ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್‌ರವರಿಗೆ ಬೀಳ್ಕೊಡುಗೆ

0

ಪುತ್ತೂರು:ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಸುಧೀರ್ಘ 37 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಸೆ.30ರಂದು ನಿವೃತ್ತಿಗೊಂಡಿರುವ ಜಿನ್ನಪ್ಪ ಸಾಲ್ಯಾನ್‌ರವರಿಗೆ ವಿದಾಯ ಸಮಾರಂಭವು ಅ.6ರಂದು ಬೆಳಿಗ್ಗೆ ಸಂಘದ ಸಭಾ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಮಾತನಾಡಿ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾಗಿ ನಿರ್ವಹಣೆ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ. ಹಾಲಿನ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಹೈನುಗಾರರೊಂದಿಗೆ ನಿಷ್ಠುರರಾಗಿಬೇಕಾಗುತ್ತದೆ. ಮುಂಡೂರು ಸಂಘದ ಕಾರ್ಯದರ್ಶಿಯಾಗಿ ಜಿನ್ನಪ್ಪ ಸಾಲ್ಯಾನ್ ಒಕ್ಕೂಟ ಪ್ರಾರಂಭವಾದಾಗಿನಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಂಘದಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿ ಜನ ಮೆಚ್ಚುಗೆ ಪಡೆದವರು ಎಂದರು.


ಅಭಿನಂದನಾ ಭಾಷಣ ಮಾಡಿದ ಸಂಘದ ಮಾಜಿ ಅಧ್ಯಕ್ಷ ಹರೀಶ್ ಪುತ್ತೂರಾಯ ಮಾತನಾಡಿ, ಸಂಘದ ಪ್ರಥಮ ಕಾರ್ಯದರ್ಶಿ ನೇಮಕಗೊಂಡ ಜಿನ್ನಪ್ಪ ಸಾಲ್ಯಾನ್ ಸಂಘದಲ್ಲಿ ಪ್ರಥಮ ನಿವೃತ್ತಿ ಹೊಂದುತ್ತಿದ್ದಾರೆ. ಕಾರ್ಯದರ್ಶಿಯಾಗಿ ಸಂಘಕ್ಕೆ ಶಿಸ್ತು ತರುವ ಕೆಲಸವಾಗಿದೆ. ಅವರ ಅವಧಿಯಲ್ಲಿ ಸಂಘಕ್ಕೆ ಸ್ವಂತ ಕಟ್ಟಡ, ಎಎಂಸಿ. ಬಿಎಂಸಿ ಸ್ಥಾಪನೆಯಾಗಿದೆ. ಆಡಳಿತ ಮಂಡಳಿಯ ಜೊತೆಗೆ ಅವರ ಸಹಕಾರ ಶ್ಲಾಘನೀಯ. ಪ್ರಾಮಾಣಿಕ ಸೇವೆಯ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಿದ ಕರ್ಮಯೋಗಿಯಾಗಿದ್ದಾರೆ ಎಂದರು.


ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಸಂಘದ ಹಾಗೂ ಹೈನುಗಾರರ ಅಭಿವೃದ್ಧಿಗೆ ಶ್ರಮಿಸಿದ್ದ ಜಿನ್ನಪ್ಪ ಸಾಲ್ಯಾನ್ ನಿಜವಾದ ಕರ್ಮಯೋಗಿಯಾಗಿದ್ದಾರೆ. ಅವರ ಯಾವುದೇ ವಿಚಾರದಲ್ಲಿಯೂ ಅವರಲ್ಲಿ ಋಣಾತ್ಮಕ ಗುಣಗಳಿಲ್ಲ. ಈ ಭಾಗದಲ್ಲಿ ಬಿಎಂಸಿ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದವರು. ನಿವೃತ್ತಿಯಾದರೂ ಅವರ ಸೇವೆ ಸಂಘಕ್ಕೆ ನಿರಂತರವಾಗಿರಬೇಕು ಎಂದರು.


ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ, ಗ್ರಾಮದಲ್ಲಿ ರೈತರ ಆರ್ಥಿಕತೆಗೆ ಅಡಿಪಾಯ ಹಾಕಿರುವ ಸಂಘವು ಈಗ ಗ್ರಾಮದಲ್ಲಿ ಗುರುತಿಸುವ ಸಂಸ್ಥೆಯಾಗಿದೆ. ಈ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಜಿನ್ನಪ್ಪ ಸಾಲ್ಯಾನ್ ಹೆಸರು ಸಂಘದಲ್ಲಿ ಶಾಶ್ವತ ಉಳಿಯಲಿದೆ. ಪರಿಸರಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿದ ಅವರು ಜನರ ಪ್ರೀತಿ ಗಳಿಸಿದ್ದಾರೆ ಎಂದರು.


