ಪುತ್ತೂರು: ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಬಳಿ ಕೆಎಸ್ ಆರ್ ಟಿ ಸಿ ಬಸ್ ಹಾಗೂ ಸಹೋದರಿಯರಿಬ್ಬರು ಸಂಚರಿಸುತ್ತಿದ್ದ ಸ್ಕೂಟಿ ಮಧ್ಯೆ ಅಪಘಾತ ಸಂಭವಿಸಿ ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿಯೋರ್ವರು ಮೃತಪಟ್ಟು ಸಹೋದರಿ ಗಂಭೀರ ಗಾಯಗೊಂಡಿರುವ ದಾರುಣ ಘಟನೆ ನ.8ರಂದು ಸಂಜೆ ನಡೆದಿದೆ.
ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಕಾಡುತೋಟ ರಾಜೇಶ್ವರಿ ನಾರಾಯಣ ದಂಪತಿಯ ಪುತ್ರಿ, ವಿವೇಕಾನಂದ ಕಾಲೇಜಿನ ಅಂತಿಮ ಬಿ.ಎ.ವಿದ್ಯಾರ್ಥಿನಿಯಾಗಿದ್ದ ರಚನಾ(21ವ.)ಮೃತಪಟ್ಟವರು.ಹಿಂಬದಿ ಸವಾರೆಯಾಗಿದ್ದ ಅವರ ತಂಗಿ ಅನನ್ಯಾ ಅವರ ಕಾಲಿಗೆ ತೀವ್ರ ಗಾಯವಾಗಿದೆ.
ರಚನಾ, ಅನನ್ಯಾ ಸಹೋದರಿಯರು ಸಂಜೆ ಸುಳ್ಯದಿಂದ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿರುವ ವೇಳೆ ಎದುರಿನಿಂದ ಬಂದ ಬಸ್ ಮತ್ತು ಸ್ಕೂಟಿ ಮಧ್ಯೆ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಸ್ಕೂಟಿ ಸವಾರೆ ರಚನಾರವರ ತಲೆಗೆ ತೀವ್ರ ಗಾಯಗಳಾಗಿತ್ತು. ಅವರನ್ನು ತಕ್ಷಣವೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತಾದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ಸಹಸವಾರೆಯಾಗಿದ್ದ ಅನನ್ಯ ಅವರ ಬಲ ಕಾಲಿಗೆ ತೀವ್ರ ಗಾಯಗಳಾಗಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಹರುನಗರದ ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಬಿ.ಎ.ಇಂಗ್ಲೀಷ್ ಮೇಜರ್ ವಿದ್ಯಾರ್ಥಿನಿಯಾಗಿದ್ದ ಪ್ರತಿಭಾವಂತೆ ರಚನಾರವರು ಪ್ರತಿದಿನ ಉಬರಡ್ಕದ ಕಾಡುತೋಟ ಮನೆಯಿಂದ ಸುಳ್ಯ ತನಕ ಸ್ಕೂಟಿಯಲ್ಲಿ ಬಂದು ಸುಳ್ಯ ಬಸ್ ನಿಲ್ದಾಣದ ಬಳಿ ಸ್ಕೂಟಿ ನಿಲ್ಲಿಸಿ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ನಲ್ಲಿ ಪುತ್ತೂರು ಕಾಲೇಜಿಗೆ ಬರುತ್ತಿದ್ದರು.ಸಂಜೆ ಕಾಲೇಜು ಮುಗಿಸಿ ಪುತ್ತೂರಿನಿಂದ ಸುಳ್ಯ ತನಕ ಬಸ್ನಲ್ಲಿ ತೆರಳಿ ಅಲ್ಲಿಂದ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು.ನ.8ರಂದು ರಚನಾ ಅವರು ಸುಳ್ಯ ಜೂನಿಯರ್ ಕಾಲೇಜ್ ವಿದ್ಯಾರ್ಥಿನಿಯಾಗಿರುವ ತಂಗಿ ಅನನ್ಯ ಅವರನ್ನು ಮನೆಗೆ ಕರೆದೊಯ್ಯಲೆಂದು ಸುಳ್ಯಕ್ಕೆ ಬಂದಿದ್ದರು. ಅನನ್ಯರವರು ಸಂಜೆ ತರಗತಿ ಮುಗಿದ ಬಳಿಕ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಅಭ್ಯಾಸಕ್ಕೆಂದು ನಿಂತಿದ್ದರು. ಆಕೆಯನ್ನು ಮನೆಗೆ ಕರೆದೊಯ್ಯಲೆಂದು ಹೋಗಿದ್ದ ರಚನಾ ತಂಗಿಯೊಂದಿಗೆ ವಾಹಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಪ್ರತಿಭಾನ್ವಿತೆಯಾಗಿದ್ದ ರಚನಾ:
ಪಿಯುಸಿ ತನಕ ಸುಳ್ಯದಲ್ಲಿ ವಿದ್ಯಾಭ್ಯಾಸ ಪಡೆದಿದ್ದ ರಚನಾರವರು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಅಂತಿಮ ಬಿ.ಎ.ಇಂಗ್ಲಿಷ್ ಮೇಜರ್ ವಿದ್ಯಾರ್ಥಿನಿಯಾಗಿದ್ದ ಇವರು ಶೈಕ್ಷಣಿಕವಾಗಿ ಮಾತ್ರವಲ್ಲದೆ ಕ್ರೀಡೆಯಲ್ಲೂ ಮುಂದಿದ್ದರು. ಜೊತೆಗೆ ಯಕ್ಷಗಾನ ಕಲಾವಿದೆಯೂ ಆಗಿದ್ದರು.
ಬುಲೆಟ್ ಚಲಾಯಿಸುತ್ತಿದ್ದರು:
ರಚನಾ ಅವರು ದ್ವಿಚಕ್ರ ವಾಹನ ಚಾಲನೆಯಲ್ಲಿ ಪರಿಣಿತರಾಗಿದ್ದರು.ಬುಲೆಟ್ನ್ನು ಕೂಡ ಈಣೆ ಚಲಾಯಿಸುತ್ತಿದ್ದರು.ಮೃತರು ತಂದೆ ನಾರಾಯಣ, ತಾಯಿ ರಾಜೇಶ್ವರಿ, ಸಹೋದರಿ ಅನನ್ಯರವರನ್ನು ಆಗಲಿದ್ದಾರೆ.
ಇಂದು ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆ ನ.9ರಂದು ಕಾಡುತೋಟ ಮನೆಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು:
ಶಿಕ್ಷಣ, ಕ್ರೀಡೆ, ಹೀಗೆ ಪ್ರತಿಭಾವಂತೆಯಾಗಿದ್ದ ರಚನಾ ಕೆಲ ದಿನಗಳ ಹಿಂದೆಯಷ್ಟೆ ನಡೆದಿದ್ದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದಿದ್ದು, ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಆದರೆ ಕನಸು ನನಸಾಗುವ ಮೊದಲೇ ವಿಧಿಲೀಲೆಗೆ ಬಲಿಯಾಗಿ ಕುಟುಂಬ ದು:ಖ ಸಾಗರದಲ್ಲಿ ಮುಳುಗುವಂತಾಗಿದೆ.