ಪುತ್ತೂರು: ಬಾಂತಲಪ್ಪು ಜನಸೇವಾ ಸಮಿತಿ ಕುಂಬ್ರ ಇದರ ಆಶ್ರಯದಲ್ಲಿ 2 ನೇ ವರ್ಷದ ಕುಂಬ್ರದ ಮಾರ್ನೆಮಿದ ಗೌಜಿ ಆಯ್ದ ಸ್ಥಳೀಯ ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆ ಅ.10 ರಂದು ಸಂಜೆ ಕುಂಬ್ರ ಜಂಕ್ಷನ್‌ನಲ್ಲಿರುವ ಕುಂಬ್ರ ಚೆನ್ನಪ್ಪ ರೈ-ಕುಂಬ್ರ ಜತ್ತಪ್ಪ ರೈ ಸ್ಮಾರಕ ಅಶ್ವತ್ಥ ಕಟ್ಟೆಯ ಬಳಿ ನಡೆಯಲಿದೆ.
ಬನ್ನೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುತ್ತೂರು ಶ್ರೀರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ ಹಾಗೂ ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ ಶೇಖರ ರೈ ಕುರಿಕ್ಕಾರರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈಯವರು ಸನ್ಮಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅತಿಥಿಗಳಾಗಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಮಾರ್ನೆಮಿ ವೇಷಧಾರಿಗಳ ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನವಾಗಿ 2 ಮುಡಿ ಅಕ್ಕಿ, ದ್ವಿತೀಯ ಬಹುಮಾನವಾಗಿ 1 ಮುಡಿ ಅಕ್ಕಿ ಹಾಗೂ ತೃತೀಯ ಬಹುಮಾನವಾಗಿ 1 ಮುಡಿ ಅಕ್ಕಿಯನ್ನು ನೀಡಲಾಗುತ್ತದೆ. ಇದಲ್ಲದೆ ಭಾಗವಹಿಸಿದ ಪ್ರತಿ ತಂಡಕ್ಕೆ ಗೌರವ ಧನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ. ವಿಶೇಷವಾಗಿ ಮಾರ್ನೆಮಿಯ ವಿವಿಧ ಗುಂಪು ಹಾಗೂ ವೈಯುಕ್ತಿಕ ವೇಷಧಾರಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಿ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಮೋಹನ್ ಆಳ್ವ ಮುಂಡಾಲ ಮತ್ತು ನೇಮಾಕ್ಷ ಸುವರ್ಣರವರ ಜುಗಲ್ ಬಂದಿ ನಿರೂಪಣೆ ಇರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಮೀಣ ವೇಷಧಾರಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಬಾಂತಲಪ್ಪ ಜನಸೇವಾ ಸಮಿತಿಯ ಅಧ್ಯಕ್ಷ ಎ.ರಕ್ಷಿತ್ ರೈ ಮುಗೇರು,ಗೌರವಾಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಸಂಚಾಲಕ ಶಶಿಕಿರಣ್ ರೈ ನೂಜಿಬೈಲು, ಕೋಶಾಧಿಕಾರಿ ಅಶ್ರಫ್ ಉಜಿರೋಡಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಪೂಜಾರಿ ಬೊಳ್ಳಾಡಿ, ಉಪಾಧ್ಯಕ್ಷ ವಿನೋದ್ ಶೆಟ್ಟಿ ಮುಡಾಲ ಹಾಗೂ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕುಂಬ್ರದ ಪಿಲಿಗೊಬ್ಬು
ಗ್ರಾಮೀಣ ಪ್ರದೇಶದ ಮಾರ್ನೆಮಿಯ ಹುಲಿ ವೇಷಧಾರಿಗಳಿಗೆ ವೇದಿಕೆ ನೀಡುವ ಮೂಲಕ ಪ್ರೋತ್ಸಾಹ ನೀಡಿದ ಮೊದಲ ಹೆಗ್ಗಳಿಕೆ ಬಾಂತಲಪ್ಪ ಜನಸೇವಾ ಸಮಿತಿಗೆ ಸಲ್ಲುತ್ತದೆ. ನವರಾತ್ರಿ ಸಂದರ್ಭದಲ್ಲಿ ಹುಲಿ, ಕರಡಿ, ಸಿಂಹ ಇತ್ಯಾದಿ ವೇಷ ಹಾಕಿ ನರ್ತನ ಮಾಡುವ ಮೂಲಕ ದೇವರ ಹರಕೆ ಸಲ್ಲಿಸುತ್ತಿದ್ದ ಗ್ರಾಮೀಣ ಪ್ರತಿಭೆಗಳಿಗೆ ಕುಂಬ್ರದ ಮಾರ್ನೆಮಿಯ ಗೌಜಿ ಎಂಬ ಕಾರ್ಯಕ್ರಮ ಆಯೋಜಿಸಿ ಆ ಪ್ರತಿಭೆಗಳಿಗೆ ವೇದಿಕೆ ನೀಡುವ ಮೂಲಕ ಅವರಿಗೆ ಬಹುಮಾನ ಹಾಗೂ ಗೌರವ ಧನದ ಪ್ರೋತ್ಸಾಹ ನೀಡುವ ಕೆಲಸ ಜನಸೇವಾ ಸಮಿತಿಯಿಂದ ಆರಂಭಗೊಂಡು ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಮೊದಲ ವರ್ಷದಲ್ಲಿ ಸುಮಾರು 19 ತಂಡಗಳು ಭಾಗವಹಿಸಿ ದಾಖಲೆ ನಿರ್ಮಿಸಿದೆ.ನಮ್ಮದು ಏನಿದ್ದರೂ ಗ್ರಾಮೀಣ ಪ್ರದೇಶದ ಪಿಲಿಗೊಬ್ಬು ಆಗಿದೆ. ಇಲ್ಲಿ ಭಾಗವಹಿಸುವ ತಂಡಗಳು ಪಕ್ಕಾ ಗ್ರಾಮೀಣ ವೇಷಧಾರಿಗಳು ತಂಡಗಳಾಗಿವೆ. ಇದೊಂದು ಪ್ರೋತ್ಸಾಹದ ಸ್ಪರ್ಧೆ ಆಗಿದೆ ಎನ್ನುತ್ತಾರೆ ಬಾಂತಲಪ್ಪ ಜನಸೇವಾ ಸಮಿತಿ ಅಧ್ಯಕ್ಷ ಎ.ರಕ್ಷಿತ್ ರೈ ಮುಗೇರುರವರು.