ಉಪ್ಪಿನಂಗಡಿ: ಕಾಫಿ ಮಂಡಳಿಯವರಿಂದ ಬೆಳೆಗಾರರಿಗೆ ಮಾಹಿತಿ-ಸಾಧಕ, ಬಾಧಕಗಳ ಬಗ್ಗೆ ಪರಿಶೀಲನೆ

0

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಮಣ್ಣು ರೊಬಸ್ಟ ಕಾಫಿ ತಳಿಯನ್ನು ಉಪ ಬೆಳೆಯಾಗಿ ಬೆಳೆಯಲು ಸೂಕ್ತವಾಗಿದೆ ಎಂದು ಕೊಡಗು ಜಿಲ್ಲೆಯ ಚೆಟ್ಟಳ್ಳಿ ಕಾಫಿ ಬೋರ್ಡು ಸಂಶೋಧನಾ ವಿಭಾಗದ ಉಪ ನಿರ್ದೇಶಕಿ, ಮಡಿಕೇರಿ ಕಾಫಿ ಮಂಡಳಿಯ ನಿರ್ದೇಶಕಿ ಆಗಿರುವ ಡಾ. ಝೀನಾ ದೇವಸ್ಯ ಹೇಳಿದರು.


ಉಪ್ಪಿನಂಗಡಿಯ ಪಂಜಳದ ಚಂದ್ರಶೇಖರ್ ತಾಳ್ತಜೆಯವರು ತನ್ನ ಅಡಿಕೆ ತೋಟದಲ್ಲಿ ಉಪ ಬೆಳೆಯಾಗಿ ಮಾಡಿರುವ ಕಾಫಿ ಬೆಳೆಯನ್ನು ಕಾಫಿ ಮಂಡಳಿಯ ಪರಿಶೀಲನಾ ಸಮಿತಿ ತಂಡದೊಂದಿಗೆ ಪರಿಶೀಲನೆ ನಡೆಸಿದ ಬಳಿಕ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಕಾಫಿ ಬೆಳೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು.


ಕಾಫಿ ತಳಿಯಲ್ಲಿ ಅರಾಬಿಕ ಮತ್ತು ರೊಬಸ್ಟ ಎಂಬ 2 ತಳಿಗಳಿದ್ದು, ಈ ಪೈಕಿ ಸಾಮಾನ್ಯವಾಗಿ ಅರಾಬಿಕಗೆ ಸಮುದ್ರ ಮಟ್ಟದಿಂದ 200 ಮೀಟರ್ ಎತ್ತರ ಇರಬೇಕಾಗುತ್ತದೆ, ಆದರೆ ಈ ಪ್ರದೇಶಗಳು ಸಮುದ್ರ ಮಟ್ಟದಿಂದ 70 ಮೀಟರ್ ಎತ್ತರದಲ್ಲಿ ಇದ್ದು, ಇಲ್ಲಿಗೆ ರೊಬಸ್ಟ ತಳಿ ಹೊಂದಿಕೆಯಾಗುತ್ತದೆ. ಈ ಭಾಗದಲ್ಲಿ ಈಗಾಗಲೇ ಬಹಳಷ್ಟು ಮಂದಿ ಕಾಫಿ ಬೆಳೆ ಮಾಡಿಕೊಂಡಿದ್ದು, ನಿರ್ವಹಣೆ ಕೊರತೆಯಿಂದ ಅವುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗಲು ಸಾಧ್ಯವಾಗಿಲ್ಲವಾದರೂ ಕಾಫಿ ಗಿಡಗಳ ಬೆಳವಣಿಗೆ ಶೇಕಡಾ 50ರಿಂದ 70ರಷ್ಟು ಸರಿಯಾಗಿವೆ. ಮುಂದೆ ಅದರದ್ದೇ ಆದ ಕ್ರಮಗಳನ್ನು ಅನುಸರಿಸಿಕೊಂಡು ಕಾಳಜಿಯಿಂದ ನಿರ್ವಹಣೆ ಮಾಡಿದರೆ ಈ ಭಾಗದಲ್ಲಿಯೂ ಕಾಫಿ ಬೆಳೆಯಲ್ಲಿ ಉತ್ತಮ ಇಳುವರಿ ತೆಗೆಯಲು ಸಾಧ್ಯ ಎಂದರು.


ಚಂದ್ರಶೇಖರ್ ತಾಳ್ತೆಜೆಯವರು ತನ್ನ ಅಡಿಕೆ ತೋಟದಲ್ಲಿ ಸುಮಾರು 500 ಕಾಫಿ ಗಿಡಗಳನ್ನು ನೆಟ್ಟು ಇಳುವರಿ ತೆಗೆಯುತ್ತಿದ್ದು, ಸಂಶೋಧನಾ ವಿಭಾಗದ ಉಪ ನಿರ್ದೇಶಕಿ ಡಾ. ಝೀನಾ ದೇವಸ್ಯ, ವಿಸ್ತರಣಾ ವಿಭಾಗದ ಡಾ. ಚಂದ್ರಶೇಖರ್, ಕಾಫಿ ಮಂಡಳಿಯ ಮಣ್ಣು ವಿಜ್ಞಾನಿ ಎಸ್.ಎ. ನದಾಫ್, ಬೇಸಾಯ ತಜ್ಞ ಡಾ. ನಾಗರಾಜ್ ಗೋಕವಿ ಅವರನ್ನು ಒಳಗೊಂಡ 4 ಮಂದಿಯ ಕಾಫಿ ಮಂಡಳಿ ಸಮಿತಿ ಸದಸ್ಯರು ಸುಮಾರು 2 ತಾಸು ತೋಟದಲ್ಲಿ ಪ್ರತಿಯೊಂದು ಗಿಡಗಳನ್ನು ಪರಿಶೀಲನೆ ನಡೆಸಿ, ಪ್ರಾತ್ಯಕ್ಷಿತೆ ರೀತಿಯಲ್ಲಿ ತಾಲೂಕಿನಾದ್ಯಂತದಿಂದ ಆಗಮಿಸಿದ ಕಾಫಿ ಬೆಳೆಗಾರರಿಗೆ ಗಿಡಗಳ ಪರಿಚಾರಿಕೆ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭ ಪುತ್ತೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಈ ಭಾಗದ ಕಾಫಿ ಬೆಳೆಗಾರರಾದ ಅಜಿತ್ ಪ್ರಸಾದ್ ದಾರಂದಕುಕ್ಕು, ಪುಷ್ಪರಾಜ್ ಅಡೇಕಲ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್, ಸಿಬ್ಬಂದಿ ಪ್ರವೀಣ್ ಆಳ್ವ, ಸಿಪಿಸಿಆರ್‌ಐ ನಿವೃತ ವಿಜ್ಞಾನಿ ಡಾ. ಯದುಕುಮಾರ್, ಅನಂತಕೃಷ್ಣ ಪೆರುವಾಯಿ, ಪುತ್ತೂರು ಆಕರ್ಷನ್ ಸಮೂಹ ಸಂಸ್ಥೆಯ ನಾಸಿರ್, ರೈತ ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಮ ಸುಳ್ಯ, ಡಾ. ತಾಳ್ತಜೆ ವಸಂತ ಕುಮಾರ್ ಮತ್ತಿತರರಿದ್ದರು.

ಅಡಿಕೆ ಬೆಲೆ ಕುಸಿತ ಹಾಗೂ ರೋಗ ಬಾಧೆಯ ಭೀತಿ ಕಾಡುತ್ತಿರುವ ಈ ದಿನಗಳಲ್ಲಿ ಉಪ ಬೆಳೆಯಾಗಿ ಕಾಫಿ ಬೆಳೆ ಮಾಡಿದ್ದು, ಇಲ್ಲಿನ ಮಣ್ಣು ಮತ್ತು ಇದರ ನಿರ್ವಹಣೆಯ ಬಗ್ಗೆ ನಮ್ಮೊಳಗೆ ಗೊಂದಲ ಇತ್ತು. ಆದರೆ ಇದೀಗ ಇಲ್ಲಿಗೆ ಆಗಮಿಸಿ ಅಧ್ಯಯನ, ಪರಿಶೀಲನೆ ನಡೆಸಿದ ಅಧಿಕಾರಿಗಳು ಇಲಾಖೆಗೆ ವರದಿ ನೀಡಿ ಮುಂದೆ ಅಧಿಕೃತ ಮಾನ್ಯತೆ ನೀಡುವ ಬಗ್ಗೆ ಭರವಸೆ ನೀಡಿರುವುದು ಆಶಾದಾಯಕವಾಗಿದೆ.
-ಚಂದ್ರಶೇಖರ ತಾಳ್ತಜೆ, ಕಾಫಿ ಬೆಳೆಗಾರ.

LEAVE A REPLY

Please enter your comment!
Please enter your name here