ಬೆಂಗಳೂರು ಕಂಬಳಕ್ಕೆ ಅನುಮತಿ ಬೇಡ-ಪೇಟಾದಿಂದ ಹೈಕೋರ‍್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

0

ಎಲ್ಲಿಯ ತನಕ ಕಂಬಳಕ್ಕೆ ಕುತ್ತು ಬರುತ್ತದೆಯೋ ಅಲ್ಲಿಯ ತನಕ ಹೋರಾಟ ಮಾಡುತ್ತೇನೆ-ಅಶೋಕ್ ಕುಮಾರ್ ರೈ

ಪುತ್ತೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ (ಕೋಣಗಳ ಓಟ) ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿಸದಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರಾಣಿ ದಯಾ ಸಂಘ ಪೆಟಾ ಹೈಕೋರ‍್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ಕೂಡಾ ವೈಯುಕ್ತಿಕ ನೆಲೆಯಲ್ಲಿ ಕಂಬಳ ನಡೆಸಲು ಅನುಮತಿ ಕೋರಿ ಅಪಿದಾವತ್ ಸಲ್ಲಿಸಿದ್ದಾರೆ. ಪೇಟಾದ ಆಕ್ಷೇಪದ ಅರ್ಜಿಯಲ್ಲಿ ತಮ್ಮನ್ನೂ ಪಾರ್ಟಿ ಮಾಡಬೇಕೆಂದು ವಕೀಲರ ಮೂಲಕ ಮನವಿ ಸಲ್ಲಿಸಿದ್ದಾರೆ.


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹೊರತುಪಡಿಸಿ ಬೇರೆಲ್ಲೂ ಕಂಬಳ ಸ್ಪರ್ಧೆ ನಡೆಸಲು ಅನುಮತಿಸಬಾರದು. ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ನಿರ್ದೇಶಿಸಬೇಕು ಎಂದು ಪೇಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ. ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರುದ್ಧವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಅದಕ್ಕೆ ಅನುಮತಿಸದಂತೆ ಪೆಟಾ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.


ನಾನೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ:
ಕಂಬಳಕ್ಕೆ ಸಂಬಂಧಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ಸಹ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಹಿಂದೆ ನಾವು ಸುಗ್ರಿವಾಜ್ಞೆ ಆಗುವಾಗ ಅದರಲ್ಲಿ ಅಪಿದಾವಿತ್ ಹಾಕಿದ್ದೆವು. ಕಂಬಳ ಅನ್ನುವಂತಹದ್ದು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಆಗುತ್ತದೆ ಎಂದು ಅಪಿದಾವಿತ್ ಹಾಕಿದ್ದೇವು. ಅದರೆ ನಾವು ಬೇರೆ ಕಡೆ ಎಲ್ಲೂ ಮಾಡುವುದಿಲ್ಲ ಎಂದು ಹೇಳಿಲ್ಲ. ಈಗ ಅದನ್ನು ಹಿಡಿದುಕೊಂಡು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಮಾಡಬೇಕು. ಬೇರೆ ಕಡೆ ಮಾಡಬಾರದು. ಪ್ರಾಣಿ ಹಿಂಸೆ ಆಗುತ್ತದೆ ಎಂದು ಪೇಟಾದಾವರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನೂ ಸಹ ಹೈಕೋರ್ಟ್‌ಗೆ ನನ್ನ ಸ್ವಂತ ನೆಲೆಯಲ್ಲಿ ಅರ್ಜಿ ಹಾಕಿದ್ದೇನೆ. ಸರಕಾರಿ ವಕೀಲರು ಯಾರು ಬರುತ್ತಾರೋ ಅವರಿಗೆ ಪೂರಕವಾಗಿ ಮಾಹಿತಿ ಕೊಡಲು ಪಿಟಿಷನ್‌ನಲ್ಲಿ ನನ್ನನ್ನು ಪಾರ್ಟಿ ಮಾಡಬೇಕೆಂದು ಕೇಳಿಕೊಂಡಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ಐವರು ನ್ಯಾಯಮೂರ್ತಿಗಳ ಬೆಂಚು ಆದೇಶ ಕೊಟ್ಟ ನಂತರ ಬೇರೆ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಪೇಟಾದವರು ಏನು ಸಾಧನೆ ಮಾಡಲು ಸಾಧ್ಯವಿಲ್ಲ. ಎಲ್ಲಿಯ ತನಕ ಕಂಬಳಕ್ಕೆ ಕುತ್ತು ಬರುತ್ತದೆಯೋ ಅಲ್ಲಿಯ ತನಕ ಹೋರಾಟ ಮಾಡುತ್ತೇನೆ. ಹಿಂದೆಯೂ ಹೋರಾಟ ಮಾಡಿದ್ದೇನೆ. ಮುಂದೆಯೂ ಹೋರಾಟ ಮಾಡುತ್ತೇನೆ. ಕಾನೂನಾತ್ಮಕ ಹೋರಾಟ ಮಾಡುತ್ತೇನೆ. ಇದರಲ್ಲಿ ನಾವು ಜಯಶೀಲರಾಗುತ್ತೇವೆ. ರಾಷ್ಟ್ರಪತಿ ಅಂಕಿತವಾಗಿ ಐವರು ನ್ಯಾಯ ಮೂರ್ತಿಗಳ ಆದೇಶ ಇರುವುದು ಕಂಬಳಕ್ಕೆ ಬಿಟ್ಟರೆ ಬೇರೆ ಯಾವುದಕ್ಕೂ ಇಲ್ಲ. ಅದ್ದರಿಂದ ಅಲ್ಲಿಯೂ ಜಯಶೀಲರಾಗುತ್ತೇವೆ ಎಂದು ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.


