ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದ ‘ಬೆಂಗಳೂರು ಕಂಬಳ-ನಮ್ಮ ಕಂಬಳ’:ಈ ಬಾರಿ ನಡೆಯುವುದಿಲ್ಲವೆಂಬ ವದಂತಿಗೆ ಬೆಂಗಳೂರು ಕಂಬಳ ಸಮಿತಿ ಸ್ಪಷ್ಟನೆ

0

ಬೆಂಗಳೂರು:ಕಳೆದ ವರ್ಷ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಕಾರ್ಯಕ್ರಮ ಕರಾವಳಿಯ ಸಂಸ್ಕೃತಿ ಆಚಾರ ವಿಚಾರ, ಜಾನಪಪ ಕಲೆಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿತ್ತು.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ವಿಜ್ರಂಭಿಸಿದ ಕಾರ್ಯಕ್ರಮದಲ್ಲಿ ಹಲವು ಸಿನಿ ತಾರೆಯರು, ರಾಜಕೀಯ ಮುಖಂಡರು ಹಾಗೂ ಹಲವು ಗಣ್ಯರ ಆಗಮನ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.ಬೆಂಗಳೂರಿನಲ್ಲಿ ಕೋಣಗಳ ಓಟವನ್ನು ಕಾಣಲು ಮುಗಿಬಿದ್ದ ಬೆಂಗಳೂರಿಗರಿಗೆ ವಿಶೇಷವಾಗಿ ಶುಚಿ-ರುಚಿಯಾದ ಆಹಾರ ಮಳಿಗೆಗಳು ಇನ್ನಷ್ಟು ಮುದನೀಡಿತ್ತು.ಒಟ್ಟಾರೆ ಈ ಕಾರ್ಯಕ್ರಮದಲ್ಲಿ ಜಾತ್ರಾ ಸಂಭ್ರಮ ಎದ್ದುಕಾಣುತ್ತಿದ್ದು, ಈ ಬಾರಿ ಬೆಂಗಳೂರಿನಲ್ಲಿ ಕಂಬಳ ಯಾವಾಗ ಎಂಬಂತೆ ಬೆಂಗಳೂರಿನ ಜನತೆ ಮತ್ತೆ ಆ ಸಂಭ್ರಮಕ್ಕಾಗಿ ಕಾದು ಕುಳಿತಿದ್ದಾರೆ.


ಕಳೆದ ವರ್ಷದಂತೆ ಈ ಬಾರಿ ಅ.26ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ನಡೆಸುವುದಾಗಿ ಜಿಲ್ಲಾ ಕಂಬಳ ಸಮಿತಿ ದಿನಾಂಕ ನಿಗದಿಪಡಿಸಿತ್ತು.ಆದರೆ ಈ ಬಾರಿ ಕಂಬಳ ನಡೆಯುವುದು ಅನುಮಾನ ಎಂಬಂತೆ ಕೆಲವೊಂದು ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು.ಈ ಬಗ್ಗೆ ಬೆಂಗಳೂರು ಕಂಬಳ ಸಮಿತಿಯವರು ಸ್ಪಷ್ಟನೆ ನೀಡಿದ್ದಾರೆ.


