2 ತಿಂಗಳ ಗೌರವಧನ ಪಾವತಿಯಾಗದೆ ಪರದಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು

0

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಗೌರವಧನ ಪಾವತಿಯಾಗದೇ ಬಾಕಿ ಇದ್ದು ಅ.15ರೊಳಗೆ ಗೌರವಧನ ಪಾವತಿಯಾಗದಿದ್ದಲ್ಲಿ ಅ.22ರಂದು ಪುತ್ತೂರು ಸಿಡಿಪಿಒ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲು ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದಲ್ಲಿ ತೀರ್ಮಾನಿಸಲಾಗಿದೆ.


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಮಾಸಿಕ ಸಭೆ ಅ.5ರಂದು ನಡೆಯಿತು. ಸಂಘದ ಅಧ್ಯಕ್ಷೆ ಕಮಲ ಮಾತನಾಡಿ ಆಗಸ್ಟ್ ತಿಂಗಳಿನಿಂದ ಗೌರವಧನ ಪಾವತಿಯಾಗದೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ವರ್ಷದಿಂದ ಸರಿಯಾದ ಸಮಯಕ್ಕೆ ಗೌರವಧನ ಪಾವತಿಯಾಗುತ್ತಿಲ್ಲ. ರಾಜ್ಯದಾದ್ಯಂತ ಈ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಸರಕಾರ ನೀಡುವ ಅತ್ಯಲ್ಪ ಗೌರವಧನವನ್ನೂ ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ನೆರೆಯ ಕೇರಳ ರಾಜ್ಯದಲ್ಲಿ ಪ್ರತೀ ತಿಂಗಳ 5ನೇ ತಾರೀಖಿಗೆ ಗೌರವಧನ ಪಾವತಿಯಾಗುತ್ತದೆ. ಅಂಗನವಾಡಿ ಕೇಂದ್ರಗಳು ಜಾರಿಗೆ ಬಂದು 50 ವರ್ಷವಾದರೂ ಇನ್ನೂ ಕನಿಷ್ಟ ವೇತನ ಜಾರಿ ಆಗಲಿಲ್ಲ. ಗ್ಯಾಸ್ ಬಿಲ್, ಮೊಟ್ಟೆ ಬಿಲ್ ಪಾವತಿಯಾಗಿಲ್ಲ. ಕಾರ್ಯಕರ್ತೆಯರು ತಮ್ಮ ಕೈಯಿಂದ ಹಣ ಹಾಕಿ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆ ನೀಡುತ್ತಿದ್ದಾರೆ ಎಂದು ಹೇಳಿದರು. ಗೌರವಧನ ಪಾವತಿಯಾಗುವವರೆಗೆ ಕೇಂದ್ರ ಸರಕಾರದ ಪೋಷಣ್ ಟ್ರ್ಯಾಕರ್ ಆಪ್‌ನಲ್ಲಿ ಯಾವುದೇ ಮಾಹಿತಿ ಅಪ್‌ಲೋಡ್ ಮಾಡುವುದಿಲ್ಲ ಎಂದು ತಾಲೂಕು, ಜಿಲ್ಲಾ ಹಾಗೂ ರಾಜ್ಯದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅ.15ರೊಳಗೆ ಗೌರವಧನ ಪಾವತಿಯಾಗದಿದ್ದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಸಿಡಿಪಿಒ ಕಛೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.


ಕ್ರಶ್ ಜಾರಿಗೆ ವಿರೋಧ:
6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕ್ರಶ್ ಎನ್ನುವ ಯೋಜನೆ ಜಾರಿಗೆ ತರಲಾಗಿದೆ. ಅಂಗನವಾಡಿಗಳಲ್ಲಿ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳ ಜತೆ ಇದೀಗ ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ಅಸಾದ್ಯ. ಈ ಯೋಜನೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಪ್ರತ್ಯೇಕ ಸಿಬಂದಿ ನೇಮಕ ಮಾಡಿದ ನಂತರವೇ ಕ್ರಶ್ ಯೋಜನೆ ಪ್ರಾರಂಭಿಸಬೇಕು ಎಂದು ಹೇಳಿದರು.


ಸಂಘದ ಜಿಲ್ಲಾಧ್ಯಕ್ಷೆ ಅರುಣ ಡಿ., ತಾಲೂಕು ಸಂಘದ ಮಾಜಿ ಅಧ್ಯಕ್ಷೆ ಮಲ್ಲಿಕಾ ಎಸ್.ಆಳ್ವ, ಮೀನಾಕ್ಷಿ ಬೆಳ್ಳಿಪ್ಪಾಡಿ, ಶ್ರೀಲತಾ ಎಸ್. ರಾವ್, ಮಾಜಿ ಕಾರ್ಯದರ್ಶಿ ಜಯಲತಾ, ಉಪಾಧ್ಯಕ್ಷೆ ಸಂಧ್ಯಾ, ಜತೆ ಕಾರ್ಯದರ್ಶಿ ತೀರ್ಥಕುಮಾರಿ ಹಾಗೂ ವಲಯಾಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು. ಕೋಶಾಽಕಾರಿ ಶೈಲಜ ಈಶ್ವರಮಂಗಲ ಸ್ವಾಗತಿಸಿ ಕಾರ್ಯದರ್ಶಿ ಪುಷ್ಪಲತ ಕೊಳ್ತಿಗೆ ವಂದಿಸಿದರು.

LEAVE A REPLY

Please enter your comment!
Please enter your name here