ಬಾಲಕೃಷ್ಣ ಕೊಳತ್ತಾಯರವರ ಸೇವಾ ಸಾಧನೆಗೆ ಸಂದ ಸನ್ಮಾನವಾಗಿದೆ-ಶ್ರೀ ಸಚ್ಚಿದಾನಂದ ಸ್ವಾಮೀಜಿ
ಪುತ್ತೂರು: ವಿದ್ಯುತ್ ಜೀವನದಲ್ಲಿ ಅನಿವಾರ್ಯ. ವಿದ್ಯುತ್ ಸಮರ್ಪಕ ಬೆಳಕನ್ನು ನೀಡಿದಾಗ ಅದು ನಮಗೆ ಶಕ್ತಿಯನ್ನು ಕೊಡುತ್ತದೆ. ಈ ನಿಟ್ಟಿನಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘವು ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಅದೇ ರೀತಿ ಸಂಘದ ಸ್ಥಾಪಕಾಧ್ಯಕ್ಷರಾದ ಬಾಲಕೃಷ್ಣ ಕೊಳತ್ತಾಯರವರ ಸೇವಾ ಸಾಧನೆಯನ್ನು ಪರಿಗಣಿಸಿ ಅವರನ್ನು ಅವರ ಹುಟ್ಟುಹಬ್ಬದ ಸಂದರ್ಭ ಗೌರವಿಸಿ ಸನ್ಮಾನಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶ್ರೀ ಕ್ಷೇತ್ರ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿರವರು ಹೇಳಿದರು.
ನ.16ರಂದು ರೋಟರಿ ಮನೀಷಾ ಸಭಾಭವನದಲ್ಲಿ ಮಧ್ಯಾಹ್ನ ಜರಗಿದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಂಗಳೂರು, ಉಪ ಸಮಿತಿ ಪುತ್ತೂರು ಇದರ ವತಿಯಿಂದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಪುತ್ತೂರು ಉಪ ಸಮಿತಿಯ ಸ್ಥಾಪಕಾಧ್ಯಕ್ಷರಾದ ಎನ್.ಬಾಲಕೃಷ್ಣ ಕೊಳತ್ತಾಯರವರ 80ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ ಸಾರ್ವಜನಿಕ ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಹುಟ್ಟುಹಬ್ಬ ಆಚರಿಸಿದ ಬಾಲಕೃಷ್ಣ ಕೊಳತ್ತಾಯ ಹಾಗೂ ಅವರ ಪತ್ನಿ ವೀಣಾ ಕೊಳತ್ತಾಯರವರನ್ನು ಸನ್ಮಾನಿಸಿ ಆಶೀರ್ವದಿಸುವ ಮೂಲಕ ಮಾತನಾಡಿದರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅನ್ಯಾಯವಾದಾಗ ಒಬ್ಬಿಬ್ಬರು ಹೋದರೆ ಅಲ್ಲಿ ಮಾನ್ಯತೆ ಇರೋದಿಲ್ಲ. ಆದರೆ ಸಕ್ರಿಯ ಸಂಘಟನೆಯ ಮೂಲಕ ಅನ್ಯಾಯವನ್ನು ಪ್ರತಿಭಟಿಸುವುದು, ಬೇಡಿಕೆಗಳನ್ನು ಮುಂದಿರಿಸುವುದು ಮಾಡಿದಾಗ ಅಲ್ಲಿ ಮಾನ್ಯತೆ ಸಿಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘವು ವೈಯಕ್ತಿಕವಾಗಿ ಹಾಗೂ ಸಾಮಾಜಿಕ ದೃಷ್ಟಿಯಿಂದ ಉತ್ತಮ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದರು.
