ಬೇಡಿಕೆ ಈಡೇರಿಕೆಗೆ ಸರಕಾರದಿಂದ ಸಕಾರಾತ್ಮಕ ಸ್ಪಂದನೆ-ಗ್ರಾಮ ಪಂಚಾಯತ್ ನೌಕರರ ಮುಷ್ಕರ ಕೊನೆಗೂ ಅಂತ್ಯ

0

ಪುತ್ತೂರು:ಅಧಿಕಾರಿ,ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ಭಡ್ತಿ ನೀಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಅಧಿಕಾರಿ, ನೌಕರರು ಹಾಗೂ ಸದಸ್ಯರ ಒಕ್ಕೂಟದಿಂದ ಅ.4ರಂದು ಆರಂಭಗೊಂಡಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ.

ಅ.10ರಂದು ಗ್ರಾ.ಪಂ ಸದಸ್ಯರ ಒಕ್ಕೂಟ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದದ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಗ್ರಾ.ಪಂ.ನೌಕರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಹಾಗೂ ಭರವಸೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.


ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟು, ಗ್ರಾ.ಪಂಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ದಾರಿದೀಪ ನಿರ್ವಹಣೆ ಹೊರತು ಪಡಿಸಿ ಉಳಿದ ಎಲ್ಲಾ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯದ ಎಲ್ಲಾ ಗ್ರಾ.ಪಂಗಳ ಅಽಕಾರಿ, ಸಿಬ್ಬಂದಿಗಳು ಅ.4ರಿಂದ ಮುಷ್ಕರ ನಡೆಸುತ್ತಿದ್ದರು.ಪುತ್ತೂರು,ಕಡಬ,ಸುಳ್ಯ,ಬಂಟ್ವಾಳ ತಾಲೂಕು ಗ್ರಾ.ಪಂ.ಗಳ ನೌಕರರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮುಷ್ಕರದಿಂದಾಗಿ ಗ್ರಾಮಾಂತರ ಪ್ರದೇಶದ ಜನತೆಗೆ ಅಗತ್ಯ ಆನ್‌ಲೈನ್ ಸೇವೆಯೂ ದೊರೆಯದೆ ಪರದಾಟ ನಡೆಸುವಂತಾಗಿತ್ತು.ಮೊದಲ ಎರಡು ದಿನ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆದು ಅ.7ರಿಂದ ರಾಜ್ಯದಾದ್ಯಂತ ಜಿ.ಪಂ ಕಚೇರಿಗಳ ಮುಂಭಾಗದಲ್ಲಿ ಧರಣಿ ಮುಂದುವರಿಸಿದ್ದರು.ಮುಷ್ಕರ ನಿರತ ಗ್ರಾ.ಪಂ.ನೌಕರರ ವಿರುದ್ಧ ಕ್ರಮಕೈಗೊಳ್ಳುವಂತೆ ಇಲಾಖಾ ಆಯುಕ್ತೆ ಡಾ|ಅರುಂಧತಿ ಚಂದ್ರಶೇಖರ್ ಅವರು ಜಿ.ಪಂ.ಸಿಇಒಗಳಿಗೆ ಪತ್ರಮುಖೇನ ಸೂಚಿಸಿದ್ದರು.ಆದರೆ,ಇದಕ್ಕೆ ಮಣಿಯದ ಗ್ರಾ.ಪಂ.ನೌಕರರು ಅ.9,10ರಂದು ಕಪ್ಪುಪಟ್ಟಿ ಧರಿಸಿ ಮುಷ್ಕರ ಮುಂದುವರಿಸಿದ್ದರು.


ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಸಂಧಾನ ಮಾತುಕತೆ ಯಶಸ್ವಿ:
ಮುಷ್ಕರ ನಿರತ ಗ್ರಾ.ಪಂ.ನೌಕರರ ಬೇಡಿಕೆಗಳ ಕುರಿತು ಗ್ರಾ.ಪಂ.ಅಧಿಕಾರಿಗಳು ಹಾಗೂ ಪಂಚ ನೌಕರರ ರಾಜ್ಯ ಸಂಘದ ಅಧ್ಯಕ್ಷರೊಂದಿಗೆ ಇಲಾಖೆಯ ಸಚಿವ ಪ್ರಿಯಾಂಕ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಅ.10ರಂದು ವಿಕಾಸಸೌಧದಲ್ಲಿ ಸಭೆ ನಡೆಯಿತು.ಗ್ರಾ.ಪಂ.ನೌಕರರ ಮಹಾ ಒಕ್ಕೂಟ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ನಿಯೋಗ ವಿಕಾಸಸೌಧದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆಗಳನ್ನು ಮುಂದಿರಿಸಿದರು.ಸುಮಾರು 75ಕ್ಕೂ ಹೆಚ್ಚು ಬೇಡಿಕೆಗಳನ್ನು ಆಲಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗಬಹುದಾದ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಆದ್ಯತೆಯ ಮೇಲೆ ಈಡೇರಿಸುವುದಾಗಿ ಭರವಸೆ ನೀಡಿದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಽಕಾರಿಗಳ ಭಡ್ತಿ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸುವುದಾಗಿ ಪ್ರಕಟಿಸಿದ ಸಚಿವರು, ಮೂರು ತಿಂಗಳ ಕಾಲಮಿತಿಯೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.


