ಕಾಣಿಯೂರು: ಮಕ್ಕಳ ಕಲಿಕಾ ಪ್ರಗತಿ ಮತ್ತು ಶೈಕ್ಷಣಿಕ ಗುಣಮಟ್ಟದ ಬಗೆಗೆ ಪೋಷಕರೊಂದಿಗೆ ಚರ್ಚಿಸಲು ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕಿ ಸರಿತಾ ಹೇಳಿದರು.
ಅವರು ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲೆಯಲ್ಲಿ ನಡೆದ ಸಮುದಾಯ ದತ್ತ ಶಾಲೆ ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯಾಗಿ ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಅದಲ್ಲದೆ ಸರಕಾರ ಹಲವಾರು ಯೋಜನೆಗಳನ್ನು ಕೂಡ ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪೋಷಕರ ಪಾತ್ರವು ಬಹಳ ಮುಖ್ಯ ಎಂದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸದಾನಂದ ಕಡಿರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮುಖ್ಯ. ಈಗಾಗಲೇ ಶಾಲಾ ವಾರ್ಷಿಕೋತ್ಸವವನ್ನು ನಡೆಸಲು ತೀರ್ಮಾನಿಸಿದ್ದು. ಕಾರ್ಯಕ್ರಮದ ಯಶಸ್ವಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸುಂದರಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಕೋಶಾಧಿಕಾರಿ ಸುಕುಮಾರ್ ಕಲ್ಪಡ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಶಶಿಕಲಾ ಪ್ರಾಸ್ತವಿಕದೊಂದಿಗೆ ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು. ಶಿಕ್ಷಕಿಯಾರಾದ ಶೋಭಿತಾ, ಸುರೇಖಾ, ಶ್ರುತಿ, ದಿವ್ಯಾ, ಜಯಲತಾ, ಸುಶ್ಮಿತಾ ಸಹಕರಿಸಿದರು.