ಪುತ್ತೂರು ಪರ್ಲಡ್ಕ ಬಾಲವನದಲ್ಲಿ ಡಾ.ಶಿವರಾಮ ಕಾರಂತರ 123ನೇ ಜನ್ಮದಿನಾಚರಣೆ

0

ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆಗೊಂಡ ಕಾರ್ಯಕ್ರಮ

*ನಮಗಾಗದಿದ್ದರೂ ಹಲವು ಮಜಲುಗಳಲ್ಲಿ ಸಮಯ ಕೊಟ್ಟವರು ಕಾರಂತರು – ಎ.ಸಿ ಜುಬಿನ್ ಮೊಹಪಾತ್ರ

*ಕ್ರೀಯಾಶೀಲತೆಯನ್ನು ಮೈಗೂಡಿಸಿದಾಗ ಕಾರಂತರ ನೆನಪು ಸಾರ್ಥಕ – ಪ್ರೊ. ವಿ.ಬಿ ಅರ್ತಿಕಜೆ

ಪುತ್ತೂರು: ನಾವೆಲ್ಲ ಒಂದೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಂದರ್ಭ ಇತರ ವಿಚಾರಗಳಿಗೆ ಸಮಯ ಕೊಡಲಾಗುವುದಿಲ್ಲ. ಆದರೆ ಕಾರಂತರ ಜೀವನ ನೋಡಿದಾಗ ಅವರು ಹಲವು ಮಜಲುಗಳಿಗೆ ಸಮಯ ನೀಡಿದ್ದಾರೆ. ಅವರೊಬ್ಬ ಗಾಂಧಿವಾದಿ ಎಂದು ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರು ಹೇಳಿದರು.

ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ.ಕೋಟ ಶಿವರಾಮ ಕಾರಂತರ ಬಾಲವನ, ಸಹಾಯಕ ಆಯುಕ್ತರ ಕಾರ್ಯಾಲಯ, ಇದರ ವತಿಯಿಂದ ಕಡಲ ತಡಿಯ ಭಾರ್ಗವ ಎಂದೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಅ.10ರಂದು ಪುತ್ತೂರು ಪರ್ಲಡ್ಕದಲ್ಲಿರುವ ಬಾಲವನ ಡಾ.ಶಿವರಾಮ ಕಾರಂತರ ವಾಸ್ತವ್ಯವಿದ್ದ ಮನೆಯಲ್ಲಿ ಅ.10ರಂದು ವಿಧಾನ ಪರಿಷತ್ ಉಪಚುನಾವಣೆಗೆ ಸಂಬಂಧಿಸಿ ಮಾದರಿ ನೀತಿ ಸಂಹಿತೆ ಇರುವ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಿದ ಕಾರ್ಯಕ್ರಮದಲ್ಲಿ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರು ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು. ಡಾ. ಶಿವರಾಮ ಕಾರಂತರು ಬಹುಮುಖ ಪ್ರತಿಭೆ ಮೇರು ವ್ಯಕ್ತಿತ್ವ. ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಮೂಲ್ಯವಾದದ್ದು. ಕಾರಂತರು ಗಾಂಧಿವಾದಿಯಾಗಿದ್ದು, ಮಹತ್ಮಗಾಂಧೀಜಿ ಏನು ಮಾಡಿದ್ದಾರೋ ಅದೇ ರೀತಿ ಪ್ರಕೃರಿ ಸಂರಕ್ಷಣೆ, ಸಂಪ್ರದಾಯ, ಮಕ್ಕಳ ಭವಿಷ್ಯ, ಸ್ಥಳೀಯ ಸಂಪ್ರದಾಯ, ಯಕ್ಷಗಾನ ಸಹಿತ ಹಲವು ಮಜಲುಗಳಲ್ಲಿ ಕೆಲಸ ಮಾಡುವ ಮೂಲಕ ಎಲ್ಲಾ ವಿಚಾರಗಳಲ್ಲಿ ಗಮನಕೊಟ್ಟು ಹೇಗೆ ಪ್ರಗತಿ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಸಾಹಿತ್ಯ ಮತ್ತು ಕಲೆಯನ್ನು ಬಿಟ್ಟು ಸಾಮಾಜಿಕ ಕ್ಷೇತ್ರದಲ್ಲೂ ಅವರ ಕೊಡುಗೆ ಇದೆ. ಮಹಾತ್ಮಗಾಂಧಿ ಪುತ್ತೂರಿಗೆ ಬಂದಾಗ ಅವರಿಗೆ ಬೆಂಬಲ ನೀಡಿದರು. ಹರಿಜನರ ಅಧಿಕಾರದ ಬಗ್ಗೆ ಕಾಳಜಿ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸಹಾಯಕರ ಚಳುವಳಿಯಲ್ಲಿ ತೊಡಗಿಸಿಕೊಂಡರು. ಇಂತಹ ವ್ಯಕ್ತಿತ್ವ ಉಳ್ಳವರು ನಮ್ಮ ದಕ್ಷಿಣ ಕನ್ನಡ ಪುತ್ತೂರಿನಿಂದ ಬಂದಿರುವುದು ನಮಗೆ ಬಹಳ ಹೆಮ್ಮೆ. ನಮ್ಮ ಮುಂದಿನ ಪೀಳಿಗೆ ಇದನ್ನು ತಿಳಿದು ಕೊಳ್ಳಬೇಕು ಎಂದವರು ಹೇಳಿದರು.