ಸನ್ಮಾನ ಸ್ವೀಕರಿಸಿದ ನಿವೃತ್ತ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್ ಮಾತನಾಡಿ, ಮುಂಡೂರು ಗ್ರಾಮದಲ್ಲಿ ಹೈನುಗಾರಿಕೆ ಹಾಗೂ ಅಭಿವೃದ್ಧಿ ಸಂಘದ ಅಭಿವೃದ್ಧಿಯಲ್ಲಿ ಸಾಕಷ್ಟು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ನನ್ನ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಮಾತನಾಡಿ, ಸಂಘದ ಕಾರ್ಯದರ್ಶಿಯಾಗಿ ಸುಧೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಿನ್ನಪ್ಪ ಸಾಲ್ಯಾನ್ ನಗುಮೊಗದಿಂದ ಸೇವೆ ನೀಡಿದವರು. ಮಿತ ಭಾಷಿಯಾಗಿ ಎಲ್ಲಾ ಕೆಲಸಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದವರು. ಅವರ ಕಾರ್ಯವೈಖರಿಯಿಂದಾಗಿ 2023-24ನೇ ಸಾಲಿನಲ್ಲಿ ಸಂಘವು ಎರಡನೇ ಸ್ಥಾನ ಪಡೆದುಕೊಂಡಿದೆ. ನಿವೃತ್ತಿಯ ಬಳಿಕವು ಅವರು ಸೇವೆ ಸಲ್ಲಿಸುವ ಭರವಸೆ ನೀಡಿದ್ದಾರೆ ಎಂದರು.


ನಿವೃತ್ತರನ್ನು ಸನ್ಮಾನಿಸಿದ ಸಂಘದ ಮಾಜಿ ಅಧ್ಯಕ್ಷ ಎಂ.ಪಿ ಬಾಲಕೃಷ್ಣ, ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀದೇವಿ, ಸ್ಥಾಪಕ ಅಧ್ಯಕ್ಷ ಗಂಗಯ್ಯ ಬಂಗೇರ ಮಾತನಾಡಿ, ನಿವೃತ್ತ ಜೀವನಕ್ಕೆ ಶುಭಹಾರೈಸಿದರು.


ಸನ್ಮಾನ:
ನಿವೃತ್ತ ಕಾರ್ಯದರ್ಶಿ ಜಿನ್ನಪ್ಪ ಸಾಲ್ಯಾನ್‌ರವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಆಲಡ್ಕ ರಾಧಾಕೃಷ್ಣ ಪುತ್ತೂರಾಯ, ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘ, ರಾಮಣ್ಣ ಗೌಡ ಪಜಿಮಣ್ಣು, .ಯತೀಶ್ ಕಂಪ ಮೊದಲಾದವರು ಜಿನ್ನಪ್ಪ ಸಾಲ್ಯಾನ್‌ರವರನ್ನು ಗೌವಿಸಿದರು.


ಆರಾಧ್ಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಎ., ನಿರ್ದೇಶಕರಾದ ಉದಯ ಕುಮಾರ್, ರಮೇಶ್, ಸೇಸಪ್ಪ ರೈ, ಜಯಾನಂದ ಆಳ್ವ, ಜಯಗುರು ಆಚಾರ್, ದೇವಕಿ, ಶಾರದಾ, ಉಮೇಶ್ ಗೌಡ ಅತಿಥಿಗಳನ್ನು ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು. ರವಿ ಕುಮಾರ್ ರೈ ಕೆದಂಬಾಡಿ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ವೇದಶ್ರೀ ವಂದಿಸಿದರು. ನಿರ್ದೇಶಕರಾದ ರಂಜಿತ್ ಕೆ., ಚೇತನಾ, ಗಿರಿಜ, ಸಿಬಂದಿಗಳಾದ ಸುರೇಶ್ ಎ ಹಾಗೂ ಜ್ಯೋತಿ ಸಹಕರಿಸಿದರು.

LEAVE A REPLY

Please enter your comment!
Please enter your name here