ಪುತ್ತೂರು: ಸರ್ವೆ ಶ್ರೀಗೌರಿ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅ 17 ರಂದು ಭಕ್ತಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ರಮೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ ಜಿ ಎಂ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಜಯಶ್ರೀ ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ತ್ರೀಯರು ಮನೆಯಲ್ಲಿ ಮತ್ತು ಸಮಾಜದಲ್ಲಿ ಬೆರೆಯುವ ಸಂದರ್ಭದಲ್ಲಿ ಸಮಾನತೆಯನ್ನು ಮತ್ತು ಸಮತೋಲನವನ್ನು ಜಾಗರೂಕತೆಯಿಂದ ಕಾಯ್ದುಕೊಳ್ಳುವ ಮೂಲಕ ತನ್ನನ್ನು ಜವಾಬ್ದಾರಿಯುತ ಸ್ಥಾನಮಾನದಲ್ಲಿ ನಿಲ್ಲಿಸೋದು ಕಷ್ಟ. ಆದರೂ ಮಹಿಳೆ ಅವುಗಳನ್ನೆಲ್ಲ ನಿಭಾಯಿಸಿಕೊಂಡು ಸಮಾಜದಲ್ಲಿ ಗೌರವಯುತಳಾಗಿ ಬಾಳುತ್ತಾಳೆ ಮತ್ತು ಬಾಳಬೇಕು ಎಂದರಲ್ಲದೆ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ರಮೇಶ್ ಅವರು ನೂತನ ಅಧ್ಯಕ್ಷೆ ಕುಶಲ ನಾಗೇಶ್ ಪಟ್ಟೆಮಜಲು, ಕಾರ್ಯದರ್ಶಿ ರಜನಿ ರಾಜೇಶ್ ಸರ್ವೆದೋಳಗುತ್ತು, ಖಚಾಂಜಿ ಗೀತಾ ನಾರಾಯಣ್ ಮರಿಯ ಇವರಿಗೆ ಮಂಡಲದ ವರದಿ ಪುಸ್ತಕವನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣ ಮಾಡಿ ಶುಭ ಹಾರೈಸಿದರು.
ಮಹಿಳಾ ಮಂಡಲದ ಗೌರವಾಧ್ಯಕ್ಷೆ ರತ್ನಾವತಿ ವಸಂತ ಸರ್ವೆದೋಳಗುತ್ತು ಮಾತನಾಡಿ, ಶ್ರೀಗೌರಿ ಮಹಿಳಾ ಮಂಡಲವು ಬೆಳೆದು ಬಂದ ರೀತಿ ಮತ್ತು ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಮುಂದೆಯೂ ಸಂಘ ಬಲಿಷ್ಠವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಬೆಳವಣಿಗೆಗೆ ಕಾರಣೀಭೂತರಾದ ಗೌರವಾಧ್ಯಕ್ಷೆ ರತ್ನಾವತಿ ವಸಂತ ಸರ್ವೆದೋಳ, ಅಧ್ಯಕ್ಷೆ ಮೋಹಿನಿ ರಮೇಶ್, ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್, ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಶ್ರೀ ಶ್ರೀನಿವಾಸ್ ಇವರನ್ನು ನೂತನ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಗೌರವಿಸಿದರು. ಗೌರವ ಸಲಹೆಗಾರರಾದ ವಸಂತಿ ನಾರಾಯಣ್ ಭಕ್ತಕೋಡಿ, ಸದಸ್ಯರಾದ ಸುಮತಿ ಪರಂಟೋಲು, ಸೀತಾ ಸರ್ವೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶ್ರೀಗೌರಿ ಮಹಿಳಾ ಮಂಡಲದಲ್ಲಿ ಸದಸ್ಯೆಯಾಗಿರುವುದು ಹೆಮ್ಮೆಯ ಮತ್ತು ಸಂತಸದ ವಿಚಾರ ಎಂದರು.
ಕಾರ್ಯದರ್ಶಿ ರಜನಿ ರಾಜೇಶ್ ಸರ್ವೆದೋಳಗುತ್ತು ಸ್ವಾಗತಿಸಿ, ವಿಜಯಲಕ್ಷ್ಮಿ ಶಂಕರ್ ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿದರು, ಲಲಿತಾ ಲಕ್ಷ್ಮಣ ಆಚಾರ್ಯ ಪ್ರಾರ್ಥಿಸಿದರು. ವಸಂತಿ ನಾರಾಯಣ ಭಕ್ತಕೋಡಿ ವಂದಿಸಿದರು. ವಿನಯ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.