ಇಂದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಾಮರ್ಥ್ಯವಿದೆ. ಅವನಿಗೆ/ಅವಳಿಗೆ ಸರಿಯಾದ ಮಾಹಿತಿ, ತರಬೇತಿ, ಪ್ರೋತ್ಸಾಹ, ಆರ್ಥಿಕ ಸೌಲಭ್ಯ ದೊರಕಿದರೆ ಪ್ರತಿಯೊಬ್ಬರೂ ಉದ್ಯಮಿಯಾಗಬಹುದು. ಆದರೆ ಆ ವ್ಯಕ್ತಿ ಯಶಸ್ವಿಯಾಗಬೇಕಾದರೆ ಆತನಿಗೆ ಸರಿಯಾದ ಮಾರುಕಟ್ಟೆಯ ಮತ್ತು ಆರ್ಥಿಕ ಬೆಂಬಲ ದೊರಕಬೇಕು. ಅದು ಇಲ್ಲದಿದ್ದರೆ ಏನಾಗುತ್ತದೆ ಎಂದು ಹೇಳಬೇಕಾಗಿಲ್ಲ. ಈಗ ಸರಕಾರದಿಂದ, ಸಂಘ ಸಂಸ್ಥೆಗಳಿಂದ ಉದ್ಯಮಗಳಿಗೆ, ವ್ಯವಹಾರಗಳಿಗೆ ಬೇಕಾದ ತರಬೇತಿ, ಮಾಹಿತಿ, ಬ್ಯಾಂಕ್ ಸಾಲ, ಸಬ್ಸಿಡಿ ಎಲ್ಲವೂ ದೊರಕುತ್ತದೆ. ಆದರೆ ಉತ್ಪನ್ನ ಮತ್ತು ಸೇವೆ ಪ್ರಾರಂಭಿಸಿದ ಮೇಲೆ ಅವುಗಳಿಗೆ ಸರಿಯಾದ ಮಾರುಕಟ್ಟೆಯ ವ್ಯವಸ್ಥೆ ದೊರಕದಿದ್ದರೆ ಉದ್ಯಮಿಗಳ ಜೀವನ ಏರುಪೇರು ಆಗುತ್ತದೆ. ಬದುಕೇ ಕಷ್ಟಮಯವಾಗುತ್ತದೆ. ಉದ್ಯಮ ಪ್ರಾರಂಭಿಸಿದ ಕೆಲವೇ ದಿವಸದಲ್ಲಿ ನೆಲ ಕಚ್ಚುತ್ತದೆ. ಆರಂಭ ಶೂರತ್ವದೊಂದಿಗೆ ಕೊನೆಯೂ ಆಗುತ್ತದೆ. ಅದಕ್ಕಾಗಿ ಸರಿಯಾದ ಮಾಹಿತಿ, ತರಬೇತಿ, ಪ್ರೋತ್ಸಾಹ ಮಾತ್ರವಲ್ಲ ಮಾರುಕಟ್ಟೆಯ ಬೆಂಬಲ ದೊರಕಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ‘ಅರಿವು’ ಎಂಬ ಸಹ ಸಂಸ್ಥೆಯನ್ನು ಸುದ್ದಿ ಬಳಗ ಹುಟ್ಟು ಹಾಕಿದೆ.
ಸುದ್ದಿಯ ಸಹಸಂಸ್ಥೆ ‘ಅರಿವು’ ಸಂಸ್ಥೆ ಈಗಾಗಲೇ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಕೆಲಸ ಪ್ರಾರಂಭಿಸಿದೆ. ಉದ್ಯಮಗಳಿಗೆ ಬೇಕಾದ ಹಲವಾರು ತರಬೇತಿಗಳನ್ನು ನಡೆಸಿಕೊಟ್ಟಿದೆ. ಪುತ್ತೂರಿನಲ್ಲಿ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆಗಾಗಿ ಅರಿವು ಎಂಟರ್ಪ್ರೈಸಸ್ನ್ನು ತೆರೆದಿದೆ. ಸದ್ಯಕ್ಕೆ ದ.ಕ ಜಿಲ್ಲೆಯನ್ನು ಕ್ಷೇತ್ರವನ್ನಾಗಿ ಇಟ್ಟುಕೊಂಡಿರುವ ಅರಿವು ಸಂಸ್ಥೆ ಪುತ್ತೂರು, ಸುಳ್ಯ, ಬೆಳ್ತಂಗಡಿಗಳಲ್ಲಿ ಗ್ರಾಮ ಗ್ರಾಮದಲ್ಲಿ ಉದ್ಯಮ ಮಾಡುವವರಿಗೆ ಬೇಕಾದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ನಿರಂತರ ಹಮ್ಮಿಕೊಳ್ಳಲಿದೆ. ಗುಣಮಟ್ಟವೇ ಇಂದಿನ ಮಾರುಕಟ್ಟೆಗೆ ಆಧಾರವಾಗಿರುವುದರಿಂದ ಅಗತ್ಯವಿರುವವರಿಗೆ ಅದರ ಬಗ್ಗೆಯೂ ತರಬೇತಿ ಮತ್ತು ಮಾಹಿತಿಯನ್ನು ಒದಗಿಸಲಿದ್ದೇವೆ.