ಕಂಬಳದ ಯಜಮಾನರದ್ದು ಯಾವ ಭಿನ್ನಾಭಿಪ್ರಾಯವಿಲ್ಲ:
ಕಂಬಳದ ವಿಚಾರದಲ್ಲಿ ಕಂಬಳದ ಯಜಮಾನರದ್ದು ಯಾವ ಭಿನ್ನಾಭಿಪ್ರಾಯವಿಲ್ಲ. ಬೆಂಗಳೂರು ಕಂಬಳಕ್ಕೆ ಬಂದ ಕೋಣಗಳ ಯಜಮಾನರಿಗೆ ತಲಾ ರೂ. 50ಸಾವಿರ ನೀಡಲಾಗಿದೆ. ಅದೂ ಅಲ್ಲದೆ ದೊಡ್ಡ ಮಟ್ಟದ ಕಂಬಳದಲ್ಲಿ ಭಾಗವಹಿಸುವುದು ಅವರಿಗೂ ಪ್ರತಿಷ್ಠೆಯ ವಿಚಾರ. ಹಾಗಾಗಿ ಅವರೆಲ್ಲ ಪೂರ್ಣ ಸಹಕಾರ ನೀಡುತ್ತಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಕಳೆದ ಬಾರಿ ಸುಪ್ರೀಂಕೋರ್ಟ್ ಗೈಡ್ ಲೈನ್ ಪ್ರಕಾರ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿದ್ದೀವಿ. ನಾವು ಕೋಣಗಳನ್ನು ಮಕ್ಕಳಿಗಿಂತ ಜಾಸ್ತಿ ಪ್ರೀತಿಯಿಂದ ಸಾಕುತ್ತಿದ್ದೇವೆ. ಕೋಣಗಳಿಗೆ ಯಾವುದೇ ತೊಂದರೆ ಇಲ್ಲದೆ ಕಂಬಳ ಮಾಡಿ ತೋರಿಸಿದ್ದೇವೆ. ಕಾನೂನಾತ್ಮಕವಾಗಿ ಆಯೋಜನೆ ಮಾಡಿ ಜನಗಳಿಗೆ ಮುಟ್ಟಿಸುವ ಕೆಲಸ ಮಾಡಿದ್ದೇವೆ.
ಗುಣರಂಜನ್ ಶೆಟ್ಟಿ
ಬೆಂಗಳೂರು ಕಂಬಳ ಆಯೋಜಕರು

LEAVE A REPLY

Please enter your comment!
Please enter your name here