ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ನ ಉದ್ಘಾಟನೆ

0

ವಿದ್ಯಾರ್ಥಿ ಪರಿಷತ್ ಎಂಬುದು ಎಲ್ಲಾ ವಿದ್ಯಾರ್ಥಿಗಳ ಧ್ವನಿಯಾಗಿದೆ: ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 2024-25ರ ಸಾಲಿನ ವಿದ್ಯಾರ್ಥಿ ಪರಿಷತ್ ನ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ‘ಪರಿಚಯೋತ್ಸವ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕಾನಂದ ಕಾಲೇಜಿ(ಸ್ವಾಯತ್ತ)ನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಶ್ರೀಪತಿ ಕಲ್ಲೂರಾಯ ರವರು ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಂದು ಕಾಲೇಜಿನಲ್ಲಿ ರಚನೆಯಾಗುವ ವಿದ್ಯಾರ್ಥಿ ಪರಿಷತ್ ಎಂಬುದು ವಿದ್ಯಾರ್ಥಿಗಳ ಧ್ವನಿಯಾಗಿದೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿ ಸಮುದಾಯದ ನಿರೀಕ್ಷೆಗಳು ಈ ವಿದ್ಯಾರ್ಥಿ ಪರಿಷತ್ ನ ವಿದ್ಯಾರ್ಥಿ ನಾಯಕರ ಮೇಲಿರುತ್ತದೆ. ಜೊತೆಗೆ ವಿದ್ಯಾರ್ಥಿ ಪರಿಷತ್ ಎನ್ನುವುದು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ಬೆಳೆಸುವ ಒಂದು ಅತ್ಯುತ್ತಮ ವೇದಿಕೆಯಾಗಿದೆ. ಭವಿಷ್ಯದಲ್ಲಿ ದೇಶದ ಮಹಾನ್ ನಾಯಕರಾಗುವ ಅವಕಾಶವನ್ನೂ ಹಾಗೂ ಅನುಭವವನ್ನು ವಿದ್ಯಾರ್ಥಿಯೊಬ್ಬನಿಗೆ ಈ ರೀತಿಯ ವಿದ್ಯಾರ್ಥಿ ಪರಿಷತ್ ತಿಳಿಸಿಕೊಡುತ್ತದೆ ಎಂದು ಹೇಳಿದರು.


ಕಾನೂನು ವಿದ್ಯಾರ್ಥಿಗಳು ಯಾವುದೇ ಗೊಂದಲ, ಒತ್ತಡಗಳಿಗೆ ಒಳಗಾಗದೇ, ತಮ್ಮ ಸ್ವ ಆಸಕ್ತಿಯ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ವಿಯಾಗುತ್ತಾರೆ. ಅಲ್ಲದೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಕಾನೂನು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಸುರೇಂದ್ರ ಕಿಣಿ ಜಿ ಮಾತನಾಡಿ, ಮಹಾವಿದ್ಯಾಲಯದ ಕಾರ್ಯಕ್ರಮಗಳ ಸುಗಮ ನಿರ್ವಹಣೆಗಾಗಿ ವಿದ್ಯಾರ್ಥಿ ಪರಿಷತ್ತಿನ ರಚನೆಯನ್ನು ಮಾಡಲಾಗಿದ್ದು, ಪ್ರತಿಯೊಬ್ಬ ಚುನಾಯಿತ ವಿದ್ಯಾರ್ಥಿ ನಾಯಕನು ಸಹಾ ತನಗೆ ವಹಿಸಿದ ಕೆಲಸವನ್ನು ಆದ್ಯ ಕರ್ತವ್ಯವೆಂಬ ರೀತಿಯಲ್ಲಿ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಅವರು ತಿಳಿಸಿದರು.


ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀರಕ್ಷಾ ವಿದ್ಯಾರ್ಥಿ ಪರಿಷತ್ ನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ, ಪ್ರಾಂಶುಪಾಲರಾದ ಅಕ್ಷತಾ ಎ.ಪಿ., ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಗಣೇಶ್ ಜೆ. ಬಾಳಿಗ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರುತಿ ಟಿ. ವಂದಿಸಿದರು. ಕಾರ್ಯಕ್ರಮವನ್ನು ತೃತೀಯ ಎಲ್. ಎಲ್. ಬಿ. ವಿದ್ಯಾರ್ಥಿನಿ ಸ್ಫೂರ್ತಿ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ‘ಪರಿಚಯೋತ್ಸವ’ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ನಡೆಯಿತು.

LEAVE A REPLY

Please enter your comment!
Please enter your name here