ಸಂಘವು ಗಟ್ಟಿಯಾಗಿ ನೆಲೆ ನಿಂತಿದೆಯೆಂದರೆ ಅದು ತ್ಯಾಗದ ಮನೋಭಾವನೆಯಿಂದ-ಕಿಶೋರ್ ಬೊಟ್ಯಾಡಿ:
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಸಂಘವು ಗಟ್ಟಿಯಾಗಿ ನೆಲೆ ನಿಂತಿದೆ ಅಂದರೆ ಸಂಘದಲ್ಲಿನ ತ್ಯಾಗದ ಮನೋಭಾವ ಆಗಿದೆ. ಸಂಘದ ಸ್ಥಾಪನೆಯಲ್ಲಿ ಪ್ರಮುಖ ಕಾರಣಕರ್ತರಾದ ಹಿರಿಯರಾದ ಬಾಲಕೃಷ್ಣ ಕೊಳತ್ತಾಯ ಹಾಗೂ ರಘುನಾಥ ಆಳ್ವರವರನ್ನು ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಅಡ್ವಾಣಿರವರಿಗೆ ಹೋಲಿಸುತ್ತಿದ್ದೇನೆ. ಮೆಸ್ಕಾಂ ಇಲಾಖೆಯಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದ ಸಂದರ್ಭದಲ್ಲಿ ವಿದ್ಯುತ್ ಗುತ್ತಿಗೆದಾರರ ಸಂಘವನ್ನು ಬಲ್ಲವನಾಗಿದ್ದೇನೆ. ಜೀವನದಲ್ಲಿ ಒಂದೇ ಬಾರಿ ಮನೆ ಕಟ್ಟಲು ಸಾಧ್ಯವಾಗುವುದು. ಈ ಸಂದರ್ಭದಲ್ಲಿ ಮನೆ ಬೆಳಗಿಸುವಂತೆ ಮಾಡುವುದು ವಿದ್ಯುತ್ ಗುತ್ತಿಗೆದಾರರು ಆಗಿದ್ದಾರೆ ಎಂದರು.
ಸಾರ್ವಜನಿಕ ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಂಡವರು ಕೊಳತ್ತಾಯರವರು-ಶಕುಂತಳಾ ಶೆಟ್ಟಿ:
ಪುತ್ತೂರು ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಕೊಳತ್ತಾಯರವರ ಕುಟುಂಬಕ್ಕೆ ಹಾಗೂ ನನಗೆ ಬಹಳ ಆತ್ಮೀಯತೆ. ವಿದ್ಯುತ್ ಗುತ್ತಿಗೆದಾರರ ಸಂಘವನ್ನು ಸ್ಥಾಪಿಸಿ ಅದರ ಸ್ಥಾಪಕಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲು ಕಾರಣಕರ್ತರಾದ ರಘುನಾಥ್ ಆಳ್ವರವರನ್ನು ಸನ್ಮಾನಿಸಿರುವುದು ಹಾಗೂ ತನ್ನ ವೃತ್ತಿ ಬದುಕಿನಲ್ಲಿ ಪ್ರೇರೇಪಣೆ ನೀಡುತ್ತಿದ್ದ ಅಣ್ಣ ಸುಬ್ರಹ್ಮಣ್ಯ ಕೊಳತ್ತಾಯರವರ ಆಶೀರ್ವಾದ ಪಡೆದಿರುವುದು ಅವರು ನೀಡುತ್ತಿರುವ ಗೌರವವಾಗಿದೆ. ಸಾರ್ವಜನಿಕ ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಂಡವರು ಕೊಳತ್ತಾಯರವರು. ಮುಂದಿನ ದಿನಗಳಲ್ಲಿ ಶಾಂತಿ, ನೆಮ್ಮದಿಯ ಬದುಕು ಅವರದಾಗಲಿ, ಅವರು ಮಾಡುತ್ತಿರುವ ಕೆಲಸ ಯಶಸ್ವಿಯಾಗಲಿ ಎಂದರು.
