ಯಕ್ಷಗಾನಕ್ಕೆ ಅಂತರಾಷ್ಟ್ರೀಯ ಮಾನ್ಯತೆ- ನವೀನ್ ಭಂಡಾರಿ
ಪುತ್ತೂರು: ಕರಾವಳಿಯ ಗಂಡುಕಲೆಯಾದ ಯಕ್ಷಗಾನಕ್ಕೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಇರುವುದು ತುಂಬಾ ಸಂತಸದ ವಿಚಾರವಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ನವೀನ್ ಭಂಡಾರಿ ಹೇಳಿದರು.
ಅವರು ಅ.2ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷರಂಗ ಪುತ್ತೂರು ವತಿಯಿಂದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಸಹಭಾಗಿತ್ವದೊಂದಿಗೆ ಯಕ್ಷಗಾನ ತಾಳಮದ್ದಳೆ ಮತ್ತು ರಸಿಕ ರತ್ನ ವಿಟ್ಲ ಜೋಷಿ ಮತ್ತು ಹಾಸ್ಯರತ್ನ ನಯನ ಕುಮಾರ್‌ರವರುಗಳ ಗುರುಶಿಷ್ಯ – ಸಂಸ್ಮರಣೆ ಸಭಾಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದವರ ಸಂಸ್ಮರಣೆ ಮಾಡುವು ಕಾರ್‍ಯ ಇಲ್ಲಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಯಕ್ಷರಂಗದ ಅಧ್ಯಕ್ಷ ಸೀತಾರಾಮ ಶಾಸ್ತ್ರೀ ಕಾಡೂರು ಬಹಳ ಮುತುವರ್ಜಿಯಿಂದ ಪ್ರತಿ ವರ್ಷ ಕಾರ್‍ಯಕ್ರಮವನ್ನು ಸಂಘಟಿಸುತ್ತಿದ್ದಾರೆ, ಇವರ ಕಲಾ ಸೇವೆಗೆ ನಾವೆಲ್ಲ ಅಭಿನಂದಿಸಬೇಕು ಎಂದು ಹೇಳಿದರು.
ಸನ್ಮಾನ:
ಕಲಾವಿದ ವಿಟ್ಲ ಶಂಭು ಶರ್ಮರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಂಭು ಶರ್ಮರವರ ಪತ್ನಿ ಲಕ್ಷ್ಮಿ ರವರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ಶಂಭು ಶರ್ಮರವರು ಸಂದಭೋಚಿತವಾಗಿ ಮಾತನಾಡಿದರು.
ಮುಖ್ಯ ಅತಿಥಿ ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ರಾಜಾ ಬಿ.ಎಸ್‌ರವರು ಮಾತನಾಡಿ ಹವ್ಯಕ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಆಯೋಜಿಸುವ ಮೂಲಕ, ಹವ್ಯಕ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ದೊರೆತಿದೆ ಎಂದು ಹೇಳಿದರು.
ಅಭಿನಂದನಾ ಗ್ರಂಥ ಬಿಡುಗಡೆ
ಸೇರಾಜೆ ಸೀತಾರಾಮ ಭಟ್ ಅಭಿನಂದನಾ ಗ್ರಂಥ “ಸೀರಾಭಿನಂದನ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು ಹಾಗೂ ವಿಟ್ಲ ಶಂಭು ಸರ್ಮ ಅಭಿನಂದನ ಗ್ರಂಥ “ಶಂಭು-ಸ್ವಯಂಭು” ಕೃತಿಯ ರಕ್ಷ ಕಚವವನ್ನು ಬಿಡುಗಡೆಗೊಳಿಸಲಾಯಿತು.
ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಷಿ ವಿಟ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಮನೆಯಲ್ಲಿ ಮಮ್ಮಿ-ಡ್ಯಾಡಿ ಸಂಸ್ಕೃತಿ ಬೆಳೆಯುತ್ತಿರುವ ಈ ದಿನಗಳಲ್ಲಿ ನಮ್ಮ ಹವ್ಯಕ ಭಾಷೆಯನ್ನು ಬೆಳೆಸುವ ಪ್ರಯತ್ನವನ್ನು ನಾವು ಮಾಡಬೇಕು. ಮದುವೆ ಸಹಿತ ಶುಭ ಸಮಾರಂಭಗಳಲ್ಲಿ ಹವ್ಯಕ ಭಾಷೆಯಲ್ಲಿ ತಾಳಮದ್ದಳೆಯನ್ನು ಆಯೋಜನೆ ಮಾಡಿ ಎಂದು ಸಲಹೆಯನ್ನು ನೀಡಿದರು. ಪುತ್ತೂರು ಯಕ್ಷರಂಗದ ಅಧ್ಯಕ್ಷ ಸೀತಾರಾಮ ಶಾಸ್ತ್ರಿ ಕಾಡೂರು ಸ್ವಾಗತಿಸಿ, ಹಾಸ್ಯರತ್ನ ನಯನ ಕುಮಾರ್ ಅಭಿಮಾನಿ ಬಳಗದ ಉದಯ ನಯನ್ ಕುಮಾರ್ ವಂದಿಸಿದರು. ಎನ್.ಕೆ.ರಾಮಚಂದ್ರ ಭಟ್ ಪನೆಯಾಲರವರು ಕಾರ್‍ಯಕ್ರಮ ನಿರೂಪಿಸಿದರು
ಯಕ್ಷಗಾನ ತಾಳಮದ್ದಳೆ:
ಪೂರ್ವಾಹ್ನ 9.30 ರಿಂದ ಸೇರಾಜೆ ಸೀತಾರಾಮ ಭಟ್ಟ ವಿರಚಿತ ಹವ್ಯಕ ಪೌರಾಣಿಕ ಕಥಾನಕ ಆ-ರತಿ ಮದುವೆ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರು ರಮೇಶ ಭಟ್, ಮೃದಂಗ ಮತ್ತು ಚೆಂಡೆಯಲ್ಲಿ ಚಂದ್ರಶೇಖರ ಕೊಂಕಣಾಜೆ, ಪಿ.ಜಿ.ಜಗನ್ನಿವಾಸ ರಾವ್ ಪುತ್ತೂರು, ಗಣೇಶ್ ಭಟ್ ಬೆಳ್ಳಾರೆ, ಅದ್ವೈತ್ ಕನ್ಯಾನ ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಹಿರಣ್ಯ ವೆಂಕಟೇಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಕಲ್ಚಾರ್, ಸೇರಾಜೆ ಸೀತಾರಾಮ ಭಟ್ಟ, ಪಶುಪತಿ ಶಾಸ್ತ್ರಿ, ಡಾ| ಹರೀಶ್ ಜೋಷಿ ವಿಟ್ಲ, ಹರೀಶ ಬಳಂತಿಮೊಗರು, ಸಾವಿತ್ರಿ, ಉದಯ ನಯನ ಕುಮಾರ್‌ರವರು ಭಾಗವಹಿಸಿದರು.
ಕುಮಾರ ವಿಜಯ ತಾಳಮದ್ದಳೆ:
ಮಧ್ಯಾಹ್ನ 2 ರಿಂದ ಯಕ್ಷಗಾನ ತಾಳಮದ್ದಳೆ ಕುಮಾರ ವಿಜಯ ( ಕವಿ ಮುದ್ದಣ ವಿರಚಿತ ಪೌರಾಣಿಕ ಕಥಾನಕ) ನಡೆಯಿತು. ಹಿಮ್ಮೇಳದಲ್ಲಿ ಭಾಗವತರರಾಗಿ ಕುರಿಯ ಗಣಪತಿ ಶಾಸ್ತ್ರಿ, ರವಿಚಂದ್ರ ಭಟ್ ಪದ್ಯಾಣ, ಮೃದಂಗ ಮತ್ತು ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀನಾರಾಯಣ ಅಡೂರು, ಅದ್ವೈತ್ ಕನ್ಯಾನ, ಹಾಗೂ ಚಕ್ರತಾಳದಲ್ಲಿ ರಾಜೇಂದ್ರ, ಅರ್ಥಧಾರಿಗಳಾಗಿ ಸೂರಿಕುಮೇರಿ ಗೋವಿಂದ ಭಟ್ಟ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶಂಭು ಶರ್ಮ ವಿಟ್ಲ, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗೇರು, ಪಶುಪತಿ ಶಾಸ್ತ್ರಿ, ಸೇರಾಜೆ ಸೀತಾರಾಮ ಭಟ್, ಡಾ| ಹರೀಶ್ ಜೋಷಿ ವಿಟ್ಲರವರು ಭಾಗವಹಿಸಿದರು.
ಯಕ್ಷಗಾನವನ್ನು ಬೆಳೆಸುವುದೇ ಸಂಘಟನೆಯ ಗುರಿ
ಪುತ್ತೂರು ಯಕ್ಷರಂಗ ಸಂಸ್ಥೆಯ ಮೂಲಕ ನಮ್ಮ ಯುವ ಪೀಳಿಗೆಯಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಬೇಕೆಂಬ ಉದ್ದೇಶದಿಂದ ನಾವು ಕಾರ್‍ಯಕ್ರಮವನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತಿದ್ದೇವೆ. ಯಕ್ಷಪ್ರೇಮಿಗಳ ಸಹಕಾರ, ಪ್ರೋತ್ಸಾಹ ಸದಾ ದೊರೆಯುತ್ತಿದ್ದು, ಮುಂದೆಯೂ ತಮ್ಮ ಸಹಕಾರ ಬೇಕು
-ಸೀತಾರಾಮ ಶಾಸ್ತ್ರಿ ಕಾಡೂರು
ಅಧ್ಯಕ್ಷರು ಯಕ್ಷರಂಗ ಪುತ್ತೂರು