ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿ ಪಾರಂಪರಿಕ ದಿನಾಚರಣೆಯ ಸಂಭ್ರಮ

0

ಜ್ಞಾನವೇ ನಮ್ಮ ದೇಶದ ನಿಜವಾದ ಸಂಪತ್ತು : ಹಾರಿಕಾ ಮಂಜುನಾಥ್


ಪುತ್ತೂರು: ಸಾವಿರಾರು ವರ್ಷಗಳ ದಾಳಿಯ ನಂತರವೂ ಭಾರತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ಉಳಿದಿರುವುದು ಇಲ್ಲಿನ ಜ್ಞಾನ ರಾಶಿಯ ಕಾರಣಕ್ಕಾಗಿ. ನಮ್ಮ ಪರಂಪರೆಯು ಸಂಪತ್ತಿಗಿಂತ ಜ್ಞಾನ ಮಿಗಿಲೆಂಬ ಆದರ್ಶವನ್ನು ತಲೆ ತಲಾಂತರಗಳಿಂದ ಪಸರಿಸುತ್ತಾ ಬಂದಿದೆ. ಇದನ್ನು ಮುಂದುವರೆಸುತ್ತಾ ಮುಂದಿನ ಪೀಳಿಗೆಗೆ ಜ್ಞಾನವಾರಿಧಿಯನ್ನು ಹರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶನಿವಾರ ಮಾತನಾಡಿದರು.


ಎಲ್ಲಾ ಹೆತ್ತವರೂ ತಮ್ಮ ಮಕ್ಕಳು ತಮಗಿಂತ ಉತ್ತಮ ಸ್ಥಿತಿಗೆ ತಲಪಬೇಕೆಂದು ಬಯಸುತ್ತಾರೆ. ಅದಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಳ್ಳುತ್ತಾರೆ. ಹಾಗಾಗಿ ಶಾಲಾ ಕಾಲೇಜುಗಳಿಗೆ ತೆರಳುವಾಗ ಕೇವಲ ನಾವಷ್ಟೇ ತೆರಳುವುದಿಲ್ಲ ಬದಲಾಗಿ ನಮ್ಮ ಹೆತ್ತವರ ಕನಸುಗಳೂ ನಮ್ಮೊಂದಿಗಿರುತ್ತವೆ ಎಂಬುದನ್ನು ಮರೆಯಬಾರದು. ನಮ್ಮೆಲ್ಲಾ ಕಷ್ಟ ಸುಖಕ್ಕೆ ನಿಸ್ವಾರ್ಥದಿಮದ ಸ್ಪಂದಿಸುವವರು ಹೆತ್ತ ತಂದೆ ತಾಯಿ ಮಾತ್ರ ಎಂಬುದನ್ನು ಸದಾ ನೆನಪಿಸಿಕೊಳ್ಳುತ್ತಿಬೇಕು ಎಂದು ಕಿವಿಮಾತು ಹೇಳಿದರು.