ಹಿರಿಯರನ್ನು ವೇದಿಕೆಯಲ್ಲಿ ಗೌರವಿಸುವುದು ರಾಜ್ಯದಲ್ಲಿಯೇ ಮೊದಲು-ಉರ್ಬಾನ್ ಪಿಂಟೊ:
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷ ಉರ್ಬಾನ್ ಪಿಂಟೊ ಮಾತನಾಡಿ, ಮೂವತ್ತು ಜಿಲ್ಲೆಗಳಲ್ಲಿ ವಿದ್ಯುತ್ ಗುತ್ತಿಗೆದಾರರ 176 ತಾಲೂಕು ಸಮಿತಿಗಳು ಇದ್ದು ಅದರಲ್ಲಿ ಪುತ್ತೂರು ಉಪ ಸಮಿತಿಗೆ ಒಳ್ಳೆಯ ಸ್ಥಾನಮಾನವಿದೆ. ಬಾಲಕೃಷ್ಣ ಕೊಳತ್ತಾಯರವರು ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿಯಲ್ಲಿಯೂ ಕೆಲಸ ಮಾಡಿದ್ದಾರೆ. ಪುತ್ತೂರು ಉಪ ಸಮಿತಿಯು ಯಾವುದೇ ಕಾರ್ಯ ಮಾಡಿದಾಗ ಅದರಲ್ಲಿನ ಹಿರಿಯರನ್ನು ಕೇಳಿಯೇ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ತಾಲೂಕು ಸಮಿತಿಯ ಹೆಗ್ಗಳಿಕೆಯಾಗಿದೆ ಅಲ್ಲದೆ ಹಿರಿಯರನ್ನು ವೇದಿಕೆಯಲ್ಲಿ ಗೌರವಿಸುವುದು ರಾಜ್ಯದಲ್ಲಿಯೇ ಮೊದಲು ಎಂದರು.
ಬಾಲಕೃಷ್ಣ ಕೊಳತ್ತಾಯರವರೋರ್ವ ಸ್ನೇಹಜೀವಿ, ಜನಾನುರಾಗಿ-ವಾಮನ್ ಪೈ:
ಪುತ್ತೂರು ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಬಾಲಕೃಷ್ಣ ಕೊಳತ್ತಾಯವರಿಗೆ ಮತ್ತು ನನಗೆ 42 ವರ್ಷಗಳ ಸ್ನೇಹಾನುಭವವಾಗಿದ್ದು ಅವರೋರ್ವ ಅರ್ಹ ಇಲ್ಲದ ವಾಸ್ತವಿಕತೆಯಿಂದ ಕೂಡಿದ ಸ್ನೇಹಜೀವಿ, ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುವ ಅಜಾತಶತ್ರು ಹಾಗೂ ಜನಾನುರಾಗಿ, ಜೀವನದಲ್ಲಿ ಬದ್ಧತೆಯನ್ನು ಅಳವಡಿಸಿಕೊಂಡಿರುವ ಹಾಗೂ ತನ್ನ ಕೃತಿಯ ಮೂಲಕ ಗೌರವವನ್ನು ಪಡೆದುಕೊಳ್ಳುವ ವ್ಯಕ್ತಿತ್ವ ಬಾಲಕೃಷ್ಣ ಕೊಳತ್ತಾಯರವರದಾಗಿದೆ ಎಂದರು.
ಮನೆ ಹಿರಿಯರಿಗೆ ಗೌರವಿಸುವುದು ಗೌರವ-ಸೂರ್ಯನಾಥ ಆಳ್ವ:
ಅಧ್ಯಕ್ಷತೆ ವಹಿಸಿದ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಿತ್ತಳಿಕೆ ಸೂರ್ಯನಾಥ ಆಳ್ವರವರು ಸ್ವಾಗತಿಸಿ ಮಾತನಾಡಿ, ಪ್ರತಿಯೋರ್ವರಿಗೆ ಉದ್ಯೋಗ ಎಂಬುದು ಇದೆ. ಆದರೆ ವಿದ್ಯುತ್ ಗುತ್ತಿಗೆದಾರರಿಗೆ ಮನೆಗಳಿಗೆ ಬೆಳಕು ಕೊಡುವ ಉದ್ಯೋಗವಾಗಿದೆ. ಕರ್ನಾಟಕ ಸರಕಾರದಿಂದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ 1922 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಬಳಿಕ 1980ರಲ್ಲಿ ಮಂಗಳೂರಿನಲ್ಲಿ ಜಿಲ್ಲಾ ಸಮಿತಿ ರಚನೆ, ಪುತ್ತೂರಿನಲ್ಲಿ ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳಿಗೆ ಸಂಘಟಿತವಾಗಿ ಪರಿಹಾರ ಒದಗಿಸಲು ಪುತ್ತೂರಿನಲ್ಲಿ ಬಾಲಕೃಷ್ಣ ಕೊಳತ್ತಾಯ, ಮಿತ್ತಳಿಕೆ ರಘುನಾಥ ಆಳ್ವ, ಮುನ್ನಾ ನಾರಾಯಣ ಭಟ್ ಸೇರಿಕೊಂಡು ಸ್ಥಾಪಿಸಲಾಯಿತು. ಗ್ರಾಹಕರಿಗೆ ಹಾಗೂ ಮೆಸ್ಕಾಂ ಇಲಾಖೆಗೆ ಕೊಂಡಿಯಾಗಿ ವಿದ್ಯುತ್ ಗುತ್ತಿಗೆದಾರರ ಸಂಘ ಕಾರ್ಯ ನಿರ್ವಹಿಸುತ್ತಿದೆ. ಸಂಘವನ್ನು ಸ್ಥಾಪಿಸಿ, ಅದರ ಸ್ಥಾಪಕಾಧ್ಯಕ್ಷರಾಗಿ ಇದೀಗ ಅವರ ಎಂಭತ್ತರ ಹುಟ್ಟುಹಬ್ಬವನ್ನು ನಾವೆಲ್ಲರೂ ಒಟ್ಟಾಗಿ ಆಚರಿಸುವುದು ಎಂದರೆ ಮನೆ ಹಿರಿಯರಿಗೆ ಗೌರವಿಸುವುದಾಗಿದೆ ಎಂದರು.
ಸಾರ್ವಜನಿಕರಿಂದ ಅನಿಸಿಕೆ:
ಈ ಸಂದರ್ಭದಲ್ಲಿ ಬಾಲಕೃಷ್ಣ ಕೊಳತ್ತಾಯರವರ ಕುಟುಂಬದ ಪರವಾಗಿ ಸಹೋದರ ಡಾ.ಯದುಕುಮಾರ್ ಕೊಳತ್ತಾಯ, ಗ್ರಾಹಕನಾಗಿ ವಿಶ್ವೇಶ್ವರ ಭಟ್ ಬಂಗಾರಡ್ಕ, ಗುತ್ತಿಗೆದಾರರ ಸಂಘದ ಪರವಾಗಿ ಸುಬ್ರಾಯ ಗೌಡ, ಮೆಸ್ಕಾಂ ಪರವಾರಗಿ ಬಂಟ್ವಾಳ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಭಟ್, ಕೆಪಿಟಿಸಿಎಲ್ ಪರವಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ತೇಜಸ್ವಿರವರು ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಗೌರವ:
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಪರವಾಗಿ, ಪುತ್ತೂರು ತುಳು ಒಕ್ಕೂಟ ಪರವಾಗಿ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್ ಸಹಿತ ಹಲವರು ಬಾಲಕೃಷ್ಣ ಕೊಳತ್ತಾಯರವರ ಹಿತೈಷಿಗಳು ಗೌರವಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕುಶಲ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಕೀರ್ತಿ ಗೌಡ ಶಾಂತಿಗೋಡು ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕ ಸಂಘದ ಅಧ್ಯಕ್ಷ ಸೂರ್ಯನಾಥ ಆಳ್ವ ಮಿತ್ತಳಿಕೆರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜತ್ತಪ್ಪ ಗೌಡ, ಸಜಿತ್, ಸಂಜೀವ ಗೌಡ, ಜೇಮ್ಸ್ ಜೆ.ಮಾಡ್ತಾ, ಸುಂದರ ಗೌಡ, ರಮೇಶ್, ಸತೀಶ್ ರೈ, ಬಾಬು ನಾಯ್ಕ್ ರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಿದರು. ಸನ್ಮಾನಿತರ ಸನ್ಮಾನ ಪತ್ರವನ್ನು ಮುನ್ನಾ ಇಲೆಕ್ಟ್ರಿಕಲ್ಸ್‌ನ ಕೃಷ್ಣಪ್ರಶಾಂತ್ ಓದಿದರು. ಕಾರ್ಯದರ್ಶಿ ಅಶೋಕ್ ಪ್ರಶಾಂತ್ ವಂದಿಸಿದರು. ಜಗದೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಜಿತ್ ಕುಮಾರ್ ರೈ, ಮಾಜಿ ಅಧ್ಯಕ್ಷ ಮಹಾದೇವ ಶಾಸ್ತ್ರಿ ಮಣಿಲ ಸಹಿತ ಹಲವರು ಸಹಕರಿಸಿದರು.
