ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ, ಶ್ರೀ ರಾಮಕುಂಜೇಶ್ವರ ವಿದ್ಯಾರ್ಥಿ ನಿಲಯ ಮತ್ತು ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಡನ್ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ನ.9ರಂದು ನಡೆಯಿತು.
ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಐ.ವಿ.ಗ್ರೇಟಾರವರು ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಯು ಅಗತ್ಯ. ಕ್ರೀಡೆಯು ಮಕ್ಕಳ ಆಲಸ್ಯವನ್ನು ಹೊರಗಟ್ಟಿ ಕ್ರಿಯಾಶೀಲರನ್ನಾಗಿ ಮಾಡುವುದರ ಜೊತೆಗೆ ಮನೋರಂಜನೆ, ಸಂತೋಷದಿಂದ ಕೂಡಿದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಉತ್ತಮ ಶಕ್ತಿ ಸಾಮರ್ಥ್ಯ ಇದೆ. ಸೂಕ್ತ ತರಬೇತಿ ಮಾರ್ಗದರ್ಶನ ಪಡೆದುಕೊಂಡು, ಇನ್ನೊಬ್ಬರ ಆಶ್ರಯವಿಲ್ಲದೆ ಬೆಳೆಯಬೇಕೆಂಬ ಉದ್ದೇಶವನ್ನಿಟ್ಟುಕೊಂಡು ರಾಜ್ಯ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಜೊತೆ ಕಾರ್ಯದರ್ಶಿ ಪುರಂದರ, ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಉಪಾಧ್ಯಕ್ಷ ಕೆ.ಎ. ಸುಲೈಮಾನ್, ಆಡಳಿತ ಅಧಿಕಾರಿ ಆನಂದ ಎಸ್.ಟಿ., ನಿಲಯ ವ್ಯವಸ್ಥಾಪಕ ರಮೇಶ್ ರೈ ಉಪಸ್ಥಿತರಿದ್ದರು. ಶ್ರೀ ರಾಮಕಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್ ಸ್ವಾಗತಿಸಿ, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಗಾಯತ್ರಿ ಯು.ಎನ್.ವಂದಿಸಿದರು. ಸಹ ಶಿಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರ ಮಾರ್ಗದರ್ಶನದಲ್ಲಿ ಕ್ರೀಡಾಕೂಟ ನಡೆಯಿತು. ಶಿಕ್ಷಕ ಶಿಕ್ಷಕೇತರ ವೃಂದದವರು ಸಹಕರಿಸಿದರು. ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಗೂ ವಿವಿಧ ಕ್ರೀಡಾಸ್ಪರ್ಧೆಗಳನ್ನು ಏರ್ಪಡಿಸಲಾಯಿತು.