ಗ್ರಾಮೀಣ ಜನತೆಯ ಹಿತಾಸಕ್ತಿ ಕಾಪಾಡುವ ಬದ್ಧತೆಯೂ ಇರಲಿ:
ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಹಿತಾಸಕ್ತಿಗಳಿಗಾಗಿ ಹೋರಾಟ ಮಾಡುವುದು ಎಷ್ಟು ಮುಖ್ಯವೋ, ಸಾರ್ವಜನಿಕ ಸೇವೆಯ ಮೂಲಕ ಗ್ರಾಮೀಣ ಜನರ ಹಿತಾಸಕ್ತಿಗಳನ್ನು ಕಾಪಾಡಲು ಅಷ್ಟೇ ಬದ್ಧತೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಿವಿಮಾತನ್ನೂ ಸಚಿವ ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು.

ನೌಕರರ ಹಿತ ಕಾಪಾಡಲು ಸಿದ್ಧ:
ತಾವು ಸಚಿವರಾಗಿ ಇಲಾಖೆಯ ನೌಕರರ ಹಿತ ಕಾಪಾಡಲು ಸಿದ್ಧರಾಗಿರುವುದಾಗಿ ಹೇಳಿದ ಪ್ರಿಯಾಂಕ್ ಖರ್ಗೆ, ಮುಷ್ಕರ ಹೂಡುವುದಕ್ಕಿಂತಲೂ ಹೆಚ್ಚಾಗಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಯಾವುದೇ ಸಮಯದಲ್ಲಾಗಲಿ ನೇರವಾಗಿ ಬಂದು ತಮ್ಮನ್ನು ಕಾಣುವಂತೆ ನೌಕರ ವೃಂದಕ್ಕೆ ತಿಳಿಸಿದರು.ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಅಂಜುಮ್ ಪರ್ವೇಝ್ ಹಾಗೂ ಆಯುಕ್ತೆ ಡಾ|ಅರುಂಧತಿ ಚಂದ್ರಶೇಖರ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಉಪಸ್ಥಿತರಿದ್ದರು.

ಅ.14ರಿಂದ ಕರ್ತವ್ಯಕ್ಕೆ
ಕಳೆದ ಏಳು ದಿನಗಳಿಂದ ಮುಷ್ಕರ ನಡೆಸುತ್ತಿರುವ ನಮ್ಮ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ.ಅಲ್ಲದೆ ಕಾಲ ಮಿತಿಯೊಳಗೆ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡಿದ್ದಾರೆ.ಸಚಿವರ ಭರವಸೆಗೆ ಸಹಮತ ಸೂಚಿಸಿ ರಾಜ್ಯ ಮಹಾ ಒಕ್ಕೂಟ ಷರತ್ತಿನೊಂದಿಗೆ ಮುಷ್ಕರ ಹಿಂತೆಗೆದುಕೊಂಡಿದೆ.ಮುಷ್ಕರದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ವೇತನ ಪಾವತಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ.ಅ.11ರಿಂದ 13ರ ತನಕ ಸರಕಾರಿ ರಜೆಯಾಗಿದ್ದು ಅ.14ರಿಂದ ಎಂದಿನಂತೆ ಪಂಚಾಯತ್‌ಗೆ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ
– ನಾಗೇಶ್ ಎಂ.,
ದ.ಕ.ಜಿಲ್ಲಾಧ್ಯಕ್ಷರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ ಸಂಘ

ಸಚಿವರ ಭರವಸೆ….
ರಾಜ್ಯದ ವಿವಿಧ ಜಿಲ್ಲೆಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರ ವಸೂಲಿಗಾರರು, ಕ್ಲರ್ಕ್ ಮತ್ತು ಡಾಟಾ ಎಂಟ್ರಿ ಅಪರೇಟರ್‌ಗಳು, ನೀರಗಂಟಿಗಳು, ಜವಾನರು, ಸ್ವಚ್ಛತಾ ಕೆಲಸಗಾರರು, ದ್ವಿತೀಯ ದರ್ಜೆ ಸಹಾಯಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಗೆಜೆಟೆಡ್ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ಹಲವು ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಲಾಗುವುದು.ಜ್ಯೇಷ್ಠತೆಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಬಡ್ತಿ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದರು.


ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ‘ಬಿ’ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನೌಕರರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಮೊದಲ ಹಂತದಲ್ಲಿ 2,166 ಪಿಡಿಒಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು, ನಂತರ ಉಳಿದವರಿಗೂ ಅವಕಾಶ ಕಲ್ಪಿಸಲಾಗುವುದು. ವರದಿ ನೀಡಲು ಸಮಿತಿಗೆ ಮೂರು ತಿಂಗಳ ಗಡುವು ನೀಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಕ್ರಮವಹಿಸಲಾಗುವುದು.ಈಗಾಗಲೇ ಪ್ರಕಟಿಸಿರುವ ವರ್ಗಾವಣೆ ಕರಡು ಅಧಿಸೂಚನೆಯಲ್ಲಿನ ನ್ಯೂನತೆಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಲಾಗುವುದು.ಖಾಲಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗುವುದು.

ಸದಸ್ಯರ ಗೌರವ ಧನ ಹೆಚ್ಚಳ ಸಿಎಂ ಜೊತೆ ಚರ್ಚಿಸಿ ಕ್ರಮ
ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಲಾಗುವುದು.ನೌಕರರ ಮೇಲಿನ ಒತ್ತಡ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ನೇಮಕ ಮಾಡಲಾಗುವುದು ಎಂದು ಸಚಿವ ಖರ್ಗೆ ಹೇಳಿದರು.

LEAVE A REPLY

Please enter your comment!
Please enter your name here