ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ಮನೆಯನ್ನು ಕಡಬ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ನ.13ರಂದು ಬೆಳ್ಳಂಬೆಳಿಗ್ಗೆ ನೆಲಸಮಗೊಳಿಸಿದ ಪರಿಣಾಮ ಮನೆಯಲ್ಲಿ ವಾಸ್ತವ್ಯವಿದ್ದ ವೃದ್ಧ ದಂಪತಿ ಮುತ್ತುಸ್ವಾಮಿ ಹಾಗೂ ರಾಧಮ್ಮ ಬೀದಿಯಲ್ಲೇ ಕಾಲ ಕಳೆಯುವಂತಾಗಿದೆ.
ಮೂಲತ: ಚಿತ್ರದುರ್ಗ ನಿವಾಸಿಯಾಗಿರುವ ಮುತ್ತುಸ್ವಾಮಿಯವರು ಕೂಲಿ ಕೆಲಸಕ್ಕಾಗಿ ಬಂದವರು ಆರು ವರ್ಷದ ಹಿಂದೆ ಕೊಕ್ಕಡ-ಧರ್ಮಸ್ಥಳ ರಸ್ತೆಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ರಸ್ತೆ ಬದಿ ಸರ್ವೆ ನಂ.123/1ರಲ್ಲಿನ ಸರಕಾರಿ ಜಾಗದಲ್ಲಿ ಕಲ್ಲಿನ ಗೋಡೆ ಹಾಗೂ ಸಿಮೆಂಟ್ ಶೀಟ್‌ನ ಸಣ್ಣ ಮನೆ ನಿರ್ಮಿಸಿ ಪತ್ನಿ ರಾಧಮ್ಮ ಜೊತೆ ವಾಸ್ತವ್ಯವಿದ್ದರು. ಅಂದಾಜು 20 ಸೆಂಟ್ಸ್ ಜಾಗ ಇದ್ದು ಮುತ್ತುಸ್ವಾಮಿ ಅವರು ಈ ಸರಕಾರಿ ಜಾಗದಲ್ಲಿ ಬಾಳೆ, ರಬ್ಬರ್ ಕೃಷಿ ಮಾಡಿದ್ದರು. ಹೈನುಗಾರಿಕೆಯೊಂದಿಗೆ ಈ ಜಾಗದ ಸಮೀಪವೇ ಮುತ್ತುಸ್ವಾಮಿ ಸಣ್ಣ ಅಂಗಡಿಯೊಂದನ್ನು ಇಟ್ಟು ವ್ಯಾಪರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಮಧ್ಯೆ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಬೆಳ್ತಂಗಡಿ ತಾಲೂಕಿನ ಅಶೋಕ ಆಚಾರ್ಯ ಎಂಬವರು ಹೈಕೋರ‍್ಟ್‌ನಲ್ಲಿ ದಾವೆ ಹೂಡಿದ್ದು ಮನೆ ತೆರವಿಗೆ ಆದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನ.13ರಂದು ಬೆಳ್ಳಂಬೆಳಿಗ್ಗೆ ಮನೆ ನೆಲಸಮಗೊಳಿಸಲಾಗಿದೆ.
