ಪುತ್ತೂರು: ಮೆಸ್ಕಾಂ ಇಲಾಖೆಯ ಪವರ್ ಮ್ಯಾನ್ ಹುದ್ದೆ ನೇಮಕಾತಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುವಂತಾಗಬೇಕು ಎಂಬ ಶಾಸಕ ಅಶೋಕ್ ಕುಮಾರ್ ರೈರವರ ಸಂಕಲ್ಪದಂತೆ ರೈ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಮೆಸ್ಕಾಂ ಪುತ್ತೂರು ಸಹಯೋಗದೊಂದಿಗೆ, ಮೆಸ್ಕಾಂ ಪವರ್ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಿದ್ಯುತ್ ಕಂಬ ಹತ್ತುವ ತರಬೇತಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ನ.4, 5,ಮತ್ತು 6ರವರಗೆ ಮೂರು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು ವಿದ್ಯುತ್ ಕಂಬ ಹತ್ತುವುದು, ಶಾಟ್ಪುಟ್, ಸ್ಕಿಪ್ಪಿಂಗ್, 100 ಮೀ.ಓಟ ಹಾಗೂ 800 ಮೀ.ಓಟದ ತರಬೇತಿ ನೀಡಲಾಗುತ್ತದೆ.
ಮೆಸ್ಕಾಂ ಇಲಾಖೆಯಿಂದ ಕಿರಿಯ ಸ್ಟೇಷನ್ ಪರಿಚಾರಕ 433 ಹುದ್ದೆ ಮತ್ತು ಕಿರಿಯ ಪವರ್ ಮ್ಯಾನ್ 2540 ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ದ.ಕ.ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೂ ಉದ್ಯೋಗ ಸಿಗಬೇಕೆಂಬ ಉದ್ದೇಶವನ್ನು ಶಾಸಕ ಅಶೋಕ್ ಕುಮಾರ್ ರೈ ಹೊಂದಿದ್ದು ಅದರಂತೆ ರಾಜ್ಯ ಇಂಧನ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮೆಸ್ಕಾಂ ಹುದ್ದೆ ಭರ್ತಿ ವೇಳೆ ಸ್ಥಳೀಯರಿಗೆ ಅವಕಾಶ ಕೊಡುವುದು ಮಾತ್ರವಲ್ಲದೆ ರಾಜ್ಯದಲ್ಲಿ ಏಕಕಾಲದಲ್ಲಿ ಅರ್ಹತಾ ಪರೀಕ್ಷೆಯನ್ನು ನಡೆಸಬೇಕು ಎಂದು ಶಾಸಕರು ಮನವಿ ಮಾಡಿದ್ದರು. ಶಾಸಕರ ಮನವಿಗೆ ಸರಕಾರ ಕೂಡಾ ಸ್ಪಂದನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನಿಂದ ಅರ್ಜಿ ಹಾಕಿದ ಅಭ್ಯರ್ಥಿಗಳಿಗೆ ನೇಮಕಾತಿ ಇಂಟರ್ವ್ಯೂನಲ್ಲಿ ನಡೆಸಲಾಗುವ ಪರೀಕ್ಷೆಗೆ ಪೂರ್ವಭಾವಿಯಾಗಿ ತರಬೇತಿ ಹಮ್ಮಿಕೊಳ್ಳಲಾಗಿದೆ.
ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಕೆಎಸ್ಆರ್ಟಿಸಿ, ಮೆಸ್ಕಾಂ, ಮುಂತಾದ ಇಲಾಖೆಗಳ ಹುದ್ದೆಗೆ ಸ್ಥಳೀಯರು ಅರ್ಜಿ ಹಾಕುವುದಿಲ್ಲ. ಈ ಭಾಗದ ಯುವಕರಿಗೆ ಕೆಲಸ ಕೊಡಿಸಬೇಕು ಎಂಬ ಆಸೆ ಇದೆ. ನಮ್ಮ ದೇಶ, ರಾಜ್ಯ ಉದ್ಧಾರ ಆಗಬೇಕಾದರೆ ಬಡವರ, ಯುವಕರ ಮನೆ ಉದ್ಧಾರ ಆಗಬೇಕು. ರಾಜಕೀಯ ಮಾಡಿದರೆ ಉದ್ಧಾರ ಆಗುವುದಿಲ್ಲ. ಶಾಟ್ಪುಟ್, ಓಟ, ಸ್ಕಿಪ್ಪಿಂಗ್ ಬಗ್ಗೆ ಕೂಡ ತರಬೇತಿ ನೀಡಲಾಗುವುದು. ನಿಮಗೆ ಕೆಲಸ ದೊರಕಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಜೀವನದಲ್ಲಿ ಸೆಟ್ಲ್ ಆಗುತ್ತೀರಿ ಎಂದು ಹೇಳಿ ಅವಕಾಶಕ್ಕಾಗಿ ಇಂಧನ ಸಚಿವರಿಗೆ ಹಾಗೂ ಮೆಸ್ಕಾಂ ಇಲಾಖೆಗೆ ಧನವಾದ ಹೇಳಿದರು.
ಮೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಮಾತನಾಡಿ ಶಾಸಕರ ಒತ್ತಾಯದ ಮೇರೆಗೆ ಸ್ಥಳೀಯರಿಗೆ ಅವಕಾಶ ಕೊಡಬೇಕು ಎಂಬ ಉದ್ಧೇಶದಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯರ ಉತ್ಸಾಹದಿಂದ ಶೇ.60 ನೇಮಕಾತಿ ಭರ್ತಿಗೆ ಸರಕಾರ ಆದೇಶ ನೀಡಿದೆ. ಇಂಟರ್ವ್ಯೂಗೆ ಆತ್ಮವಿಶ್ವಾಸ ಬರಬೇಕು ಎಂದು ತರಬೇತಿ ಆಯೋಜಿಸಲಾಗಿದೆ. ಸರಿಯಾಗಿ ತರಬೇತಿ ಪಡೆದುಕೊಂಡು ಮುಂದಿನ ಇಂಟರ್ವ್ಯೂನಲ್ಲಿ ಉತ್ತೀರ್ಣರಾಗಬೇಕು ಎಂದು ಹೇಳಿದರು. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ರೈ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ಮೆಸ್ಕಾಂ ಪ್ರಭಾರ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ರವಿಕಾಂತ್ ವಂದಿಸಿದರು.
322 ಮಂದಿಯಿಂದ ಅರ್ಜಿ ಸಲ್ಲಿಕೆ
ಪುತ್ತೂರು ಶಾಸಕರ ಕಚೇರಿ ಮೂಲಕ ಪುತ್ತೂರು, ಸುಳ್ಯ, ಕಡಬ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಸುಮಾರು 322 ಮಂದಿ ಮೆಸ್ಕಾಂ ಪವರ್ಮ್ಯಾನ್ ಹುದ್ದೆಯ ಕಂಬ ಹತ್ತುವ ತರಬೇತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರಿನಿಂದ 107, ಸುಳ್ಯದಿಂದ 82, ಕಡಬದಿಂದ 59, ಬಂಟ್ವಾಳದಿಂದ 45 ಹಾಗೂ ಬೆಳ್ತಂಗಡಿಯಿಂದ 29 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು ತರಬೇತಿಗೆ ಹಾಜರಾಗಿದ್ದಾರೆ.