯದಂತಹ ರೋಗಗಳು ಇತ್ತೀಚೆಗೆ ದಿನಗಳಲ್ಲಿ ನಿಯಂತ್ರಣ ಸಾಧಿಸುವಲ್ಲಿ ಪೌರ ಕಾರ್ಮಿಕರ ಪ್ರಾಮಾಣಿಕ ಶ್ರಮ ಶ್ಲಾಘನೀಯ. ಹಿಂದಿನ ದಿನಗಳ ಹಾಗೂ ಇಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಇಂದಿನ ಪಟ್ಟಣ ಬಹಳ ಸ್ವಚ್ಚತೆಯಿಂದ ಕೂಡಿರಲು ಪೌರ ಕಾರ್ಮಿಕರು ಕಾರಣ. ನಾಗರಿಕರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ ಎಂದರು.


ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಯಾ ಚಪ್ಪಲ್ ಬಜಾರ್ ಮಾಲಕ ರಫೀಕ್ ಎಂ.ಜಿ ಸ್ವಾಗತಿಸಿ, ಮಳಿಗೆಯ ಸಿಬ್ಬಂದಿ ಸುಮಲತಾ ವಂದಿಸಿದರು. ರೋಟರಿ ಪುತ್ತೂರು ಸದಸ್ಯ ಪರಮೇಶ್ವರ್ ಗೌಡ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ, ಮುಖ್ಯರಸ್ತೆಯ ಮದರ್ ಇಂಡಿಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಜಾಕ್, ರೋಟರಿ ಪುತ್ತೂರು ಸದಸ್ಯರಾದ ಹೆರಾಲ್ಡ್ ಮಾಡ್ತಾ, ಡಾ.ಅಶೋಕ್ ಪಡಿವಾಳ್, ಬಾಲಕೃಷ್ಣ ಎಂ, ಪ್ರೊ|ದತ್ತಾತ್ರೇಯ ರಾವ್, ಶ್ರೀಕಾಂತ್ ಕೊಳತ್ತಾಯ, ಏಷ್ಯನ್ ವುಡ್ಸ್ ಮಾಲಕ ಇಸ್ಮಾಯಿಲ್, ಪುತ್ತೂರು ವರ್ತಕ ಸಂಘದ ಕಾರ್ಯದರ್ಶಿ ಮನೋಜ್ ಟಿ.ವಿ, ಸುರಯ್ಯ ಡ್ರೆಸ್ಸಸ್ ಮಾಲಕ ಖಾದರ್, ಮಳಿಗೆ ಮಾಲಕ ರಫೀಕ್ ಎಂ.ಜಿ ಪುತ್ರ ರಾಝೀಮ್, ನಯಾ ಚಪ್ಪಲ್ ಬಜಾರ್ ಸಿಬ್ಬಂದಿ ಉಪಸ್ಥಿತರಿದ್ದರು.


9 ಪೌರ ಕಾರ್ಮಿಕರಿಗೆ ಸನ್ಮಾನ..
ನಗರಸಭೆಯ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ದರ್ಬೆ ಲೈನ್‌ನ ಚಾಲಕ ಸತೀಶ್, ವೀರಪ್ಪ, ರಘು, ಸಾರವ್ವ, ನೀಲಮ್ಮ, ಕೃಷ್ಣನಗರ ಲೈನ್‌ನ ಚಾಲಕ ನಾರಾಯಣ, ಆನಂದ, ಹೀರಮ್ಮ, ಲಿಂಗಪ್ಪರವರುಗಳನ್ನು ಗುರುತಿಸಿ ಶಾಲು ಹೊದಿಸಿ, ಸುಮಾರು ರೂ.2 ಸಾವಿರ ಮೌಲ್ಯದ ಸಾರಿ, ಸ್ಕರ್ಟ್, ಪ್ಯಾಂಟ್ ಶರ್ಟ್, ಚಪ್ಪಲ್, ಸ್ವೀಟ್ಸ್, ಕೊಡೆ ನೀಡುವ ಮೂಲಕ ಸನ್ಮಾನಿಸಲಾಯಿತು ಮಾತ್ರವಲ್ಲ ಎಂ.ಜಿ ರಫೀಕ್‌ರವರ ಸೇವೆಯನ್ನು ಗಮನಿಸಿ ಏಷ್ಯನ್ ವುಡ್‌ನ ಮಾಲಕ ಇಸ್ಮಾಯಿಲ್‌ರವರೂ ಕೂಡ ಪೌರ ಕಾರ್ಮಿಕರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ವಾಹನ ಚಾಲಕ ನಾರಾಯಣರವರು ಸನ್ಮಾನಿತರ ಪರವಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ಪೌರ ಕಾರ್ಮಿಕರ ಬಗ್ಗೆ ಗೌರವವಿರಲಿ..
ಪೌರ ಕಾರ್ಮಿಕರು ಒಂದು ದಿನ ಸ್ಟ್ರೈಕ್ ಮಾಡಿದ್ರೆ ನಮ್ಮ ಮನೆಯ ಮಹಿಳೆಯರು ಬೊಬ್ಬೆ ಹೊಡಿಯುತ್ತಾರೆ. ಒಂದು ವೇಳೆ ಪೌರ ಕಾರ್ಮಿಕರು ಒಂದು ತಿಂಗಳು ರಜೆ ಮಾಡಿದ್ರೆ ಇಡೀ ಭಾರತದ ಸ್ಥಿತಿ ಏನಾಗುತ್ತದೆ ಎಂಬುದು ಒಮ್ಮೆ ಊಹಿಸಿಕೊಳ್ಳಿ. ಪೌರ ಕಾರ್ಮಿಕರನ್ನು ಗೌರವದ ಭಾವನೆಯಿಂದ ನೋಡಿಕೊಳ್ಳಬೇಕು ನಾವು. ಅವರ ಸೇವೆಗೆ ನಾವು ಎಂದಿಗೂ ಚಿರಋಣಿ.
-ಎಂ.ಜಿ ರಫೀಕ್, ಮಾಲಕರು, ನಯಾ ಚಪ್ಪಲ್ ಬಜಾರ್

LEAVE A REPLY

Please enter your comment!
Please enter your name here