ಜನವರಿ/ಫೆಬ್ರವರಿ ತಿಂಗಳಲ್ಲಿ ಬೆಂಗಳೂರು ಕಂಬಳ: ಕಂಬಳ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಬೆಂಗಳೂರು ಕಂಬಳಕ್ಕೆ ಜಿಲ್ಲಾ ಕಂಬಳ ಸಮಿತಿಯಿಂದ ದಿನ ನಿಗದಿಯಾಗಿತ್ತು.ಆದರೆ ಬೆಂಗಳೂರಿನಲ್ಲಿ ಕಂಬಳ ನಡೆಸಬೇಕೆಂದರೆ ಸುಲಭದ ಕೆಲಸವಲ್ಲ, ಮುಖ್ಯಮಂತ್ರಿಗಳ ಆದೇಶ, ಪೊಲೀಸ್ ಕಮಿಷನರ್‌ರವರ ಆದೇಶ, ಮುಖ್ಯವಾಗಿ ಅರಮನೆಯ ಮಹಾರಾಣಿಯವರ ಅನುಮತಿ ಮತ್ತು ಟ್ರಾಫಿಕ್ ಸ್ಥಿತಿಗತಿ, ಜೊತೆಗೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಬೇಕು.ಇನ್ನು ಕೆಲವರು, ಕಳೆದ ಬಾರಿಯ ಕಂಬಳ ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.ಅಂತಹ ಆಸಕ್ತರಿಗೂ ನಾವು ಇಷ್ಟು ದಿನಗಳವರೆಗೆ ಅವಕಾಶ ಬಿಟ್ಟುಕೊಟ್ಟಿದ್ದೇವೆ.ಇಷ್ಟರವರೆಗೆ ಯಾರೂ ಮುಂದೆ ಬಂದಿಲ್ಲ, ಹಾಗಾಗಿ ನಾವು ಜನವರಿ/ಫೆಬ್ರವರಿ ತಿಂಗಳಿನಲ್ಲಿ ಸಂಬಂಧಪಟ್ಟ ಇಲಾಖೆಯ ಆದೇಶ ಪಡೆದು, ಕಂಬಳ ಸಮಿತಿಯ ಅನುಮತಿ ಕೇಳಿ ಕಂಬಳದ ಕೋಣಗಳ ಯಜಮಾನರ ಅನುಮತಿ ಪಡೆದು, ಬೆಂಗಳೂರು ಕಂಬಳ ನಡೆಸುತ್ತೇವೆ ಎಂದು ಹೇಳಿದ್ದಾರೆ.


ಕಳೆದ ಬಾರಿಗಿಂತಲೂ ವಿಶಿಷ್ಟ ರೀತಿಯಲ್ಲಿ ಈ ಬಾರಿ ಬೆಂಗಳೂರು ಕಂಬಳ:
ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷ ಹಾಗೂ ಕಂಬಳದ ಆಯೋಜಕರಾದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಪ್ರತಿಕ್ರಿಯಿಸಿ,ಬೆಂಗಳೂರು ಕಂಬಳ ಶಾಸಕರಾದ ಅಶೋಕ್ ರೈಯವರ ನೇತೃತ್ವದಲ್ಲಿ ಈ ಬಾರಿಯೂ ನಡೆಯಲಿದೆ.ಕಳೆದ ಬಾರಿಯ ಬೆಂಗಳೂರು ಕಂಬಳ ನಮ್ಮ ಕಂಬಳ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದ್ದು ಇದರ ಹಿಂದೆ ನೂರಾರು ಕಾರ್ಯಕರ್ತರ ಬೆವರಿನ ಶ್ರಮವಿದೆ.ಈ ಬಾರಿ ಇನ್ನೂ ಹೆಚ್ಚಿನ ಕಾರ್ಯಕರ್ತರು ಸಕ್ರಿಯವಾಗಿ ದುಡಿಯಲು ಉತ್ಸುಕರಾಗಿದ್ದು ಕರಾವಳಿಯ ಕಂಬಳದ ಕೋಣಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಗೌರವ ನೀಡಿ ಮೆರುಗನ್ನು ಹೆಚ್ಚಿಸಲಿದ್ದಾರೆ.ಕಾರ್ಯಕ್ರಮದಲ್ಲೂ ಕೂಡ ವಿಶೇಷ ಮೆರುಗನ್ನು ತುಂಬಲಿದ್ದು ಕಳೆದ ಬಾರಿಗಿಂತಲೂ ವಿಶಿಷ್ಟ ರೀತಿಯಲ್ಲಿ ಬೆಂಗಳೂರು ಕಂಬಳವನ್ನು ಆಯೋಜನೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಬಾರಿಯ ಬೆಂಗಳೂರು ಕಂಬಳ ನಾವು ಮಾಡಿದ್ದೇವೆ ಎಂದು ಹೇಳಿದವರಿಗೆ ಅವಕಾಶ ನೀಡಿದ್ದೇವೆ, ಆದರೆ ಇಷ್ಟರವರೆಗೆ ಯಾರೂ ಮುಂದೆ ಬಂದಿಲ್ಲ:
ಅಶೋಕ್ ಕುಮಾರ್ ರೈ

ಕಳೆದ ಬಾರಿಗಿಂತಲೂ ಈ ಬಾರಿ ವಿಶಿಷ್ಟ ರೀತಿಯಲ್ಲಿ ಬೆಂಗಳೂರು ಕಂಬಳವನ್ನು ಆಯೋಜನೆ ಮಾಡಲಿದ್ದೇವೆ:
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ

LEAVE A REPLY

Please enter your comment!
Please enter your name here