ವಿವೇಕಾನಂದ ಪ.ಪೂರ್ವ ಕಾಲೇಜಿನಲ್ಲಿ ಕನಸುಗಳು-2024 ಕಾರ್ಯಕ್ರಮದ ಸಮಾರೋಪ ಸಮಾರಂಭ

0

ಕನಸು ನನಸಾಗಲು  ಪ್ರಯತ್ನ ಮತ್ತು ಪರಿಶ್ರಮ ಅತ್ಯಗತ್ಯ : ವಿಶ್ವಾಸ್ ಶೆಣೈ

ಪುತ್ತೂರು:   ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಯಶಸ್ಸು ಸಾಧಿಸಲು ಕನಸು ಬೇಕೇ ಬೇಕು, ಆದರೆ ಕನಸು ನನಸಾಗಲು  ಪ್ರಯತ್ನ ಮತ್ತು ಪರಿಶ್ರಮ ಬಹು ಮುಖ್ಯ .ಪೆನ್ಸಿಲ್‌ ತಪ್ಪು ಬರೆದಾಗ ಇರೇಸರ್‌ ಅದನ್ನು ತಿದ್ದಿ ತೀಡುವ ರೀತಿಯಲ್ಲಿ ಅಧ್ಯಾಪಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ತಿದ್ದಿ, ಗುರಿಯತ್ತ ಚಲಿಸುವಂತೆ ಮಾಡುತ್ತಾರೆ.  ಹಾಗಾಗಿ ಕನಸು ನನಸಾದ  ಮೇಲೆ ಸಾಧನೆಯ ಹಾದಿಯಲ್ಲಿ ನಿಮ್ಮ ಜೊತೆಗಿದ್ದವರನ್ನು ಮರೆಯಬಾರದು ಎಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವಿಶ್ವಾಸ್‌ ಶೆಣೈ ಹೇಳಿದರು.

       ವಿವೇಕಾನಂದ ಪದವಿಪೂರ್ವ ಕಾಲೇಜಿನ  ಅಹಲ್ಯಾಬಾಯಿ ಹೋಳ್ಕರ್ ವೇದಿಕೆಯಲ್ಲಿ ನಡೆದ ಎರಡು ದಿನದ ಕನಸುಗಳು-2024 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇವರು, ಈ ಕಾಲಘಟ್ಟದಲ್ಲಿ ರಾಷ್ಟ್ರಪ್ರೇಮ ಇರುವ ಯುವಶಕ್ತಿ ದೇಶದ ವಿಕಾಸಕ್ಕೆ ಬೇಕು, ಇಂದು ನಮ್ಮ ದೇಶಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕ ಸಿಕ್ಕಿದ್ದಾರೆ, ನಾವೂ ಕೂಡಾ ಅವರಂತೆ ರಾಷ್ಟ್ರೀಯತೆ ಬೆಳೆಸಿಕೊಳ್ಳಬೇಕು ಎಂದರು.

    ಇನ್ನೋರ್ವ ಮುಖ್ಯ ಅತಿಥಿ  ಲೇಬಲ್ ಫ್ಯೂಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಚಂದನ್ ಶ್ರೀಧರ್ ಭಾಗವಹಿಸಿ , ವಿದ್ಯಾರ್ಥಿಯಾಗಿದ್ದಾಗ ಅಧ್ಯಾಪಕರು ಹೇಳಿ ಕೊಟ್ಟ ಪಾಠಗಳು ಇಂದಿಗೂ ತನ್ನನ್ನು ಕೈ ಹಿಡಿದು ಮುನ್ನಡೆಸುತ್ತಿವೆ, ಹಾಗಾಗಿ ಗುರಿಯ ಕಡೆಗೆ ಹೆಜ್ಜೆ ಇಡುವಂತೆ ಮಾಡಿದ ಗುರುಗಳಿಗೆ ನಾವು ಚಿರಋಣಿಯಾಗಿರಬೇಕು ಎಂದು ನುಡಿದರು.

     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಕೋಶಾಧಿಕಾರಿಗಳಾದ ಸಚಿನ್ ಶೆಣೈ  ಮಾತನಾಡಿ , ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಸಾಮಾನ್ಯವಾಗಿ ವಿದ್ಯಾರ್ಥಿಗಳು ಗೆಲುವನ್ನು ಮಾತ್ರವೇ ಬಯಸುತ್ತಾರೆ, ಆದರೆ ಫಲಿತಾಂಶದ ಬಗ್ಗೆ ಚಿಂತಿಸುವುದಕ್ಕಿಂತ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿರುತ್ತದೆ, ವಿದ್ಯಾರ್ಥಿಗಳು ತಾವು ಪಡೆದ ಅನುಭವಗಳಿಂದ ಧನಾತ್ಮಕವಾಗಿ ಬೆಳೆಯಬೇಕು ಎಂದು ಹಿತನುಡಿದರು.  

 ಈ ಸಂದರ್ಭದಲ್ಲಿ ಎರಡು ದಿನಗಳಲ್ಲಿ ನಡೆದ 17 ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶಾಲಾ ತಂಡಗಳನ್ನು ಗುರುತಿಸಲಾಯಿತು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಸತಿ ನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ .ಪಿ, ವಿವೇಕಾನಂದ ಪದವಿಪೂರ್ವ ಕಾಲೇಜಿನ  ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ , ಉಪಪ್ರಾಂಶುಪಾಲರಾದ ಯಂ. ದೇವಿಚರಣ್‌ ರೈ ಉಪಸ್ಥಿತರಿದ್ದರು.

 ಉಪನ್ಯಾಸಕಿ ದಯಾಮಣಿ ಟಿ ಕೆ ಪ್ರಾಸ್ತಾವಿಕ ನುಡಿಗಳೊಂದಿಗೆ  ಸ್ವಾಗತಿಸಿದರು. ಉಪನ್ಯಾಸಕಿಯರಾದ ಪುಷ್ಪಲತಾ ವಂದಿಸಿ, ಶರ್ಮಿಳಾ ನಿರೂಪಿಸಿದರು.

ಲೇಬಲ್ ಫ್ಯೂಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಚಂದನ್ ಶ್ರೀಧರ ಅವರಿಗೆ ಗೌರವಾರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here