ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವಿದ್ಯಾರ್ಥಿಗಳಿಂದ ವಿಶೇಷ ಆಚರಣೆ

0

ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಇದರ ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್‌ ಅವರ ಜನ್ಮದಿನ ಪ್ರಯುಕ್ತ ಶಿಷ್ಯ ವೃಂದದಿಂದ ಹಿಮ್ಮೇಳ ಸಹಿತ ನೃತ್ಯ ಪ್ರದರ್ಶನವನ್ನು ನೆಲ್ಲಿಕಟ್ಟೆಯ ಬರೆಕರೆ ವೆಂಕಟರಮಣ ಸಭಾಭವನದಲ್ಲಿ ನ.9ರಂದು ಏರ್ಪಡಿಸಲಾಯಿತು.

ನೃತ್ಯ ತರಗತಿಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ನೃತ್ಯಗುರುವನ್ನು ಪುಷ್ಪಾರ್ಚನೆ ಮೂಲಕ ಬರಮಾಡಿಕೊಂಡಿದ್ದಾರೆ. ಬಳಿಕ ವೇದಿಕೆಗೆ ಆಹ್ವಾನಿಸಿ ಗುರುಗಳಿಂದಲೇ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಹಿಮ್ಮೇಳ ಸಹಿತ ನೃತ್ಯಾರ್ಚನೆ ನೆರವೇರಿಸಿದ್ದಾರೆ. ಪುಷ್ಪಾಂಜಲಿಯಿಂದ ನೃತ್ಯ ಪ್ರದರ್ಶನ ಆರಂಭಿಸಿದ್ದಾರೆ. ಬಳಿಕ ಗಣೇಶ ಸ್ತುತಿ, ಸ್ವರ ಜತಿ, ಕೌತ್ವಂ, ವರ್ಣ, ಶಿವಸ್ತುತಿ ಕೃತಿ, ದೇವರನಾಮ, ತಿಲ್ಲಾನ ಹಾಗೂ ಮಂಗಳಂ ಅಭಿನಯಿಸಿದ್ದಾರೆ. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿಯರಾದ ಗೌತಮಿ ಅನುದೀಪ್‌, ಕೃತಿಕಾ ಉದಯಶಂಕರ್‌, ಶ್ರದ್ಧಾ ಬಿ., ಶ್ರೇಯಾ ಬಿ ಹಾಗೂ ಸಿಂಚನ ಎಸ್‌.ಭಟ್‌, ಪೃಥ್ವಿಶ್ರೀ ಮತ್ತು ತೇಜಸ್ವಿರಾಜ್‌ ಸಹಕರಿಸಿದ್ದಾರೆ. ಶೃತಿರಂಜಿನಿ ಮತ್ತು ಶ್ರೀಮಾ ಬಿ. ಹಾಡುಗಾರಿಕೆ, ವಯಲಿನ್‌ನಲ್ಲಿ ಅಂಕಿತಾ ಬಡೆಕ್ಕಿಲ ಹಾಗೂ ಮೃದಂಗದಲ್ಲಿ ವಿದ್ವಾನ್‌ ಬಾಲಕೃಷ್ಣ ಭಟ್‌ ಹೊಸಮನೆ ಸಾಥ್‌ ನೀಡಿದ್ದಾರೆ. ನಟುವಾಂಗ ನಡೆಸಿದ ವಿದ್ಯಾರ್ಥಿಗಳಲ್ಲದೆ, ತಂಡದಲ್ಲಿ ಶ್ರದ್ಧಾ, ಶ್ರಾವ್ಯ, ತನ್ವಿ, ಹಂಸಾನಂದಿನಿ, ಭಾರತಿ ಕಡಬ, ವಿದ್ಯಾಲಕ್ಷ್ಮಿ, ಧನ್ಯಾ, ಫಲ್ಗುಣಿ ಮತ್ತಿತರರೂ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.


ಗುರುವಿಗೆ ವಂದನೆ: ನೃತ್ಯಗುರುಗಳ ಹುಟ್ಟಿದ ದಿನವನ್ನು ಸದಾ ನೆನಪಿನಲ್ಲಿ ಇರಿಸುವ ಸಲುವಾಗಿ ವಿದುಷಿ ಶಾಲಿನಿ ಆತ್ಮಭೂಷಣ್‌ ಅವರನ್ನು ವೇದಿಕೆಯಲ್ಲಿ ಕುಳ್ಳಿರಿಸಿದ ವಿದ್ಯಾರ್ಥಿಗಳು ಪಾದ
ತೊಳೆದು, ಪುಷ್ಪಾರ್ಚನೆ ನೆರವೇರಿಸಿ, ಶಾಲು ಹೊದಿಸಿ, ಹೂವು ಮುಡಿಸಿ, ಆರತಿ ಬೆಳಗಿ ಸ್ಮರಣಿಕೆ ನೀಡಿ ಸಾಷ್ಟಾಂಗ ಪ್ರಮಾಣ ಸಲ್ಲಿಸಿ ಗುರು ವಂದನೆ ನೆರವೇರಿಸಿದರು.
ಬೊಳುವಾರಿನ ಭಾವನಾ ಕಲಾ ಆರ್ಟ್ಸ್‌ನ ವಿಘ್ನೇಶ್‌ ವಿಶ್ವಕರ್ಮ ಪ್ರಸಾಧನ ನೆರವೇರಿಸಿದರು. ಶ್ರೀದೇವಿ ಕೋಟೆ ನಿರೂಪಿಸಿದರು.

LEAVE A REPLY

Please enter your comment!
Please enter your name here