ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಉಪಯೋಗಕ್ಕಾಗಿ ಖರೀದಿಸಿದ್ದ ಸ್ಥಿರಾಸ್ತಿಗಳನ್ನು ಖಾಸಗಿ ಟ್ರಸ್ಟ್‌ಗಳಿಗೆ ಅಕ್ರಮವಾಗಿ ಹಸ್ತಾಂತರ ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕೆಂದು ಕೋರಿ ನ.11ರಿಂದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ಎದುರು ಬೆಳಗ್ಗೆ 9ಗಂಟೆಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಹಿಂದೂ ಬಾಂಧವರು ಇದನ್ನು ಬೆಂಬಲಿಸಬೇಕೆಂದು ಕೊಕ್ಕಡದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೊಕ್ಕಡ ತಿಳಿಸಿದರು.
ಈ ಬಗ್ಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೌತಡ್ಕ ಎಂಬಲ್ಲಿ ಅನಾದಿಕಾಲದಿಂದಲೂ ಬಯಲು ಗಣಪತಿ ದೇವಾಲಯವಿದ್ದು, ಇತ್ತೀಚೆಗೆ ದೇಶ ವಿದೇಶಗಳಿಂದಲೂ ಇಲ್ಲಿಗೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. 1995ರಲ್ಲಿ ಈ ದೇವಾಲಯವು ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಟ್ಟಿದ್ದು, ಈ ದೇವಾಲಯವು ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಎ ಗ್ರೇಡ್ ದೇವಾಲಯವಾಗಿದೆ. 2004ರ ಜು.31ರಂದು ನಡೆದ ಸಭೆಯ ನಿರ್ಣಯದಂತೆ ದೇವಾಲಯದ ಎದುರು ಬಲಭಾಗದಲ್ಲಿ ಸರ್ವೇ ನಂ. 215/2ರಲ್ಲಿದ್ದ 3.46 ಎಕ್ರೆ ಜಮೀನನ್ನು ದೇವಾಲಯಕ್ಕಾಗಿ ಖರೀದಿಸುವ ತೀರ್ಮಾನ ಮಾಡಿತ್ತು. ಆದರೆ ದೇವಸ್ಥಾನದ ಖಜಾನೆಯಲ್ಲಿ ಜಮೀನು ಖರೀದಿಗೆ ಸಾಕಷ್ಟು ಹಣ ಇಲ್ಲದ ಕಾರಣ, ಈ ಜಮೀನನ್ನು ಮೂರು ವಿಭಾಗಗಳನ್ನಾಗಿ ಮಾಡಿ ಆಗ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ವಾಸುದೇವ ಶಬರಾಯ, ಸದಸ್ಯರಾದ ರಾಘವ ಕೆ., ವಿಶ್ವನಾಥ ಕೆ. ಎಂಬವರ ಹೆಸರಿನಲ್ಲಿ ಅವರ ಸ್ವಂತ ಹಕ್ಕಿನ ಸ್ಥಿರಾಸ್ಥಿಗಳನ್ನು ಅಡವಿರಿಸಿ ಬ್ಯಾಂಕ್ ಸಾಲ ಪಡೆದು ಈ ಜಮೀನನ್ನು