ಸನ್ಮಾನ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತೇನೆ..
ಸನ್ಮಾನಕ್ಕೆ ನಾನೆಷ್ಟೋ ಅರ್ಹನೋ ಗೊತ್ತಿಲ್ಲ, ಆದರೂ ನೀವು ಪ್ರೀತಿಯಿಂದ ಕೊಟ್ಟ ಸನ್ಮಾನವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುತ್ತೇನೆ. ನನ್ನ ಏಳಿಗೆಯಲ್ಲಿ ನನ್ನ ದೊಡ್ಡಣ್ಣ ಸುಬ್ರಹ್ಮಣ್ಯ ಕೊಳತ್ತಾಯ ಸಹಿತ ನನ್ನ ಕುಟುಂಬದವರು ಸಹಕಾರ ನೀಡಿದ್ದಾರೆ. ಆರಂಭದಲ್ಲಿ ರಿಪೇರಿ, ನಿರ್ವಹಣೆ ಮಾಡುತ್ತಿದ್ದ ನಾನು 1973ರಲ್ಲಿ ಕಾಂಟ್ರಾಕ್ಟರ್ ಆಗಿ ನನ್ನ ಉದ್ಯಮದಲ್ಲಿ ಬದಲಾವಣೆ ಕಂಡುಕೊಂಡೆ. ನನ್ನ ಬದುಕಿನುದ್ದಕ್ಕೂ ಕೆಇಬಿ, ಕೆಪಿಟಿಸಿಎಲ್, ಇಂಜಿನಿಯರ‍್ಸ್, ಕಾಂಟ್ರಾಕ್ಟರ‍್ಸ್ ಹೀಗೆ ಎಲ್ಲರ ಸಹಕಾರವನ್ನು ಇಂದು ಸ್ಮರಿಸುತ್ತಿದ್ದೇನೆ. ಜೊತೆಗೆ ಈ ವಿದ್ಯುತ್ ಗುತ್ತಿಗೆದಾರರ ಸಂಘವನ್ನು ಸ್ಥಾಪಿಸುವುದರ ಜೊತೆಗೆ ಸ್ಥಾಪಕಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ ಹೆಮ್ಮೆಯಿದೆ ನನಗೆ.
-ಎನ್.ಬಾಲಕೃಷ ಕೊಳತ್ತಾಯ, ಸಾರ್ವಜನಿಕ ಸನ್ಮಾನ ಸ್ವೀಕರಿಸಿದವರು
ಸನ್ಮಾನ..
ಸಂಘದ ಸ್ಥಾಪನೆಗೆ ಕಾರಣಕರ್ತರಾಗಿದ್ದು ಮಾತ್ರವಲ್ಲ ಪ್ರತಿಯೊಂದು ಹಂತದಲ್ಲೂ ತನ್ನೊಂದಿಗೆ ಸಹಕರಿಸಿದ ಹಿರಿಯರಾದ ಮಿತ್ತಳಿಕೆ ರಘುನಾಥ ಆಳ್ವ ಜೊತೆಗೆ ತನ್ನ ಸುಧಾ ಇಲೆಕ್ಟ್ರಿಕಲ್ಸ್‌ನಲ್ಲಿ ಕಳೆದ 40 ವರ್ಷಕ್ಕೂ ಮಿಕ್ಕಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಉದ್ಯೋಗಿಗಳಾದ ರಾಮಣ್ಣ ಗೌಡ ಹಾಗೂ ಗೋಪಾಲಕೃಷ್ಣರವರುಗಳನ್ನು ಬಾಲಕೃಷ್ಣ ಕೊಳತ್ತಾಯರವರ ಪರವಾಗಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಶೋಭಾ ಕೊಳತ್ತಾಯ ಸನ್ಮಾನಿತರ ಪರಿಚಯ ಮಾಡಿದರು.