ಕೇಂದ್ರ, ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಮಠಂದೂರು
ಉಪ್ಪಿನಂಗಡಿ: ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪದಿಂದ ರೈತಾಪಿ ಜನರಿಗೆ ಆಗುವ ನಷ್ಟವನ್ನು ಭರಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಮೂಲಕ ನೀಡಲಾಗುವ ಫಸಲ್ ಬಿಮಾ ಯೋಜನೆಗೆ ತಾಲೂಕು ಮಟ್ಟದ ವರದಿಯನ್ನು ಪರಿಗಣಿಸಿ ವಿಮಾ ಮೊತ್ತವನ್ನು ಮಂಜೂರು ಮಾಡಬೇಕೆಂದು ಮಾಜಿ ಶಾಸಕ, ಸಹಕಾರ ಪ್ರಕೋಷ್ಟದ ಮಾಜಿ ರಾಜ್ಯ ಸಂಚಾಲಕರಾದ ಸಂಜೀವ ಮಠಂದೂರು ಆಗ್ರಹಿಸಿದರು.
ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಕ ಸಂಘದ ಕಚೇರಿಯಲ್ಲಿ ನ.5ರಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಮಾವಾನ ವೈಪರೀತ್ಯ, ಪ್ರಾಕೃತಿಕ ವಿಕೋಪಗಳಿಂದ ರೈತಾಪಿ ವರ್ಗದವರು ಸಂಕಷ್ಟ ಅನುಭವಿಸುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿಯವರು ಆರು ವರ್ಷಗಳ ಹಿಂದೆ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಿದ್ದು, ನೀರಾವರಿ ಪ್ರದೇಶದ ರೈತನ ವಿಮಾ ಪಾಲಿಸಿಯಲ್ಲಿ 50:50ರ ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು ಶೇ.25ರಂತೆ ಇದೆ. ಮಳೆಯಾಶ್ರಿತ ಪ್ರದೇಶದ ರೈತನ ವಿಮಾ ಪಾಲಿಸಿಯಲ್ಲಿ ರಾಜ್ಯ ಹಾಗೂ ಕೇಂದ್ರದ ಪಾಲು ತಲಾ ಶೇ.30ರಂತೆ ಇದೆ. ಕಳೆದ ಬಾರಿ ಈ ಯೋಜನೆಯನ್ನು ಅನುಷ್ಠಾನಿಸಲು ಯಾವುದೇ ವಿಮಾ ಕಂಪೆನಿಗಳು ಮುಂದೆ ಬಾರದಿದ್ದಾಗ ರಾಜ್ಯ ಸರಕಾರ ಇದರ ಟರ್ಮ್ ಶೀಟ್ನಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದು, ನೀರಾವರಿ ಪ್ರದೇಶ ಮತ್ತ ಮಳೆಯಾಶ್ರಿತ ಪ್ರದೇಶದ ರೈತರಿಗೆ ತಾನು ನೀಡುವ ಪಾಲಿನಲ್ಲಿ ಶೇ.10 ಹೆಚ್ಚುವರಿ ಮಾಡಿದೆ. ಆದರೆ ಈ ಹಿಂದೆ ಹೋಬಳಿ ಮಟ್ಟದ ವರದಿಯನ್ನು ಪರಿಗಣಿಸಿ ನೀಡಲಾಗುತ್ತಿದ್ದ ಬೆಳೆ ವಿಮೆಯನ್ನು ಗ್ರಾಮ ಪಂಚಾಯತ್ ಮಟ್ಟಕ್ಕೆ ಸೀಮಿತಗೊಳಿಸಿದೆ. ಆದ್ದರಿಂದ ಈ ಬಾರಿ ಬಿಡುಗಡೆಯಾದ ವಿಮಾ ಮೊತ್ತದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯತ್ಯಾಸಗಳಿವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಹವಾಮಾನ ಆಧಾರಿತ ವರದಿಯನ್ನು ಕಳುಹಿಸಲು ಸಮರ್ಪಕ ಸಲಕರಣೆಗಳಿಲ್ಲ. ಸರಿಯಾದ ಸಿಬ್ಬಂದಿಯೂ ಇಲ್ಲ. ಹೀಗೆ ಹಲವು ತಾಂತ್ರಿಕ ಸಮಸ್ಯೆಗಳು ಉಂಟಾಗುವುದರಿಂದ ತಾಲೂಕು ಕೇಂದ್ರದ ಹವಾಮಾನ ವರದಿಯನ್ನು ಆಧರಿಸಿ ವಿಮೆ ಮಂಜೂರು ಮಾಡಬೇಕೆಂದು ಅವರು ಒತ್ತಾಯಿಸಿದರಲ್ಲದೆ, ಶೇ.10 ಹೆಚ್ಚುವರಿ ಹಣವನ್ನು ಭರಿಸಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದ ರಾಜ್ಯ ಸರಕಾರದ ಕೆಲಸ ಅಭಿನಂದನಾರ್ಹವಾಗಿದ್ದರೂ, ಇದರಲ್ಲಿ ಸರಕಾರ ಇನ್ನಷ್ಟು ಮುತುವರ್ಜಿ ವಹಿಸಿ, ರೈತರಿಗೆ ಆಗುವ ನಷ್ಟವನ್ನು ತಪ್ಪಿಸಬೇಕೆಂದು ತಿಳಿಸಿದರು.
ಉಪ್ಪಿನಂಗಡಿ ಸಂಘ ವ್ಯಾಪ್ತಿಗೆ 10 ಕೋಟಿ ಬಿಡುಗಡೆ:
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಮಾತನಾಡಿ, 2023-24ನೇ ಸಾಲಿನಲ್ಲಿ ನಮ್ಮ ಸಂಘದ ಕಾರ್ಯ ವ್ಯಾಪ್ತಿಯ ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಇಳಂತಿಲ ಮತ್ತು ನೆಕ್ಕಿಲಾಡಿ ಗ್ರಾಮಗಳಲ್ಲಿ ಒಟ್ಟು 2580 ಸದಸ್ಯರು 4068 ಎಕ್ರೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ರೂಪಾಯಿ 1 ಕೋಟಿ 5 ಲಕ್ಷದ 39 ಸಾವಿರದ 18 ರೂಪಾಯಿ ವಿಮಾ ಕಂತು ಪಾವತಿಸಿದ್ದಾರೆ. ಕೆಲವು ಗ್ರಾ.ಪಂ. ವ್ಯಾಪ್ತಿಯವರಿಗೆ ಬೆಳೆ ವಿಮೆಯ ಮೊತ್ತ ಬಿಡುಗಡೆಯಾಗಿದ್ದು, ಇನ್ನು ಕೆಲವು ಗ್ರಾ.ಪಂ. ವ್ಯಾಪ್ತಿಯವರಿಗೆ ವಿಮಾ ಹಣ ಬಿಡುಗಡೆಯು ಪ್ರಕ್ರಿಯೆಯ ಹಂತದಲ್ಲಿದೆ. ನಮ್ಮ ಸಂಘದ ವ್ಯಾಪ್ತಿಯಲ್ಲಿ ಅಂದಾಜು 10 ಕೋಟಿಗೂ ಮೇಲ್ಪಟ್ಟು ವಿಮಾ ಮೊಬಲಗು ಬಿಡುಗಡೆಗೊಳ್ಳುತ್ತಿದೆ ಮಾಹಿತಿ ನೀಡಿದರು.
ಹವಾಮಾನ ವೈಪರಿತ್ಯದಿಂದ ರೈತಾಪಿ ಜನರಿಗೆ ಆಗುವಂತಹ ನಷ್ಟ ಹಾಗೂ ತೊಂದರೆಗಳನ್ನು ಮನಗಂಡು, ರೈತರನ್ನು ಈ ತೊಂದರೆಗಳಿಂದ ಮುಕ್ತಿ ನೀಡುವ ಸಲುವಾಗಿ ಕೃಷಿ ಬೆಳೆಗಳಿಗೆ ಕಳೆದ ಆರು ವರುಷಗಳಿಂದ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಹವಾಮಾನ ಆಧಾರಿತ ಫಸಲ್ ಭಿಮಾ ಯೋಜನೆಯ ರೂವಾರಿಗಳಾದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸಿದ ರಾಜ್ಯ ಸರಕಾರಕ್ಕೂ ಸಂಘದ ಎಲ್ಲಾ ಫಲಾನುಭವಿ ಸದಸ್ಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು, ನಿರ್ದೇಶಕರುಗಳಾದ ಯಶವಂತ ಜಿ., ಎಂ. ಜಗದೀಶ ರಾವ್, ದಯಾನಂದ ಎಸ್., ರಾಮ ನಾಯ್ಕ, ರಾಜೇಶ್, ಕುಂಞ ಎನ್., ಸಚಿನ್ ಎಂ., ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶೋಭಾ ಕೆ., ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ, ಲೆಕ್ಕಾಧಿಕಾರಿ ಪ್ರವೀಣ ಆಳ್ವ ಉಪಸ್ಥಿತರಿದ್ದರು.