ಪ್ರತ್ಯೇಕ ಪ್ರತ್ಯೇಕವಾಗಿ ಖರೀದಿಸಲಾಯಿತು. ಜಮೀನು ಖರೀದಿಗೆ ಈ ಮೂವರು ಮಾಡಿದ ಬ್ಯಾಂಕ್ ಸಾಲವನ್ನು ದೇವಾಲಯದ ಭಕ್ತರ ದೇಣಿಗೆಯ ಹಣದಲ್ಲಿ ಸಂಪೂರ್ಣ ಮರುಪಾವತಿ ಮಾಡಲಾಗಿದೆ. ಈ ಜಮೀನನ್ನು ದೇವಸ್ಥಾನದ ಹೆಸರಿನಲ್ಲಿ ದಾನ ಪತ್ರದ ಮೂಲಕ ನೋಂದಾವಣೆ ಮಾಡಲು ಬೆಳ್ತಂಗಡಿ ಉಪನೋಂದಣಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿದಾಗ ಕೃಷಿ ಭೂಮಿಯನ್ನು ದೇವಸ್ಥಾನದ ಹೆಸರಿನಲ್ಲಿ ನೋಂದಣಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿದು ಬಂತು. ಆದ್ದರಿಂದ ಅಂದಿನ ಆಡಳಿತ ಸಮಿತಿ ಮತ್ತು ಇತರರು ಸೇರಿಕೊಂಡು 7.07.2009ರಂದು ಖಾಸಗಿಯಾಗಿ ‘ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ’ ಎಂಬ ಹೆಸರಿನಲ್ಲಿ ಟ್ರಸ್ಟ್ ರಚಿಸಿ, ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡರು. ಅದೇ ದಿನ ವಾಸುದೇವ ಶಬರಾಯರ ಹೆಸರಿನಲ್ಲಿ ಸೌತಡ್ಕ ದೇವಸ್ಥಾನಕ್ಕಾಗಿ ಖರೀದಿಸಲಾಗಿದ್ದ ಸ್ಥಿರಾಸ್ತಿಯನ್ನು ಅವರ ಮರಣಾ ನಂತರ ಈ ಖಾಸಗಿ ಟ್ರಸ್ಟ್ಗೆ ಸೇರತಕ್ಕದ್ದು ಎಂದು ಅವರು ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೋಂದಾವಣೆ ವೀಲುನಾಮೆ ಮಾಡಿದ್ದರು. ಅದರಂತೆ ಅವರ ಮರಣಾನಂತರ ಅದು ಖಾಸಗಿ ಟ್ರಸ್ಟ್ನ ಪಾಲಾಯಿತು ಎಂದು ಅವರು ವಿವರಿಸಿದರು.
2009- 10ರಿಂದ ದೇವಾಲಯದ ವ್ಯವಸ್ಥಾಪನಾ ಸಮಿತಿಯು ಬದಲಾಗಿದ್ದು, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ)ನ ಅಧ್ಯಕ್ಷರಾಗಿದ್ದವರೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭ ಈ ಟ್ರಸ್ಟ್ ಅನ್ನು ದೇವಾಲಯದಿಂದ ಬೇರ್ಪಡಿಸಿ ಪ್ರತ್ಯೇಕ ಖಾಸಗಿ ಸಂಸ್ಥೆಯನ್ನಾಗಿ ಅಧಿಕೃತಗೊಳಿಸಲಾಯಿತು. ಇದರಿಂದ ಟ್ರಸ್ಟ್ ಮೂಲಕ ದೇವಾಲಯಕ್ಕೆ ಬರುತ್ತಿದ್ದ ಆದಾಯಕ್ಕೆ ಕೂಡಾ ದೊಡ್ಡ ಹೊಡೆತ ಬಿದ್ದಿತ್ತು. ಆದ ಕಾರಣ 2010ರಿಂದ ಇಂದಿನವರೆಗೆ ಈ ಟ್ರಸ್ಟ್ನ ಹೆಸರಿಗೆ ನೀಡಿದ ಜಮೀನಿನಲ್ಲಿ ದೇವಾಲಯವೇ ಸ್ವಂತ ಖರ್ಚಿನ ಮೂಲಕ ನಿರ್ಮಿಸಿದ್ದ ವಾಣಿಜ್ಯ ಕಟ್ಟಡಗಳ ಬಾಡಿಗೆ, ರಬ್ಬರ್ ಕೃಷಿಯ ಉತ್ಪತ್ತಿ, ವಸತಿಗೃಹದ ಬಾಡಿಗೆ ಎಲ್ಲವೂ ಟ್ರಸ್ಟ್ ಖಾತೆಯ ಪಾಲಾಯಿತು. ಇದರಿಂದ ಸೌತಡ್ಕ ದೇವಾಲಯಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವುಂಟಾಯಿತು. ಇನ್ನು ಉಳಿದ 2.23 ಎಕರೆ ಸ್ಥಿರಾಸ್ಥಿಗಳನ್ನು ಕೆ. ರಾಘವ ಮತ್ತು ವಿಶ್ವನಾಥ ಕೆ. ಅವರು 2017ರಲ್ಲಿ ದೇವಸ್ಥಾನಕ್ಕೆ ಅಂದಿನ ವ್ಯವಸ್ಥಾಪನಾ ಸಮಿತಿಯವರ ಮುಖಾಂತರ ನೋಂದಾಯಿತವಲ್ಲದ ದಾನ ಶಾಸನ ಬರೆದುಕೊಟ್ಟಿದ್ದಾರೆ. ಆ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶಬರಾಯ ಇದ್ದರು. ಸದ್ರಿ ದಾನವನ್ನು ಸ್ವೀಕರಿಸಲು ಅನುಮತಿ ಕೋರಿ ಅಂದಿನ ವ್ಯವಸ್ಥಾಪನಾ ಸಮಿತಿಯವರು ಕಂದಾಯ ಇಲಾಖೆ (ಮುಜರಾಯಿ)ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದು, ಅವರಿಂದ ಅನುಮತಿ ಬಾರದೇ ಇರುವುದರಿಂದ ಸದ್ರಿ ದಾನ ಶಾಸನವು ನೋಂದಾವಣೆಯಾಗದೇ ಖಾಸಗಿ ದಾನ ಶಾಸನವಾಗಿ ಉಳಿದಿತ್ತು. ಇದೀಗ ಅವರಲ್ಲಿ ರಾಘವ ಕೆ. ಎಂಬವರು ತನ್ನ ಹೆಸರಿನಲ್ಲಿದ್ದ ದೇವಸ್ಥಾನದ ಉಪಯೋಗಕ್ಕೆಂದು ಭಕ್ತರ ಸಹಾಯದೊಂದಿಗೆ ಖರೀದಿಸಿದ್ದ, 1.23 ಎಕ್ರೆ ಸ್ಥಿರಾಸ್ತಿಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇವರಿಗೆ ನೋಂದಾಯಿತ ದಾನ ಶಾಸನದ ಮೂಲಕ ವರ್ಗಾಯಿಸಿದ್ದಾರೆ. ಆದರೆ ಅವರಲ್ಲಿ ವಿಶ್ವನಾಥ ಕೆ. ಎಂಬವರು ತನ್ನ ಹೆಸರಿನಲ್ಲಿ ದೇವಸ್ಥಾನದ ಉಪಯೋಗಕ್ಕಾಗಿ ಭಕ್ತರ ಸಹಾಯದೊಂದಿಗೆ ಖರೀದಿಸಿರುವ ಸ್ಥಿರಾಸ್ಥಿಯನ್ನು ನೋಂದಾಯಿತ ದಾನ ಶಾಸನದ ಮೂಲಕ ದೇವಾಲಯಕ್ಕೆ ವರ್ಗಾಯಿಸಲು ಈಗಲೂ ಬದ್ಧರಾಗಿರುವುದಾಗಿ ನಮಗೆ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಆದ್ದರಿಂದ ಈ ಎಲ್ಲಾ ಪ್ರಕರಣಗಳನ್ನು ಸಮಗ್ರವಾದ ತನಿಖೆ ನಡೆಸಿ ದುರುದ್ದೇಶದಿಂದ ಅಕ್ರಮವಾಗಿ ರಚಿಸಿಕೊಂಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅನ್ನು ರದ್ದು ಪಡಿಸಿ, ಅದರ ಎಲ್ಲಾ ಆಸ್ತಿಯನ್ನು ಅದರ ನಿಜವಾದ ಮಾಲಕರಾದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು. ಟ್ರಸ್ಟ್ ಆದ ಬಳಿಕದಿಂದ ಇಂದಿನವರೆಗೆ ಆದ ಎಲ್ಲಾ ಆದಾಯಗಳ ಖರ್ಚುವೆಚ್ಚಗಳ ತನಿಖೆ ನಡೆಸಿ ಎಲ್ಲಾ ಆದಾಯಗಳನ್ನು ದೇವಾಲಯದ ಖಜಾನೆಗೆ ತುಂಬಿಸಲು ಆದೇಶಿಸಬೇಕು. ದೇವಾಲಯಕ್ಕೆಂದು ಭಕ್ತರ ದೇಣಿಗೆಯಿಂದ ಖರೀದಿಸಲಾದ ಒಟ್ಟು 3.46 ಎಕ್ರೆ ಸ್ಥಿರಾಸ್ತಿಯನ್ನು ದೇವಸ್ಥಾನದ ಹೆಸರಿಗೆ ಬರೆಸಿಕೊಳ್ಳಲು ಸೂಕ್ತ ಆದೇಶ ನೀಡಬೇಕೆಂದು ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಹಿಂದೂ ಬಾಂಧವರು, ಶ್ರೀ ಕ್ಷೇತ್ರದ ಭಕ್ತರು ಇದರಲ್ಲಿ ಭಾಗವಹಿಸಿ ದೇವರ ಪರವಾದ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ದೇವಸ್ಥಾನಕ್ಕೆಂದು ದೇವಾಲಯದ ಭಕ್ತರ ದೇಣಿಗೆಯಲ್ಲಿ ಖರೀದಿಸಲಾದ ಜಮೀನು ಕಾನೂನು ಹಾಗೂ ತಾಂತ್ರಿಕ ಸಮಸ್ಯೆಯಿಂದ ದೇವಾಲಯದ ಹೆಸರಿಗೆ ವರ್ಗಾವಣೆಯಾಗದೆ ಹಾಗೆ ಉಳಿದಿತ್ತು. ಆದರೆ ಅದೀಗ ಖಾಸಗಿ ಟ್ರಸ್ಟ್‌ನ ಕೈವಶವಾಗಿದೆ. ದೇವಾಲಯದ ಈ ಆಸ್ತಿಯು ದೇವಾಲಯಕ್ಕೆ ಸೇರಬೇಕಾಗಿದೆ. ಇದು ನಮ್ಮ ಸ್ವಂತಕ್ಕಾಗಿ ಮಾಡುವ ಹೋರಾಟ ಅಲ್ಲ. ದೇವರಿಗಾಗಿ ಮಾಡುವ ಹೋರಾಟ. ಆದ್ದರಿಂದ ನಾವೆಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಭೂ ನ್ಯಾಯ ಮಂಡಳಿ ಸದಸ್ಯ ನಿರಂಜನ ರೈ ಮಠಂತಬೆಟ್ಟು, ಕಾರ್ಮಿಕ ಮುಖಂಡ ಬಿ.ಎಂ. ಭಟ್, ರೈತ ಮುಖಂಡ ರೂಪೇಶ್ ರೈ ಅಲಿಮಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ರಮ್ಯ ರಾಜಾರಾಮ್, ವೆಂಕಪ್ಪ ಪೂಜಾರಿ ಮರುವೇಲು, ಪ್ರಮುಖರಾದ ವಿಶ್ವನಾಥ ಶೆಟ್ಟಿ ಶ್ರೀಮಾತ, ವಿಕ್ರಂ ಶೆಟ್ಟಿ ಕೋಡಿಂಬಾಡಿ, ಜನಾರ್ದನ ಪೂಜಾರಿ, ಮಿತ್ರದಾಸ ರೈ ಮತ್ತಿತರರಿದ್ದರು.