ಉಪ್ಪಿನಂಗಡಿ: ವಿದ್ಯಾರ್ಥಿಗಳು ಅಧ್ಯಯನದ ಸಂದರ್ಭದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಕಂಡುಕೊಳ್ಳಬೇಕು. ತನ್ನ ಪ್ರಸ್ತುತ ಭಾಗವಹಿಸುವಿಕೆಯನ್ನು ಈ ಹಿಂದಿನ ಭಾಗವಹಿಸುವಿಕೆಯ ಜೊತೆಗೆ ಹೋಲಿಕೆ ಮಾಡುವ ಮೂಲಕ ಪ್ರಗತಿ ಕಂಡುಕೊಳ್ಳಬೇಕು ಎಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶೇಖರ ಎಂ.ಬಿ. ಹೇಳಿದರು.
ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಆಯೋಜಿಸಿದ ವಾಣಿಜ್ಯ ಮತ್ತು ನಿರ್ವಹಣಾ ಸಂಘದ ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಯ ಪ್ರಜ್ಞೆ, ಪ್ರಾಮಾಣಿಕತೆ, ಕನಸಿನ ವಿಸ್ತರಣೆ, ಕನಸು ಸಾಕಾರಗೊಳಿಸಲು ನಿರಂತರ ಪ್ರಯತ್ನ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಕಾರಣವಾಗುತ್ತದೆ. ಅಧ್ಯಯನದ ಜೊತೆಗೆ ಕಲಿತ ವಿಷಯಗಳನ್ನು ಅಳವಡಿಸುವ ಮನೋಭಾವ ಇರಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಭಾಗದ ನೂತನ ಕಾರ್ಯಕ್ರಮವಾದ ವೃತ್ತಿ ಮಾರ್ಗದರ್ಶನ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹರಿಪ್ರಸಾದ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ನೂತನವಾಗಿ ಆರಂಭವಾದ ಉದ್ಯೋಗ ಮಾಹಿತಿ ಚಟುವಟಿಕೆಗಳ ವಾರ್ಷಿಕ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಐಕ್ಯೂಏಸಿ ಸಂಚಾಲಕ ಬಾಲಾಜಿ ಎಂ.ಪಿ., ವಿದ್ಯಾರ್ಥಿಗಳು ಇಂತಹ ಸಂಘಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುವುದರ ಮುಖಾಂತರ ತಮ್ಮ ಕೌಶಲ್ಯಗಳನ್ನು ವೃದ್ಧಿಸುವುದರ ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆಯನ್ನು ಕಂಡುಕೊಳ್ಳಬೇಕು ಎಂದರು.
ವಾಣಿಜ್ಯ ಮತ್ತು ನಿರ್ವಹಣಾ ಸಂಘದ ಸಂಚಾಲಕ ಅಹಮದ್ ಎಸ್.ಎಂ. ಮಾತನಾಡಿ, ಬಿಕಾಂ ಬಿಬಿಎ ಪದವಿಗಳು ಅತಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದು, ಈ ಪದವಿಗಳ ಮಹತ್ವವನ್ನು ಅರಿತು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ಪ್ರಗತಿ ಹೊಂದಬೇಕು ಎಂದು ತಿಳಿಸಿದರು.
ವಿದ್ಯಾರ್ಥಿನಿ ಫಾತಿಮಾತುಲ್ ಸಾನಿಯಾ ಸ್ವಾಗತಿಸಿದರು. ವಿದ್ಯಾರ್ಥಿ ಹೇಮಚಂದ್ರ ವಂದಿಸಿದರು. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.