ಬೀದಿಯಲ್ಲೇ ದಿನ ಕಳೆದ ದಂಪತಿ:
ಮನೆ ತೆರವುಗೊಂಡಿರುವುದರಿಂದ ವಾಸ್ತವ್ಯಕ್ಕೆ ಬೇರೆ ಮನೆ ಇಲ್ಲದೇ ಇರುವುದರಿಂದ ರಾಧಮ್ಮ-ಮುತ್ತುಸ್ವಾಮಿ ದಂಪತಿ ನ.13ರ ರಾತ್ರಿ ಬೀದಿಯಲ್ಲೇ ಕಾಲ ಕಳೆದಿದ್ದಾರೆ. ತಮ್ಮ ಅಂಗಡಿ ಸಮೀಪವೇ ಟೆಂಟ್ ಹಾಕಿ ಅದರಲ್ಲೇ ರಾತ್ರಿ ಕಳೆದಿದ್ದಾರೆ. ಅಲ್ಲದೇ ಅಣ್ಣ, ಸಾಂಬಾರು ತಯಾರಿಸಿ ನಾವು ಊಟ ಮಾಡುವುದರೊಂದಿಗೆ ಸ್ಥಳಕ್ಕೆ ಬಂದವರಿಗೂ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ. ಮನೆ ತೆರವುಗೊಳಿಸಿ ಕೆಆರ್‌ಎಸ್ ಪಕ್ಷದವರು ನ.13ರಂದೇ ಪ್ರತಿಭಟನೆ ನಡೆಸಿದ್ದು ನ.14ರಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದರು. ರಸ್ತೆ ಬದಿಯೇ ಅನ್ನ, ಸಾಂಬಾರು ಮಾಡಿದ ಮುತ್ತುಸ್ವಾಮಿ ದಂಪತಿ ಪ್ರತಿಭಟನೆಯಲ್ಲಿದ್ದವರಿಗೆ, ಸ್ಥಳಕ್ಕೆ ಬಂದವರಿಗೂ ನೀಡಿದ್ದಾರೆ. ನ.14ರಂದು ಸಂಜೆ ಭಾರೀ ಮಳೆಯಾಗಿದ್ದು ವಾಸ್ತವ್ಯದ ಜೊತೆಗೆ ತಮ್ಮ ಬಟ್ಟೆ ಹಾಗೂ ಇತರೇ ಸಾಮಾಗ್ರಿಗಳನ್ನು ಜೋಡಿಸಿಡಲು ಸೂಕ್ತ ಜಾಗವಿಲ್ಲದೆ ವೃದ್ಧ ದಂಪತಿ ಕಂಗಲಾಗಿದ್ದಾರೆ. ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಅವರು ಸ್ಥಳದಲ್ಲೇ ಇದ್ದು ವೃದ್ಧ ದಂಪತಿಗೆ ಧೈರ್ಯ ತುಂಬಿದ್ದಾರೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸೊತ್ತು:
ಮುತ್ತುಸ್ವಾಮಿ ಅವರ ಮನೆಯ ಸೊತ್ತುಗಳು ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ. ಅಂಗಳದ ಒಂದು ಕಡೆ ಮನೆಯೊಳಗಿದ್ದ ಪರಿಕರಗಳನ್ನು ಜೋಡಿಸಿಟ್ಟಿದ್ದಾರೆ. ಮತ್ತೊಂದು ಕಡೆ ಸೋಫಾ, ಹಾಸಿಗೆ, ಟೇಬಲ್ ಎಲ್ಲವನ್ನೂ ಅಂಗಳದಲ್ಲಿ ಇಡಲಾಗಿದೆ. ನ.14ರಂದು ಸಂಜೆ ಭಾರೀ ಮಳೆಯಾಗಿರುವುದರಿಂದ ಸಾಮಾಗ್ರಿಗಳೆಲ್ಲವೂ ಒದ್ದೆಯಾಗಿವೆ. ಮನೆಯನ್ನು ನೆಲಸಮಗೊಳಿಸಿ ಹೋಗಿರುವ ಅಧಿಕಾರಿಗಳು ಮುತ್ತುಸ್ವಾಮಿ ದಂಪತಿಗೆ ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದರಿಂದ ಈ ದಂಪತಿ ಬೀದಿಯಲ್ಲಿ ಕಾಲ ಕಳೆಯುವಂತಾಗಿದೆ.
ನ.20ರಂದು ತಾಲೂಕು ಕಚೇರಿಗೆ ಮುತ್ತಿಗೆ:
ಮುತ್ತುಸ್ವಾಮಿ-ರಾಧಮ್ಮ ದಂಪತಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಿ ಸಮಾನ ಮನಸ್ಕರು ಸೇರಿಕೊಂಡು ನ.20ರಂದು ಕಡಬ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ. ಮನೆ ನೆಲಸಮಗೊಳಿಸಿರುವ ಅಧಿಕಾರಿಗಳೇ ಈ ದಂಪತಿಗೆ ಮನೆ ನಿರ್ಮಿಸಿಕೊಡಬೇಕು. ಮನೆ ತೆರವುಗೊಳಿಸುವ ಸಂಬಂಧ ಹೈಕೋರ‍್ಟ್ ನೀಡಿರುವ ಆದೇಶದ ಪ್ರತಿಯನ್ನೂ ಅಧಿಕಾರಿಗಳು ನೀಡಬೇಕು.
-ಜಯನ್ ಟಿ..
ರಾಜ್ಯಾಧ್ಯಕ್ಷರು ನೀತಿ ತಂಡ