ನಿಡ್ಪಳ್ಳಿ: ಗೋಡೆ ಹಂತದಲ್ಲಿ ಸ್ಥಗಿತಗೊಂಡ ಕಾಮಗಾರಿ..! – ನಿರ್ಲಕ್ಷ್ಯಕ್ಕೆ ಒಳಗಾಯಿತೇ ಅಂಬೇಡ್ಕರ್ ಭವನದ ಕಟ್ಟಡ

0

@ಯೂಸುಫ್‌ ರೆಂಜಲಾಡಿ

ಪುತ್ತೂರು ತಾಲೂಕಿನ ನಿಡ್ಪಳ್ಳಿಯಲ್ಲಿ 2023ನೇ ಜನವರಿ ತಿಂಗಳಲ್ಲಿ ಆರಂಭಿಸಲಾಗಿದ್ದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗಳು ಮೊದಲ ಹಂತದಲ್ಲೇ ಸ್ಥಗಿತಗೊಂಡಿವೆ. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಗಿತಗೊಳಿಸಲಾಗಿರುವ ಕಟ್ಟಡ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕೆಆರ್‌ಐಡಿಎಲ್ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಅಂಬೇಡ್ಕರ್ ಭವನ ಅರ್ಧದಲ್ಲೇ ಬಾಕಿಯಾಗಿದೆ ಎನ್ನುವ ಆರೋಪ ಸ್ಥಳೀಯವಾಗಿ ವ್ಯಕ್ತವಾಗಿದೆ.


ನಿಡ್ಪಳ್ಳಿ ಗ್ರಾ.ಪಂ ವ್ಯಾಪ್ತಿಯ ನಿಡ್ಪಳ್ಳಿಯಲ್ಲಿ ದಲಿತ ಸಮುದಾಯದ ಚಟುವಟಿಕೆಗಳಿಗಾಗಿ ಡಾ| ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕೆನ್ನುವುದು ಗ್ರಾಮ ವ್ಯಾಪ್ತಿಯ ದಲಿತ ಸಮುದಾಯದ ಬಹು ವರ್ಷಗಳ ಬೇಡಿಕೆಯಾಗಿತ್ತು. ಇಲ್ಲಿನ ಜನತೆಯ ಈ ಬೇಡಿಕೆಗೆ 2019-20ನೇ ಸಾಲಿನಲ್ಲಿ ಸ್ಪಂದನೆ ಸಿಕ್ಕಿತ್ತು.


ಸಮಾಜ ಕಲ್ಯಾಣ ಇಲಾಖೆ 2019-20ನೇ ಸಾಲಿನಲ್ಲಿ ತಾಲೂಕಿನ ಮೂರು ಕಡೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ತಲಾ ರೂ. 20ಲಕ್ಷ ಅನುದಾನದಂತೆ ಒಟ್ಟು ರೂ.60 ಲಕ್ಷ ಮಂಜೂರು ಮಾಡಿತ್ತು. ಈ ಮೂರು ಕಡೆಗಳಲ್ಲಿನ ಅಂಬೇಡ್ಕರ್ ಭವನ ಕಾಮಗಾರಿ ನಿರ್ವಹಿಸುವ ಜವಾಬ್ದಾರಿಯನ್ನು ಕೆಆರ್‌ಐಡಿಎಲ್ ಸಂಸ್ಥೆಗೆ ವಹಿಸಿ ಕೊಟ್ಟು ತಲಾ ರೂ.20 ಲಕ್ಷದಂತೆ ಒಟ್ಟು ರೂ.60 ಲಕ್ಷ ಅನುದಾನದ ಪೈಕಿ ತಲಾ ರೂ.6 ಲಕ್ಷದಂತೆ ಒಟ್ಟು ರೂ.18 ಲಕ್ಷ ಅನುದಾನ ಬಿಡುಗಡೆಗೊಳಿಸಿತ್ತು. ಈ ವೇಳೆ ಅಲ್ಲಿನ ದಲಿತರು ಕೊನೆಗೂ ತಮ್ಮ ಬಹುಕಾಲದ ಬೇಡಿಕೆಯೊಂದು ಈಡೇರಿತೆಂದು ಖುಷಿ ಪಟ್ಟಿದ್ದರು. ಆದರೆ ಈಗ ಖುಷಿಯ ಬದಲು ಆಕ್ರೋಶ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ನಿಡ್ಪಳ್ಳಿ ಗ್ರಾಮದ ನಿಡ್ಪಳ್ಳಿ ಶಾಂತದುರ್ಗಾ ದೇವಸ್ಥಾನದ ಬಳಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಕಾಯ್ದಿರಿಸಿದ 18 ಸೆಂಟ್ಸ್ ಜಾಗದ ಪೈಕಿ 10 ಸೆಂಟ್ಸ್ ಸ್ಥಳದಲ್ಲಿ 2023ನೇ ಸಾಲಿನ ಜನವರಿ ತಿಂಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಕಾಂಕ್ರೀಟ್ ಬೆಲ್ಟ್ ಬಳಸಿದ ಅಡಿಪಾಯದೊಂದಿಗೆ ಪಿಲ್ಲರ್ ಅಳವಡಿಸಿ ಆರಂಭಿಸಲಾಗಿದ್ದ ಕಾಮಗಾರಿ ಲಿಂಟಲ್ ಹಂತದಲ್ಲೇ ಸ್ಥಗಿತಗೊಂಡಿದೆ. ಕಳೆದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಮೊದಲು ಅಪೂರ್ಣ ಗೋಡೆ ಹಂತದಲ್ಲಿ ಅರ್ಧಂಬರ್ಧ ಸ್ಥಿತಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಮತ್ತೆ ಮುಂದುವರಿಸುವ ಕೆಲಸ ಈ ತನಕ ನಡೆದಿಲ್ಲ.


