ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಉತ್ಸವಗಳ ಆಮಂತ್ರಣ ಪತ್ರವನ್ನು ಅ.12ರಂದು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ.ಮೂ.ವೆಂಕಟ್ರಮಣ ಭಟ್ ಕಾನುಮೂಲೆಯವರು ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರು.
ಈ ವೇಳೆ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಅರ್ಚಕ ನಾರಾಯಣ ಭಟ್ ಕಾನುಮೂಲೆ, ಕಿಶೋರ್ ಕೃಷ್ಣ ಕೋನಡ್ಕ, ದುರ್ಗಾಪ್ರಸಾದ್ ಜೆ., ಕೃಷ್ಣಪ್ರಸಾದ್ ಬೆಟ್ಟಂಪಾಡಿ, ವೇಣುಗೋಪಾಲ್ ಕಜೆ, ದಾಸಪ್ಪ ಗೌಡ ನೀರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ನ. 14ರಿಂದ ವರ್ಷಾವಧಿ ಜಾತ್ರೋತ್ಸವ
ದೀಪಾವಳಿ ಕಳೆದ ಬಳಿಕ ದೇವಾಲಯಗಳ ಉತ್ಸವಗಳು ಆರಂಭಗೊಳ್ಳುವುದು ರೂಢಿ. ಸೀಮೆಯಲ್ಲಿ ಆರಂಭದ ಜಾತ್ರೆ ನಡೆಯುವುದು ಬೆಟ್ಟಂಪಾಡಿ ಶ್ರೀ ಕ್ಷೇತ್ರದಲ್ಲಿ ವರ್ಷಂಪ್ರತಿ ಕಾರ್ತಿಕ ಹುಣ್ಣಿಮೆಯ ದಿನದಂದು ಕ್ಷೇತ್ರದ ವರ್ಷಾವಧಿ ಉತ್ಸವ ಆರಂಭಗೊಳ್ಳುತ್ತದೆ. ಪತ್ತನಾಜೆಯ ಕೊನೆಯ ಜಾತ್ರೆಯೂ ನಡೆಯುವುದು ಇದೇ ಕ್ಷೇತ್ರದಲ್ಲಿ ಎನ್ನವುದು ಇಲ್ಲಿನ ವಿಶೇಷತೆಯಾಗಿದೆ. ನ. 14ರಿಂದ ಮೊದಲ್ಗೊಂಡು ನ.17ರವರೆಗೆ ದೇವರ ಮತ್ತು ಕ್ಷೇತ್ರದ ದೈವಗಳ ಉತ್ಸವಗಳು ನಡೆಯಲಿವೆ ಎಂದು ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದರು.