ಚೆಲ್ಯಡ್ಕ ಸೇತುವೆ ಮೇಲೆ ಬಸ್ಸು ಸಂಚಾರಕ್ಕೆ ಅನುಮತಿ ನೀಡುವಂತೆ ಆಗ್ರಹ-ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಣಯ-ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

0

ಪುತ್ತೂರು: ಮುಳುಗು ಸೇತುವೆ ಎಂದೇ ಕುಖ್ಯಾತಿ ಪಡೆದುಕೊಂಡಿರುವ ಚೆಲ್ಯಡ್ಕ ಸೇತುವೆಯು ದುರ್ಬಲಗೊಂಡಿರುವ ಹಿನ್ನೆಲೆ ಹಾಗೂ ಮಳೆಗಾಲದಲ್ಲಿ ಮುಳುಗುತ್ತಿರುವುದರಿಂದ ಘನ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಈಗ ಮಳೆ ನಿಂತಿದ್ದು ಅಲ್ಲದೆ ಸೇತುವೆ ಮೇಲೆ ಘನ ವಾಹನಗಳು ಸಂಚರಿಸುತ್ತಿರುವುದರಿಂದ ಬಸ್ಸು ಸಂಚಾರಕ್ಕೂ ಅನುಮತಿ ನೀಡಬೇಕು, ಬಸ್ಸು ಸಂಚಾರವಿಲ್ಲದೆ ಈ ಭಾಗದ ನೂರಾರು ಕುಟುಂಬಗಳಿಗೆ ತೊಂದರೆಯಾಗಿದೆ ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಯವರು ಬಸ್ಸು ಸಂಚಾರಕ್ಕೆ ಅನುಮತಿಯನ್ನು ನೀಡಬೇಕು, ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆದುಕೊಳ್ಳಬೇಕು ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಹೇಶ್ ರೈ ಕೇರಿಯವರು ಆಗ್ರಹಿಸಿದ ಹಿನ್ನೆಲೆಯಲ್ಲಿ ನಿರ್ಣಯನ್ನು ಕೈಗೊಳ್ಳಲಾಯಿತು.


ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನ.6ರಂದು ಗ್ರಾಪಂ ಕಛೇರಿಯಲ್ಲಿ ನಡೆಯಿತು. ಶೂನ್ಯ ವೇಳೆಯಲ್ಲಿ ಸದಸ್ಯ ಮಹೇಶ್ ರೈ ಕೇರಿಯವರು ವಿಷಯ ಪ್ರಸ್ತಾಪಿಸಿ, ಒಳಮೊಗ್ರು, ಆರ್ಯಾಪು ಮತ್ತು ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಗೆ ಬರುವ ಚೆಲ್ಯಡ್ಕ ಸೇತುವೆಯು ಶತಮಾನಗಳಷ್ಟು ಹಳೆಯ ಸೇತುವೆಯಾಗಿದ್ದು ಪ್ರತಿ ಮಳೆಗಾಲದಲ್ಲೂ ಇದು ಮುಳುಗಡೆಯಾಗುತ್ತದೆ. ಕಳೆದ ಮಳೆಗಾಲದ ಅವಧಿಯಲ್ಲಿ ಜಿಲ್ಲಾಧಿಕಾರಿಯವರು ಸೇತುವೆಯನ್ನು ಪರಿಶೀಲನೆ ಮಾಡಿ ಘನ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಸೇತುವೆ ಮೇಲೆ ಬಸ್ಸು ಒಂದನ್ನು ಬಿಟ್ಟು ಬೇರೆ ಎಲ್ಲಾ ರೀತಿಯ ಘನ ವಾಹನಗಳು ಸಂಚರಿಸುತ್ತಿವೆ. ಬಸ್ಸು ಸಂಚಾರವಿಲ್ಲದೆ ಈ ಭಾಗದ ನೂರಾರು ಗ್ರಾಮಸ್ಥರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಿ ಬಸ್ಸು ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಅವರು ಸಭೆಯಲ್ಲಿ ಆಗ್ರಹಿಸಿದರು.


ಸೇತುವೆ ನಿರ್ಮಾಣಕ್ಕೆ ಈಗಾಗಲೇ ಶಾಸಕರಾದ ಅಶೋಕ್ ಕುಮಾರ್ ರೈಯವರು 3 ಕೋಟಿ ರೂಪಾಯಿ ಅನುದಾನ ಇಟ್ಟಿದ್ದು ಶಿಲಾನ್ಯಾಸ ಕೂಡ ನಡೆದಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಇಂಜಿನಿಯರ್‌ಗಳು ತಿಳಿಸಿದ್ದಾರೆ. ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿ ಎಂದ ಮಹೇಶ್ ರೈಯವರು, ಅದಕ್ಕೆ ಮೊದಲು ಸೇತುವೆ ಮೇಲೆ ಬಸ್ಸು ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಅನುಮತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸೇತುವೆ ಮೇಲೆಯೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಮಹೇಶ್ ರೈ ಕೇರಿಯವರ ಮಾತಿಗೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.


ಗ್ರಾಮದ ಸ್ವಚ್ಚತೆಗೆ ಮೊದಲ ಆದ್ಯತೆ
ಒಳಮೊಗ್ರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಪಂ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಸ್ವಚ್ಛ ವಾಹಿನಿ ವಾಹನವು ಗ್ರಾಮದಲ್ಲೆಲ್ಲಾ ಸಂಚರಿಸುತ್ತಿದ್ದು ಕಸ ಸಂಗ್ರಹಣೆ ಮಾಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮಲ್ಲಿ ಉತ್ಪತ್ತಿಯಾಗುವ ಕಸಗಳನ್ನು ವಾಹನಕ್ಕೆ ನೀಡಿ ಸಹಕರಿಸಬೇಕು. ಯಾರೂ ಗ್ರಾಮದ ಸ್ವಚ್ಚತೆಯಲ್ಲಿ ಸಹಕರಿಸುವುದಿಲ್ಲವೋ, ಕಸಗಳನ್ನು ವಾಹನಕ್ಕೆ ನೀಡುವುದಿಲ್ಲವೋ ಅವರಿಗೆ ಸರಕಾರದ ಸವಲತ್ತುಗಳನ್ನು ನೀಡುವಲ್ಲಿಯೂ ಕೆಲವೊಂದು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಭೆಗೆ ತಿಳಿಸಿದರು. ಇದಕ್ಕೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಪ್ರತಿಕ್ರಿಯೆ ನೀಡಿ, ಗ್ರಾಮಸ್ಥರು ಯಾರೂ ಕೂಡ ಕಸ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಬೆಂಕಿ ಇಟ್ಟು ಸುಡಬಾರದು ಅವುಗಳನ್ನು ಸ್ವಚ್ಛ ವಾಹಿನಿ ವಾಹನಕ್ಕೆ ನೀಡಬೇಕು, ಕಸ,ಪ್ಲಾಸ್ಟಿಕ್‌ಗಳನ್ನು ಸುಟ್ಟರೆ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಕರಾವಳಿ ಪ್ರಾಧಿಕಾರದ ಅನುದಾನ ಬಂದಿಲ್ಲ…?!
ಚನಿಲ ತಿಮ್ಮಪ್ಪ ಶೆಟ್ಟಿಯವರು ಕರಾವಳಿ ಪ್ರಾಧಿಕಾರದ ಅಧ್ಕಕ್ಷರಾಗಿರುವ ಸಮಯದಲ್ಲಿ ಪಂಚಾಯತ್ ಕಟ್ಟಡದ ಮೇಲಂತಸ್ಥಿನಲ್ಲಿ ಸಭಾ ಭವನ ನಿರ್ಮಾಣಕ್ಕೆ 10 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಿದ್ದರು. ಈ ಅನುದಾನವನ್ನು ಶೀಘ್ರವಾಗಿ ಬಿಡುಗಡೆಗೊಳಿಸಿ ಕೊಡುವಂತೆ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಮನವಿ ಸಲ್ಲಿಸುವುದು ಎಂದು ನಿರ್ಣಯಿಸಲಾಯಿತು. ಈ ಬಗ್ಗೆ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿಯವರು ಸಭೆಯ ಗಮನ ಸೆಳೆದರು.


ನಿರ್ಣಯಗಳಿಗೆ ಬೆಲೆ ಇರಲಿ
ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವಾಗ ಎಲ್ಲಾ ಸದಸ್ಯರ ಒಮ್ಮತದ ಮೇರೆಯೇ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಹೀಗಿರುವಾಗ ಯಾವುದೇ ನಿರ್ಣಯವನ್ನು ಕೈಗೊಳ್ಳುವ ಮುನ್ನ ಅದಕ್ಕೆ ಆಕ್ಷೇಪ ಇದ್ದರೆ ಸಭೆಯಲ್ಲಿಯೇ ತಿಳಿಸಬೇಕು ಅದು ಬಿಟ್ಟು ಎಲ್ಲಾ ಸದಸ್ಯರ ಒಮ್ಮತದ ಮೇರೆಗೆ ಕೈಗೊಂಡ ನಿರ್ಣಯವನ್ನು ಮುಂದಿನ ಸಭೆಯಲ್ಲಿ ಆ ನಿರ್ಣಯ ಕೈಗೊಂಡಿದ್ದು ಸರಿಯಲ್ಲ ಅದಕ್ಕೆ ನಮ್ಮ ಆಕ್ಷೇಪ ಇದೆ ಎಂಬಿತ್ಯಾದಿ ಮಾತುಗಳನ್ನು ಸದಸ್ಯರು ಹೇಳುವುದು ಸರಿಯಲ್ಲ ಎಂಬ ವಿಷಯವನ್ನು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು.


ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಸಾರ್ವಜನಿಕ ಅರ್ಜಿಗಳನ್ನು ಹಾಗೂ ಸರಕಾರದ ಸುತ್ತೋಲೆಗಳನ್ನು ಓದಿ ಹೇಳಿದರು. ಕಾರ್ಯದರ್ಶಿ ಜಯಂತಿಯವರು ನಿರ್ಣಯಗಳನ್ನು ದಾಖಲಿಸಿಕೊಂಡರು. ಸಭೆಯಲ್ಲಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಮಹೇಶ್ ರೈ ಕೇರಿ, ಪ್ರದೀಪ್ ದರ್ಬೆತ್ತಡ್ಕ, ಲತೀಫ್ ಕುಂಬ್ರ, ಸಿರಾಜುದ್ದೀನ್, ಶಾರದಾ ಆಚಾರ್ಯ, ರೇಖಾ ಬಿಜತ್ರೆ, ಸುಂದರಿ ಪರ್ಪುಂಜ, ಚಿತ್ರಾ ಬಿ.ಸಿ, ನಿಮಿತಾ ರೈ, ನಳಿನಾಕ್ಷಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಲೋಕನಾಥ, ಮೋಹನ್ ಸಹಕರಿಸಿದ್ದರು.

ಘನ ವಾಹನಗಳು ಸಂಚರಿಸುತ್ತಿವೆ
ಬಸ್ಸು ಒಂದನ್ನು ಬಿಟ್ಟು ಉಳಿದಂತೆ ಎಲ್ಲಾ ರೀತಿಯ ಘನ ವಾಹನಗಳು ಚೆಲ್ಯಡ್ಕ ಸೇತುವೆ ಮೇಲೆ ಸಂಚರಿಸುತ್ತಿವೆ. ತಳಭಾಗದಿಂದ ಕೇವಲ ಒಂದೂವರೆ ಮೀಟರ್ ಎತ್ತರದಲ್ಲಿ ಸೇತುವೆ ಇದ್ದು ನದಿಯಲ್ಲಿ ನೀರು ಕೂಡ ಬಹಳಷ್ಟು ಕಡಿಮೆ ಇದೆ. ಟಿಪ್ಪರ್‌ಗಳು, 10 ಚಕ್ರ ಲಾರಿಗಳು ಕೂಡ ಸಂಚರಿಸುತ್ತಿವೆ ಹೀಗಿರುವಾಗ ಬಸ್ಸು ಒಂದನ್ನು ಮಾತ್ರ ತಡೆ ಹಿಡಿದಿರುವುದು ಸರಿಯಲ್ಲ ಎಂದು ಮಹೇಶ್ ರೈ ಕೇರೆ ಸಭೆಗೆ ತಿಳಿಸಿದರು.

600 ಕ್ಕೂ ಅಧಿಕ ಮಂದಿಗೆ ತೊಂದರೆ..!
ಚೆಲ್ಯಡ್ಕ ಸೇತುವೆ ಮೇಲೆ ಬಸ್ಸು ಸಂಚಾರ ಇಲ್ಲದೆ ಇರುವುದರಿಂದ ಒಳಮೊಗ್ರು ಗ್ರಾಮದ ಆ ಭಾಗದ ಸುಮಾರು ೬೦೦ ಕ್ಕೂ ಅಧಿಕ ಮಂದಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಹೆಚ್ಚಿನವರು ಪರಿಶಿಷ್ಠ ಜಾತಿ, ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದು ಮಹೇಶ್ ರೈ ಕೇರಿ ಸಭೆಗೆ ತಿಳಿಸಿದರು.

‘ ಚೆಲ್ಯಡ್ಕ ಸೇತುವೆ ಹಾಗೂ ಬಸ್ಸು ಸಂಚಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಹಾಗೆ ಪಂಚಾಯತ್ ಕಟ್ಟಡದ ಅಭಿವೃದ್ಧಿ ಬಗ್ಗೆ ಕರಾವಳಿ ಪ್ರಾಧಿಕಾರದ ಅನುದಾನವನ್ನು ಶೀಘ್ರವೇ ತರಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡುತ್ತೇವೆ. ಸ್ವಚ್ಛತೆ ಹಾಗೂ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಪಂಚಾಯತ್‌ನೊಂದಿಗೆ ಸಹಕರಿಸಬೇಕೆಂದು ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.

LEAVE A REPLY

Please enter your comment!
Please enter your name here