ಅರ್ಧಂಬರ್ಧ ಕಾಮಗಾರಿ ನಿರ್ವಹಿಸಿ ಅರ್ಧದಲ್ಲೇ ಸ್ಥಗಿತಗೊಳಿಸಿ ಹೋದ ಕೆಆರ್‌ಐಡಿಎಲ್ ಸಂಸ್ಥೆಯವರ ಪತ್ತೆಯೇ ಇಲ್ಲ ಎಂಬುವುದು ಈ ಭಾಗದ ದಲಿತ ಸಮುದಾಯದವರ ಆರೋಪ. ನಿಡ್ಪಳ್ಳಿಯಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಗೋಡೆ ಹಂತದಲ್ಲೇ ಬಾಕಿಯಾಗಿರುವ ಅಂಬೇಡ್ಕರ್ ಭವನದ ಕಾಮಗಾರಿ ಕಳಪೆಯಾಗಿದ್ದು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಿಡ್ಪಳ್ಳಿ ಗ್ರಾಮಸ್ಥರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.


ಹೋರಾಟದ ಎಚ್ಚರಿಕೆ:

2023ನೇ ಜನವರಿ ತಿಂಗಳಲ್ಲಿ ನಿಡ್ಪಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿಯಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯವರು ಈ ಕಾಮಗಾರಿ ನಿರ್ವಹಿಸಿದ್ದಾರೆ, ಅಂಬೇಡ್ಕರ್ ಭವನದ ಗೋಡೆಯ ಕೆಲಸ ಮಾತ್ರ ಆಗಿದ್ದು, ಮೇಲ್ಛಾವಣಿ ನಿರ್ಮಾಣ, ಕಿಟಿಕಿ ಬಾಗಿಲುಗಳ ಜೋಡಣೆ, ಎದುರು ಭಾಗದಲ್ಲಿ ಸಿಟೌಟ್ ನಿರ್ಮಾಣ, ಸಾರಣೆ (ಗಾರೆ) ಕಾಮಗಾರಿಗಳು ಬಾಕಿಯಿದ್ದು, ಕೇವಲ ನಾಲ್ಕೈದು ಲಕ್ಷದ ಕಾಮಗಾರಿ ಮಾತ್ರ ಇಲ್ಲಿ ನಡೆದಿರಬಹುದು.

ಆದಷ್ಟು ಬೇಗನೆ ಕಾಮಗಾರಿಯನ್ನು ವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂಬುವುದು ನಮ್ಮ ಆಗ್ರಹ. ಅಂಬೇಡ್ಕರ್ ಭವನಕ್ಕಾಗಿ 2001ರಿಂದ ನಾವು ಹೋರಾಟ ಮಾಡಿದ ಫಲವಾಗಿ ಇಲ್ಲಿಗೆ ಅಂಬೇಡ್ಕರ್ ಭವನ ಮಂಜೂರಾಗಿತ್ತು. ಇದೀಗ ಅರ್ಧದಲ್ಲಿ ಸ್ಥಗಿತಗೊಂಡಿರುವ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸದಿದ್ದಲ್ಲಿ ದಲಿತ ಸಮುದಾಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರರು ಕೃಷ್ಣ ನಿಡ್ಪಳ್ಳಿ ತಿಳಿಸಿದ್ದಾರೆ.


ಪುತ್ತೂರು ತಾಲೂಕಿನ ನಿಡ್ಪಳ್ಳಿ, ಇರ್ದೆ ಹಾಗೂ ಶಾಂತಿಗೋಡು ಗ್ರಾಮಗಳಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿದೆ. ಅದರ ಕಾಮಗಾರಿಯನ್ನು ಕೆಆರ್‌ಐಡಿಎಲ್ ಸಂಸ್ಥೆಯವರು ನಿರ್ವಹಿಸುತ್ತಿದ್ದು, ಅವರಿಗೆ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಮೊದಲ ಹಂತದಲ್ಲೇ ಕಾಮಗಾರಿ ಸ್ಥಗಿತಗೊಂಡಿದ್ದು ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಕೆಆರ್‌ಐಡಿಎಲ್ ಸಂಸ್ಥೆಯ ಜವಾಬ್ದಾರಿಯಾಗಿದೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಕಡೆಯಿಂದ ಕೆಆರ್‌ಡಿಎಲ್ ಸಂಸ್ಥೆಗೆ ನೋಟೀಸು ಕಳುಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here