ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘದ ಸಹಸಂಸ್ಥೆ, ದಿನಬಳಕೆಯ ಗೃಹೋಪಯೋಗಿ ವಸ್ತುಗಳ ಮಳಿಗೆ ಕಾಮಧೇನು ಮಿನಿ ಮಾರ್ಟ್ ನ.2ರಂದು ಬೆಳಿಗ್ಗೆ ನೆಲ್ಯಾಡಿ ಲೋಟಸ್ ಕಾಂಪ್ಲೆಕ್ಸ್ನಲ್ಲಿ ಕಾಮಧೇನು ಮಹಿಳಾ ಸಹಕಾರ ಸಂಘದ ಬಳಿ ಶುಭಾರಂಭಗೊಂಡಿತು.
ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ ರಿಬ್ಬನ್ ಕತ್ತರಿಸಿ ನೂತನ ಮಳಿಗೆ ಉದ್ಘಾಟಿಸಿದರು. ಸ್ವಸಹಾಯ ಸಂಘದ ಸದಸ್ಯೆ ಶ್ಯಾಮಲಾಶಿವಣ್ಣ ಅವರು ದೀಪ ಪ್ರಜ್ವಲಿಸಿದರು. ಬಳಿಕ ಮಾತನಾಡಿದ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ಅವರು, ನೆಲ್ಯಾಡಿಯಲ್ಲಿ 2 ವರ್ಷದ ಹಿಂದೆ ಆರಂಭಗೊಂಡಿದ್ದ ಕಾಮಧೇನು ಮಹಿಳಾ ಸಹಕಾರ ಸಂಘ ಉತ್ತಮ ವ್ಯವಹಾರದ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸಂಘದಲ್ಲಿ ಆಡಳಿತ ಮಂಡಳಿ, ಸಿಬ್ಬಂದಿವರ್ಗ ಒಂದೇ ಮನೋಭಾವನೆಯಲ್ಲಿ ದುಡಿಯುತ್ತಿರುವುದರಿಂದ ಸಂಘ ಅಲ್ಪ ಅವಧಿಯಲ್ಲೇ ಹೆಸರುಗಳಿಸುವಂತಾಗಿದೆ. ಈಗ ಶುಭಾರಂಭಗೊಂಡಿರುವ ಇದರ ಸಹಸಂಸ್ಥೆ ಕಾಮಧೇನು ಮಿನಿಮಾರ್ಟ್ ಸಹ ಇದೇ ಮಾದರಿಯಲ್ಲಿ ಬೆಳೆಯಲಿ ಎಂದರು.
ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ವರ್ಗೀಸ್ ಕೈಪನಡ್ಕರವರು ಮಾತನಾಡಿ, ನೆಲ್ಯಾಡಿಯ ಜನರ ಆಶೋತ್ತರ ಈಡೇರಿಸುವ ಮೂಲಕ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು. ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮ ಅವರು ಮಾತನಾಡಿ, ಕಾಮಧೇನು ಮಹಿಳಾ ಸಹಕಾರ ಸಂಘ ಮಹಿಳೆಯರಿಗೆ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜಿಲ್ಲೆ,ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಘ ಸ್ವಂತಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಆಗಲಿ ಎಂದರು. ಜಿ.ಪಂ.ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಅವರು ಮಾತನಾಡಿ, ಕಾಮಧೇನು ಮಹಿಳಾ ಸಹಕಾರ ಸಂಘವು ಇನ್ನೂ ಹೆಚ್ಚಿನ ಶಾಖೆ ಆರಂಭಿಸುವ ಮೂಲಕ ಮಾದರಿ ಸಂಘವಾಗಿ ಬೆಳೆಯಲಿ ಎಂದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ಅಲ್ಬದ್ರಿಯಾ ಇಂಗ್ಲಿಷ್ ಮೀಡಿಯಂ ಶಾಲೆಯ ಅಧ್ಯಕ್ಷ ನಾಝೀಂ ಸಾಹೇಬ್, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶೇಖರ ಶಿಬಾರ್ಲ, ಪುತ್ತೂರು ಬ್ರಹ್ಮಶ್ರೀ ಸಹಕಾರಿ ಸಂಘದ ನಿರ್ದೇಶಕ ರವಿಕುಮಾರ್ ಶಾಂತಿಗೋಡು ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಶೀನಪ್ಪ ಪೂಜಾರಿ, ನಿರ್ದೇಶಕ ಚೆನ್ನಪ್ಪ ಪೂಜಾರಿ ಗೋಳಿತ್ತೊಟ್ಟು, ಮಾಜಿ ಅಧ್ಯಕ್ಷ ಜನಾರ್ದನ ಬಾಣಜಾಲು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಸುಪ್ರಿತಾರವಿಚಂದ್ರ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮಹಮ್ಮದ್ ಇಕ್ಬಾಲ್, ಜಯಲಕ್ಷ್ಮೀಪ್ರಸಾದ್, ಗಣ್ಯರಾದ ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಅನ್ನಮ್ಮವರ್ಗೀಸ್, ಸಿಮಿ, ಶಿವಪ್ರಸಾದ್ ಬೀದಿಮಜಲು ಸಹಿತ ಹಲವಾರು ಮಂದಿ ಭೇಟಿ ನೀಟಿ ಶುಭಹಾರೈಸಿದರು.
ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಸ್ವಾಗತಿಸಿ ಮಾತನಾಡಿ, ಕಾಮಧೇನು ಮಹಿಳಾ ಸಹಕಾರ ಸಂಘವು ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಎಲ್ಲರ ಸಹಕಾರದಿಂದ ವೇಗವಾಗಿ ಬೆಳೆಯುತ್ತಿದೆ. ಇದೀಗ ದಿನಬಳಕೆಯ ಗೃಹೋಪಯೋಗಿ ವಸ್ತುಗಳ ಮಳಿಗೆ ಕಾಮಧೇನು ಮಿನಿ ಮಾರ್ಟ್ ಆರಂಭಿಸಿದ್ದು ಇಲ್ಲಿ ಮಹಿಳೆಯರಿಗೆ ನೂತನ ವಿನ್ಯಾಸದ ಉಡುಪುಗಳು, ಫ್ಯಾನ್ಸಿ ಐಟಂ, ಸ್ಟೀಲ್ ಪಾತ್ರೆಗಳು, ದಿಬಳಕೆಯ ವಸ್ತುಗಳು, ದಿನಸಿ ಸಾಮಾಗ್ರಿ, ತರಕಾರಿ, ಹಣ್ಣು ಹಂಪಲು, ಜ್ಯೂಸ್, ಬೇಕರಿ ತಿಂಡಿ ತಿನಿಸುಗಳು ಲಭ್ಯವಿದೆ. ಅಲ್ಲದೇ ಸಂಘದ ಸದಸ್ಯೆಯರು ಉತ್ಪಾದಿಸಿ ವಿವಿಧ ಉತ್ಪನ್ನಗಳೂ ಲಭ್ಯವಿದೆ. ಸಂಘದ ಸ್ವಸಹಾಯ ಸಂಘದ ಸದಸ್ಯೆಯರಿಗೆ ಕಾಮಧೇನು ಮಿನಿ ಮಾರ್ಟ್ನಲ್ಲಿ ದಿನಬಳಕೆಯ ಗೃಹೋಪಯೋಗಿ ವಸ್ತುಗಳ ಖರೀದಿಗೆ 6 ತಿಂಗಳ ಅವಧಿಗೆ 10 ಸಾವಿರ ರೂ.ತನಕ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ಇದೆ. ಗ್ರಾಹಕರು ನಮ್ಮೊಂದಿಗೆ ವ್ಯವಹರಿಸಿ ಪ್ರೋತ್ಸಾಹಿಸುವಂತೆ ಹೇಳಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಚೈತನ್ಯ ವಂದಿಸಿದರು. ಸಂಘದ ಉಪಾಧ್ಯಕ್ಷೆ ಮೇಘನಾ ಶೈನ್, ನಿರ್ದೇಶಕರಾದ ಶ್ರೀಲತಾ ಸಿ.ಹೆಚ್., ಪ್ರವೀಣಿ ಎಂ., ಶಾಲಿನಿ, ವಾರಿಜಾಕ್ಷಿ, ಸಂಪಾವತಿ ಎನ್., ಮೈತ್ರಿ ಜಿ., ರತಿ ಡಿ., ಜಯಂತಿ ಬಿ.ನಾಯ್ಕ್, ವಿನಿತಾ ಎಂ.ಬಿ., ಡೈಸಿ ವರ್ಗೀಸ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಲಕ್ಷ್ಮೀ ಪೂಜೆ/ಗಣಹೋಮ:
ಕಾಮಧೇನು ಮಹಿಳಾ ಸಹಕಾರ ಸಂಘದಲ್ಲಿ ಬೆಳಿಗ್ಗೆ ಲಕ್ಷ್ಮೀಪೂಜೆ ನಡೆಯಿತು. ಶುಭಾರಂಭದ ಪ್ರಯುಕ್ತ ಕಾಮಧೇನು ಮಿನಿ ಮಾರ್ಟ್ನಲ್ಲಿ ಗಣಹೋಮ ನಡೆಯಿತು. ಪಡುಬೆಟ್ಟು ದೇವಸ್ಥಾನದ ಅರ್ಚಕರಾದ ಆದಿತ್ಯ ಭಟ್ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಸಹಾಯಕ ದೀಕ್ಷಿತ್ ಪುತ್ತೂರು ಸಹಕರಿಸಿದರು.