ಪುತ್ತೂರು: 5 ವರ್ಷದ ಹಿಂದೆ ಕೌಡಿಚ್ಚಾರ್ ಮಡ್ಯಂಗಳದಲ್ಲಿ ರಸ್ತೆ ಅಪಘಾತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡ ಹುಡುಗಿಯೊಬ್ಬಳು ತನ್ನ ಸಾಧನೆಯ ಮೂಲಕ ಅನುಕಂಪದ ನೆಲೆಯಲ್ಲಿ ಉದ್ಯೋಗ ಪಡೆದಿದ್ದಾರೆ.
ಕೊಡಗಿನ ನಿಡ್ಯ ಮಲೆ ದಿ.ಅಶೋಕ್ ಮತ್ತು ದಿ.ಹೇಮಲತ ದಂಪತಿಯ ಪುತ್ರಿ, ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರಕೃತಿ(ಪ್ರೀತು)ರವರು ಮಡಿಕೇರಿ ತಾಲೂಕು ಕಚೇರಿಯಲ್ಲಿ ದ್ವಿತೀಯದರ್ಜೆ ಸಹಾಯಕಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡವರು. 2019ರ ಸಪ್ಟೆಂಬರ್ನಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರ್ ಸಮೀಪದ ಮಡ್ಯಂಗಳದಲ್ಲಿ ಬೆಳಗಿನ ಜಾವ ಸೋಮವಾರಪೇಟೆ ನಿವಾಸಿಗಳಾದ ದಿ.ಅಶೋಕ್, ಹೇಮಲತ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿಯ ಕೆರೆಗೆ ಬಿದ್ದಿತ್ತು. ಕಾರಿನಲ್ಲಿದ್ದ ಅಶೋಕ್, ಹೇಮಲತ, ಮಕ್ಕಳಾದ ವರ್ಷ ಮತ್ತು ಯಶಸ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅಶೋಕ್-ಹೇಮಲತಾ ದಂಪತಿಯ ಹಿರಿಯ ಪುತ್ರಿಯಾದ ಪ್ರಕೃತಿಯವರು ಆ ಸಂದರ್ಭ ಮೂಡಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ಅವರನ್ನು ಭೇಟಿ ಮಾಡಲು ಇವರ ಕುಟುಂಬ ಕಾರಿನಲ್ಲಿ ಪ್ರಯಾಣ ಬೆಳೆಸಿತ್ತು. ದುರದೃಷ್ಟವಶಾತ್ ಪ್ರಕೃತಿಯ ತಂದೆ, ತಾಯಿ, ತಂಗಿ, ತಮ್ಮ ಸೇರಿ ನಾಲ್ವರೂ ಮೃತಪಟ್ಟು ತಾನೋರ್ವಳೇ ಬದುಕುಳಿದಿದ್ದರು.
ಮೂಡಬಿದಿರೆಯಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ ಪ್ರಕೃತಿ ತದನಂತರ ದರ್ಬೆ ಫಿಲೋಮಿನಾ ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿ ಹಾಸ್ಟೆಲಲ್ಲಿದ್ದುಕೊಂಡು ವಿದ್ಯಾಭ್ಯಾಸ ಪೂರೈಸಿದ್ದರು. ಕುಟುಂಬವನ್ನು ಕಳೆದುಕೊಂಡರೂ ತನ್ನ ಅವಿರತ ಶ್ರಮದಿಂದ ಓದಿ ಇದೀಗ ಮಡಿಕೇರಿ ತಾಲೂಕು ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸೋಮವಾರಪೇಟೆಯ ಶುಂಟಿಕೊಪ್ಪ ಪಂಪ್ಹೌಸ್ ನಿವಾಸಿಯಾದ ಇವರ ತಂದೆ ದಿ.ಅಶೋಕ್ರವರು ಅಂಚೆ ಇಲಾಖೆಯಲ್ಲಿ ಹಾಗೂ ತಾಯಿ ದ.ಹೇಮಲತರವರು ನಲ್ಲೂರು ಶಾಲಾ ಶಿಕ್ಷಕಿಯಾಗಿದ್ದರು. ಇಬ್ಬರೂ ಸರಕಾರಿ ಉದ್ಯೋಗಿಗಳಾಗಿದ್ದರು.