ಕ್ರೀಯಾಶೀಲತೆಯನ್ನು ಮೈಗೂಡಿಸಿದಾಗ ಕಾರಂತರ ನೆನಪು ಸಾರ್ಥಕ
ಹಿರಿಯ ಸಾಹಿತಿ ಪ್ರೊ. ವಿ.ಬಿ.ಅರ್ತಿಕಜೆ ಅವರು ಮಾತನಾಡಿ ಡಾ.ಶಿವರಾಮ ಕಾರಂತರು ಸಂಜೆ ಸುಮಾರು 5 ಗಂಟೆ ಸುಮಾರಿಗೆ ಪರ್ಲಡ್ಕದಿಂದ ಈಗಿನ ಮಹಿಳಾ ಪೊಲೀಸ್ ಠಾಣೆಯ ತನಕ ನಡೆದು ಕೊಂಡು ಹೋಗಿ ಅಲ್ಲಿ ಶ್ರೀಧರ್ ಭಟ್ ಅಂಗಡಿಯ ಬಳಿ ಕೂತು ಅವರ ಸ್ನೇಹಿತ ಸದಾಶಿವ ರಾವ್ ಅವರ ಜೊತೆ ಮಾತುಕತೆ ಮಾಡುತ್ತಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರಿಗೆ ಅಸಂಬದ್ಧ, ಅಧಿಕ ಪ್ರಸಂಗಗಳಿದ್ದರೆ ಅಲ್ಲೆ ಖಂಡಿಸುತ್ತಿದ್ದರು. ಅಂತಹ ಕಾರಂತರು ನಮ್ಮ ಮುಂದೆ ಈಗ ಇಲ್ಲ. ಅದರೆ ಅವರು ನಡೆದಾಡಿದಂತಹ, ಓಡಾಡಿದಂತಹ ಶ್ರೇಷ್ಠ ಕೃತಿ ಬರೆದ ಪುಣ್ಯ ಭೂಮಿ ಅದು ಪುತ್ತೂರು. ಹಾಗಾಗಿ ನಾವು ಪುಣ್ಯವಂತರು. ಅಂತಹ ಶಿವರಾಮ ಕಾರಂತರ ಜನ್ಮದಿನದ ನೆಪದಲ್ಲಿ ಕಾರಂತರನ್ನು ಸ್ಮರಿಸುವುದು ಮಾತ್ರವಲ್ಲ ಅವರ ನೇರ ನಡೆನುಡಿ ಅವರ ಕ್ರಿಯಾಶಕ್ತಿ ಮುಖ್ಯ. ಅವರ ಕ್ರೀಯಾಶೀಲತೆಯನ್ನು ನಾವು ಮೈಗೂಡಿಸಿದಾಗ ಕಾರಂತರನ್ನು ನೆನಪಿಸಿದಕ್ಕೆ ಅದು ಸಾರ್ಥಕ ಎಂದು ಅವರು ಹೇಳಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ಲೋಕೋಪಯೋಗಿ ಇಲಾಖೆಯ ಸಹಾಯ ಕಾರ್ಯಾಪಾಲಕ ಅಭಿಯಂತರ ರಾಜಾರಾಮ್, ಕನ್ನಡ ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಉಪಸ್ಥಿತರಿದ್ದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಜಗನ್ನಾಥ ಸ್ವಾಗತಿಸಿದರು. ಗ್ರಾಮ ಆಡಳಿತಾಧಿಕಾರಿ ಹರ್ಷಿತಾ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಬಾಲವನದ ಅಶೋಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು

LEAVE A REPLY

Please enter your comment!
Please enter your name here