*ಅಪರಾಧಿಗಳಿಗೆ ಶಿಕ್ಷೆಯಾಗಬೇಕು – ಡಾ. ನರಸಿಂಹ ಶರ್ಮ ಕಾನಾವು
*ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕು – ಡಾ. ಗಣೇಶ್ಪ್ರಸಾದ್ ಮುದ್ರಾಜೆ
ಪುತ್ತೂರು: ಆರ್ಜಿ ಕರ್ ಆಸ್ಪತ್ರೆ ಘಟನೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿರುವ ಆಮರಣಾಂತ ಉಪವಾಸ 11 ನೇ ದಿನಕ್ಕೆ ಕಾಲಿಡುವ ಸಂದರ್ಭ ಈಗಾಗಲೇ ಕೆಲವು ವೈದ್ಯರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಸರಕಾರ ತಕ್ಷಣ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ನಿಟ್ಟಿನಲ್ಲಿ ಉಪವಾಸ ನಿರತ ವೈದ್ಯರಿಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಭಾಗಗಳ ಮೆಡಿಕಲ್ ಕಾಲೇಜುಗಳಲ್ಲಿ “ಸಾಂಕೇತಿಕ ಉಪವಾಸ” ನಡೆಸುತ್ತಿದ್ದು ಪುತ್ತೂರಿನಲ್ಲಿ ಭಾರತೀಯ ವೈದ್ಯಕೀಯ ಸಂಘ ಉಪವಾಸ ನಿರತರಿಗೆ ನೈತಿಕ ಬೆಂಬಲ ನೀಡಿ ಸಹಾಯಕ ಕಮೀಷನರ್ ಜುಬಿನ್ ಮೊಹಪಾತ್ರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಆರ್ಜಿ ಕರ್ ಆಸ್ಪತ್ರೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಆರೋಗ್ಯ ಕಾರ್ಯದರ್ಶಿ ಅವರನ್ನು ಕೂಡಲೇ ವಜಾಗೊಳಿಸಬೇಕು, ಕೆಲಸದ ಸ್ಥಳ ಭದ್ರತೆ ಮತ್ತು ಇತರ ಕ್ರಮಗಳಿಗಾಗಿ ಕಿರಿಯ ವೈದ್ಯರು ಒತ್ತಾಯಿಸಿದ್ದಾರೆ. ಎಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸಿಸಿಟಿವಿ, ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವುದು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಅಪರಾಧಿಗಳಿಗೆ ಶಿಕ್ಷೆಯಾಗಬೇಕು:
ಭಾರತೀಯ ವೈದ್ಯಕೀಯ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಅವರು ಮಾತನಾಡಿ ಆರ್ಜಿ ಕರ್ ಆಸ್ಪತ್ರೆ ಘಟನೆಯ ಸಂತ್ರಸ್ತೆಗೆ ಸೂಕ್ತ ನ್ಯಾಯ ಸಿಗದ ಕಾರಣ ಅಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಅಲ್ಲಿ ಕಿರಿಯ ವೈದ್ಯರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಅಪರಾಧಿಗೆ ಶಿಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ನಾವು ಈಗಾಗಲೇ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೂ ಮನವಿ ಕಳುಹಿಸಿದ್ದೇವೆ ಎಂದರು.
ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕು:
ಭಾರತೀಯ ವೈದ್ಯಕೀಯ ಸಂಘ ಪುತ್ತೂರು ಘಟಕದ ಕಾರ್ಯದರ್ಶಿ ಡಾ. ಗಣೇಶ್ಪ್ರಸಾದ್ ಮುದ್ರಾಜೆ ಅವರು ಮಾತನಾಡಿ ಕಿರಿಯ ವೈದ್ಯರ ಬೇಡಿಕೆ ಈಡೇರದಾಗ ಭಾರತೀಯ ವೈದ್ಯಕೀಯ ಸಂಘ ಇವತ್ತು ದೇಶದಾದ್ಯಂತ ಕಿರಿಯ ವೈದ್ಯರಿಗೆ ಬೆಂಬಲ ನೀಡಿ ದೇಶದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಲಿದೆ. ಪುತ್ತೂರಿನ ಐಎಮ್ಎ ಉಪವಾಸ ನಿರತ ವೈದ್ಯರಿಗೆ ನೈತಿಕ ಬೆಂಬಲ ನೀಡುತ್ತಿದ್ದೇವೆ. ಸಂತ್ರಸ್ತೆಗೆ ನ್ಯಾಯ ಇನ್ನೂ ಸಿಕ್ಕಿಲ್ಲ. ಅವರಿಗೆ ನ್ಯಾಯ ಸಿಗದಿದ್ದರೆ ನಮ್ಮೆಲ್ಲ ವೈದ್ಯಕೀಯ ಸೇವೆಗೆ ನ್ಯಾಯ ಸಿಕ್ಕಿಲ್ಲ ಎಂಬ ಭಾವನೆಯಿಂದ ನಾವು ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರಕಾರವನ್ನು ತ್ವರಿತಗತಿಯಲ್ಲಿ ನ್ಯಾಯಕೊಡಿಸುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಮನವಿ ಸಂದರ್ಭ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಎಸ್.ಎಸ್ ಜ್ಯೋಶಿ, ಡಾ. ಬದ್ರಿನಾಥ್, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಡಾ. ಜೆ.ಸಿ.ಅಡಿಗ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಶ್ರೀಪತಿ ರಾವ್, ಡಾ. ರಾಮ್ ಕಿಶೋರ್ ಉಪಸ್ಥಿತರಿದ್ದರು.