MRPL ಸಂಸ್ಥೆಯ ನೆರವು ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸಿರುವುದು ಅತ್ಯಂತ ಸಂತೋಷ,ಅಭಿಮಾನದ ವಿಚಾರ ; ಅಶೋಕ್ ರೈ
ಪುತ್ತೂರು: ಎಂ ಆರ್ ಪಿ ಎಲ್ ಸಂಸ್ಥೆಯಿಂದ ನಿರಂತರ ಸಮಾಜಮುಖಿ ಕೆಲಸ ನಡೆಯುತ್ತಿದೆ, ಎಲ್ಲಾ ಕ್ಷೇತ್ರಗಳಿಗೂ ಈ ಸಂಸ್ಥೆಯ ನೆರವು ವ್ಯಾಪಿಸಿರುವುದು ಅತ್ಯಂತ ಸಂತೋಷ ಹಾಗೂ ಅಭಿಮಾನದ ವಿಚಾರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೇಪು ಸರಕಾರಿ ಹಿ ಪ್ರಾ ಶಾಲೆಯಲ್ಲಿ ಎಂ.ಆರ್ ಪಿ ಎಲ್ ನಿಂದ 25 ಲಕ್ಷ ಅನುದಾನದಿಂದ ನಿರ್ಮಾಣವಾದ ವಿವೇಕ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ವಿದ್ಯಾಬ್ಯಾಸ ದೊರೆಯುತ್ತಿದೆ. ಸರಕಾರಿ ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ದೊರೆಯುತ್ತಿದೆ. ಈ ಹಿಂದೆ ಸರಕಾರಿ ಶಾಲೆಯಲ್ಲಿ ಕಲಿತವರೇ ಇಂದು ದೇಶ ,ರಾಜ್ಯವನ್ನು ಆಳುತ್ತಿದ್ದಾರೆ ಇದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಕೇಪು ಸರಕಾರಿ ಶಾಲೆಯಲ್ಲಿನ ಹಳೆ ವಿದ್ಯಾರ್ಥಿ ಇಂದು ಹೈಕೋರ್ಟಿನಲ್ಲಿ ಉನ್ನತ ಹುದ್ದೆಯಲ್ಲಿರುವುದು ಗ್ರಾಮಕ್ಕೆ ಅಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.
ಸರಕಾರಿ ಶಾಲೆಗಳು ಉಳಿಯಬೇಕು, ಶಾಲೆಗಳು ಬಂದ್ ಆದರೆ ಮುಂದೆ ಬಹುದೊಡ್ಡ ಸಮಸ್ಯೆ ಎದುರಾಗಬಹುದು ಎಂದು ಹೇಳಿದ ಶಾಸಕರು ಮಕ್ಕಳಿಗೆ ಶಾಲೆಯ ಶಿಕ್ಷಣದ ಜೊತೆ ಬದುಕಿನ ಶಿಕ್ಷಣವನ್ನು ನೀಡಬೇಕು. ನಮ್ಮ ಆಚಾರ, ವಿಚಾರ ,ಸಂಸ್ಕೃತಿಯನ್ನು ಪಾಲನೆ ಮಾಡುವಲ್ಲಿ ಮಕ್ಕಳಿಗೆ ಪೋಷಕರು ನೆರವಾಗಬೇಕು. ಕೇವಲ ಪುಸ್ತಕದ ಪಾಠ ಮಾತ್ರ ಶಿಕ್ಷಣವಲ್ಲ, ಬದುಕೂ ನಮಗೆ ಪಾಠ ಕಲಿಸುತ್ತದೆ ಎಂದು ಹೇಳಿದರು.
ಎಂ ಆರ್ ಪಿ ಎಲ್ ಬಗ್ಗೆ ಅಭಿಮಾನವಿದೆ
ಎಂ ಆರ್ ಪಿ ಎಲ್ ಬಗ್ಗೆ ಅಭಿಮಾನವಿದೆ, ಆರಂಭದಲ್ಲಿ ಅವರಿಗೆ ವಿರೋಧ ಇತ್ತು ಆದರೆ ಇಂದು ಅದೇ ಸಂಸ್ಥೆ ಗ್ರಾಮದಲ್ಲಿ ಶಿಕ್ಷಣಕ್ಕೆ, ಆರೋಗ್ಯಕ್ಕೆ ನೆರವು ನೀಡುತ್ತಿದೆ.ಮುಂದೆ ಇದೇ ಸಂಸ್ಥೆಯಲ್ಲಿ ನಮ್ಮ ಜಿಲ್ಲೆಯ ಯುವಕರಿಗೂ ಉದ್ಯೋಗ ಸಿಗುವಂತೆ ಆಗಬೇಕು. ಸರೋಜಿನಿ ವರದಿ ಜಾರಿ ಮಾಡಬೇಕೆಂದು ಅಧಿವೇಶನದಲ್ಲಿ ಮಾತನಾಡುವೆ ಎಂದು ಶಾಸಕರು ಹೇಳಿದರು.