ಗ್ರಾಮೀಣ ಪ್ರದೇಶದ ಜನರು ಮನೆ ಮನೆಯಲ್ಲಿ ಉದ್ಯಮ ಮಾಡುವಂತೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಹಲವಾರು ಸಂಸ್ಥೆಗಳಿವೆ. ಅರಿವು ಕೇಂದ್ರ ಅವರೊಂದಿಗೆ ಜೈ ಜೋಡಿಸಿ ಉದ್ಯಮಿಗಳ ಉತ್ಪನ್ನಗಳಿಗೆ ಸ್ಥಳೀಯವಾಗಿ, ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಈ ಮಾರುಕಟ್ಟೆಯ ವ್ಯವಸ್ಥೆ ಮಾಡಲಿದ್ದೇವೆ. ನಂತರ ರಾಜ್ಯಕ್ಕೆ ಮಾತ್ರವಲ್ಲ ಆನ್ಲೈನ್ ಮಾರುಕಟ್ಟೆಯ ಮೂಲಕ ಜಗತ್ತಿನಾದ್ಯಂತ ಒದಗಿಸುವ ಯೋಚನೆಯನ್ನು ಹಾಕಿಕೊಂಡಿದ್ದೇವೆ.
40 ವರ್ಷಗಳ ಹಿಂದೆ ತಾಲೂಕಿನ ಜನರಿಗೆ ಮಾಹಿತಿ ಮತ್ತು ವರದಿಗಳಿಗಾಗಿ ಹಾಗೂ ಅಭಿವೃದ್ಧಿಗಾಗಿ ಪತ್ರಿಕೆಯ ಅವಶ್ಯಕತೆ ಇದೆ ಎಂದು ನಾವು ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿದ್ದೇವೆ. ಗ್ರಾಮೀಣ ಜನರಿಂದ ಮಾಹಿತಿ ಪಡೆದು ಜನರಿಗೆ ಅಗತ್ಯದ, ನಿಷ್ಪಕ್ಷಪಾತ, ವಿಶ್ವಾಸಪೂರ್ಣ ಮಾಹಿತಿ ನೀಡಿ, ಜನರ ಪತ್ರಿಕೆಯಾಗಿ ತಾಲೂಕಿನ ಅಭಿವೃದ್ಧಿಗೆ ಸುದ್ದಿ ಬಿಡುಗಡೆ ಪತ್ರಿಕೆ ಕೆಲಸ ಮಾಡಿದಂತೆ, ‘ಅರಿವು’ ಕೇಂದ್ರ ಜನರೊಂದಿಗೆ ಬೆರೆತು ಮಾರುವವರ ಮತ್ತು ಕೊಳ್ಳುವವರ ವಿಶ್ವಾಸ ಗಳಿಸಿ, ಜನರ ಆರ್ಥಿಕ ಅಭಿವೃದ್ಧಿಗೆ ಕೆಲಸ ಮಾಡಲಿದೆ. ಆ ಮೂಲಕ ಪುತ್ತೂರಿನ ಸಾಮಾನ್ಯ ಜನರ ಜೀವನಕ್ಕೆ ಬೇಕಾದ ಪ್ರೋತ್ಸಾಹ, ಬೆಂಬಲವನ್ನು ನೀಡುವ ದಾರಿದೀಪವಾಗಬೇಕೆಂಬ ಉದ್ದೇಶ ಅರಿವು ಸಂಸ್ಥೆಯದ್ದಾಗಿದೆ.
–ಡಾ.ಯು.ಪಿ.ಶಿವಾನಂದ