ಪ್ರತಿಯೊಬ್ಬನೂ ತನ್ನಲ್ಲಿ ಮೂರು ಬಗೆಗಿನ ಬಲಗಳನ್ನು ಹೆಚ್ಚಿಸುವಲ್ಲಿ ಪ್ರಯತ್ನಿಸುತ್ತಿರಬೇಕು. ಆ ಮೂರು ಬಲಗಳೆಂದರೆ ದೇಹಬಲ, ಆತ್ಮಬಲ ಹಾಗೂ ಮನೋಬಲ. ನಮ್ಮ ದೇಹವನ್ನು ದಂಡಿಸಿದಷ್ಟೂ ದೇಹ ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಯಾವುದನ್ನಾದರೂ ಗೆದ್ದೇನು ಎನ್ನುವ ಆತ್ಮಬಲ ಹಾಗೂ ಯಾವುದನ್ನಾದರೂ ನಿಗ್ರಹಿಸಿಯೇನು ಎನ್ನುವ ಮನೋಬಲ ನಮ್ಮೊಳಗೆ ಅಡಕವಾದಾಗ ಸಾಧನೆ ಸಾಧ್ಯವಾಗುತ್ತದೆ ಎಂದರಲ್ಲದೆ ದೊಡ್ಡದಾದ ಕನಸನ್ನು ಕಂಡು ಅದನ್ನು ನನಸಾಗಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ ಪಾರಂಪರಿಕ ದಿನಾಚರಣೆಯ ನೆಲೆಯಲ್ಲಿ ಪರಂಪರೆಯಿಂದ ಸಾಗಿಬಂದ ವಸ್ತ್ರ ಧರಿಸುವುದರೊಂದಿಗೆ ಅದರ ಹಿನ್ನೆಲೆ, ಅದಕ್ಕಿರುವ ಪಾವಿತ್ರ್ಯತೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಹಣೆಗೆ ಕುಂಕುಮ ಧರಿಸುವುದರ ಹಿಂದೆ ಆಧ್ಯಾತ್ಮಿಕವಾದ ಕಾರಣಗಳಿವೆ. ಹಣೆಗೆ ಹಚ್ಚುವ ಕುಂಕುಮ, ಗಂಧವೇ ಮೊದಲಾದವುಗಳು ನಮ್ಮನ್ನು ಜಾಗೃತಾವಸ್ಥೆಯಲ್ಲಿಡುವಂತೆ ಮಾಡುವ ಚೈತನ್ಯವನ್ನು ಪ್ರೇರೇಪಿಸುತ್ತವೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಹಿಂದೂ ಸಮಾಜಕ್ಕಾಗಿ ದೇಶದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುವಂತಹ ಹಾರಿಕಾ ಮಂಜುನಾಥ್ ಅಂಥವರ ಬಗೆಗೆ ಸಮಾಜಕ್ಕೂ ಜವಾಬ್ದಾರಿ ಇರಬೇಕಾದದ್ದು ಅತ್ಯಂತ ಅಗತ್ಯ ಎಂದು ನುಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಪ್ರಸನ್ನ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾರಿಕಾ ಮಂಜುನಾಥ್ ಹಾಗೂ ಅವರ ಹೆತ್ತವರನ್ನು ಗೌರವಿಸಿ, ಸನ್ಮಾನಿಸಲಾಯಿತು.


ವಿದ್ಯಾರ್ಥಿನಿ ಪ್ರಣತಿ ಮತ್ತು ತಂಡದವರು ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು. ಉಪನ್ಯಾಸಕಿಯರಾದ ಅಪರ್ಣಾ ಉಪಾಧ್ಯಾಯ, ಚೈತ್ರಿಕಾ ನನ್ಯ, ಜಯಂತಿ ಹೊನ್ನಮ್ಮ ಹಾಗೂ ಅಕ್ಷತಾ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಅನಘ ಶೆಟ್ಟಿ ಹಾಗೂ ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು.

ಅನೇಕ ಶಾಲಾ ಕಾಲೇಜುಗಳ ಪಾರಂಪರಿಕ ದಿನಾಚರಣೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಮ್ಮ ಪರಂಪರೆಯ ನಿಜವಾದ ವೇಷಭೂಷಣ ಹಾಗೂ ಸಂಸ್ಕಾರವನ್ನು ಮೊದಲಬಾರಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ನೋಡುತ್ತಿದ್ದೇನೆ ಎಂದು ಹಾರಿಕಾ ಮಂಜುನಾಥ್ ಹೇಳಿದರು. ಹಾರಿಕಾ ಮಂಜುನಾಥ್ ಅವರು ಯಾವುದೇ ಶಿಕ್ಷಣ ಪಡೆಯಬಯಸಿದರೂ ಅವರ ಮುಂದಿನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಭರಿಸುವುದಾಗಿ ಅಂಬಿಕಾ ಶಿಕ್ಷಣ ಸಂಸ್ತೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಘೋಷಿಸಿದರು. ಅಂತೆಯೇ ಶಿಕ್ಷಣದ ನಂತರ ಉದ್ಯೋಗಕ್ಕಾಗಿ ಆಗಮಿಸುವುದಿದ್ದರೆ ಅಂಬಿಕಾ ಸಂಸ್ಥೆಗಳಲ್ಲಿ ಉದ್ಯೋಗದ ಭರವಸೆಯನ್ನೂ ನೀಡಿದರು.

LEAVE A REPLY

Please enter your comment!
Please enter your name here