ಸಹಕಾರಿ ತತ್ವದ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ- ಸ್ಪೀಕರ್ ಯು.ಟಿ.ಖಾದರ್
ಮಂಗಳೂರು:ಗ್ರಾಮೀಣ ಭಾಗದ ಜನರು ಇಂದು ಸಹಕಾರಿ ತತ್ವದ ಮೂಲಕ ತಮ್ಮ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನ ಕರಾವಳಿ ಮೈದಾನದಲ್ಲಿ ನ.16ರಂದು 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದ ಅವರು ಬಳಿಕ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಜನತೆಯ ಬದುಕಿಗೆ ಇನ್ನಷ್ಟು ಶಕ್ತಿ ನೀಡುವ ನಿಟ್ಟಿನಲ್ಲಿ ಇನ್ನೊಂದು ಸಾಲ ಮೇಳ ಆಯೋಜನೆ ಮಾಡುವ ಅಗತ್ಯವಿದೆ.ಮಾಜಿ ಕೇಂದ್ರ ವಿತ್ತ ಸಚಿವ ಜನಾರ್ದನ ಪೂಜಾರಿಯವರ ಸಾಲ ಮೇಳದಿಂದ ಜನಸಾಮಾನ್ಯರು ಬ್ಯಾಂಕ್ ಬಾಗಿಲು ನೋಡುವಂತಾಯಿತು.ಈ ನಿಟ್ಟಿನಲ್ಲಿ ಗ್ರಾಮೀಣ ಜನರ ಬದುಕಿಗೆ ಇನ್ನಷ್ಟು ಶಕ್ತಿ ನೀಡುವ ಸಲುವಾಗಿ ಇನ್ನೊಮ್ಮೆ ಸಾಲ ಮೇಳ ಹಮ್ಮಿಕೊಳ್ಳಬೇಕು.ಇಂತಹ ಕಾರ್ಯಕ್ರಮಗಳಿಂದ ಜನರು ಸ್ವಾಭಿಮಾನಿಗಳಾಗಲಿ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.ಹೈನುಗಾರರಿಗೆ ಪ್ರೋತ್ಸಾಹಧನದ ಮೊತ್ತವನ್ನು ಹೆಚ್ಚಳ ಮಾಡಬೇಕು,ಸಹಕಾರಿ ಸಂಘಗಳ ನೌಕರರಿಗೂ ಪ್ರೋತ್ಸಾಹಧನವನ್ನು ಏರಿಕೆ ಮಾಡಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಲ್ಲಿ ಸ್ಪೀಕರ್ ಯು.ಟಿ.ಖಾದರ್ ವಿನಂತಿಸಿದರು.
ಸಹಕಾರಿ ಆಂದೋಲನದಲ್ಲಿ ಭಾಗವಹಿಸಿ:
‘ಸಹಕಾರ’ ವಾರ ಪತ್ರಿಕೆ ಅನಾವರಣಗೊಳಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಸಹಕಾರ ರಂಗದಲ್ಲಿ ಕೇಂದ್ರ ಸರ್ಕಾರದ ಕೊಡುಗೆಯನ್ನು ಸ್ಮರಿಸಿದ ಅವರು, ಸಹಕಾರ ಆಂದೋಲನ ಜನರ ಆಂದೋಲನ ಆಗಬೇಕು.ಸಾಲ ಪಡೆದು ಕ್ಲಪ್ತ ಸಮಯದಲ್ಲಿ ಮರು ಪಾವತಿಸುವ ದ.ಕ.ಜಿಲ್ಲೆಯ ಸಹಕಾರಿಗಳ ಬಗ್ಗೆ ಅಭಿಮಾನವಿದೆ ಎಂದರು.
ಸಹಕಾರಿಯಲ್ಲಿ ಕ್ರಾಂತಿಕಾರಿ ಬದಲಾವಣೆ:
ಉತ್ತಮ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ವಾತಂತ್ರ್ಯದ ಬಳಿಕ ಪಂಚವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಬಲವನ್ನು ತುಂಬುವ ಕೆಲಸ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಕ್ರಾಂತಿಕಾರಿ ಬದಲಾವಣೆಯಾಗಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ಕ್ಷೇತ್ರಕ್ಕೆ ಮನ್ನಣೆ ನೀಡುತ್ತಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಾಮಾನ್ಯರು ವ್ಯವಸ್ಥಿತವಾಗಿ ಸಹಕಾರಿ ಕ್ಷೇತ್ರವನ್ನು ಕಟ್ಟಿಕೊಂಡು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ.ಸಮಾಜದಲ್ಲಿ ದ್ವೇಷ ಬಿತ್ತುವವರ ಬಗ್ಗೆ ಎಚ್ಚರ ವಹಿಸಬೇಕು.ಸಹಕಾರ ಕ್ಷೇತ್ರ ಪಕ್ಷಾತೀತವಾದುದು ಎಂದರು.
ಸಹಕಾರಿ ರಂಗದಿಂದ ಬದಲಾವಣೆ:
ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ ಮಾತನಾಡಿ, ಸಹಕಾರಿ ಕ್ಷೇತ್ರ ಸಮಾಜದ ತಳಮಟ್ಟದಲ್ಲಿ ಬದಲಾವಣೆ ತಂದಿದೆ.ದ.ಕ.ದಲ್ಲಿ ಸಹಕಾರಿ ಸೇರಿದಂತೆ ಎಲ್ಲ ಕ್ಷೇತ್ರಗಳೂ ದೇಶಕ್ಕೇ ಮಾದರಿಯಾಗಿದೆ.ಸಹಕಾರಿ ರಂಗದ ಧುರೀಣ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ ಕಾರ್ಯವೈಖರಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.ಸಹಕಾರಿ ರಂಗದ ಚಟುವಟಿಕೆ ಆತ್ಮನಿರ್ಭರತೆಗೆ ಪೂರಕವಾಗಿದೆ ಎಂದರು.
ನಬಾರ್ಡ್ ಹೆಚ್ಚು ಸಾಲ ನೀಡಲಿ:
ಉತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ನೆರವೇರಿಸಿ ಮಾತನಾಡಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇ ಗೌಡ, ಕೇಂದ್ರ ಸರ್ಕಾರದ ನಬಾರ್ಡ್ ಕಳೆದ ಬಾರಿ 5,640 ಕೋಟಿ ರೂ.ಸಾಲ ನೀಡಿದ್ದರೆ, ಈ ಬಾರಿ ಕೇವಲ 2,140 ಕೋಟಿ ರೂ.ರೈತ ಸಾಲ ನೀಡಿದೆ.ಹೀಗಾದಲ್ಲಿ ರೈತರು ಎಲ್ಲಿಗೆ ಹೋಗಬೇಕು? ಕೃಷಿ ಕತೆ ಏನು? ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.ಸಹಕಾರಿ ನೌಕರರ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಬೇಕಾಗಿದೆ.ಡಿಪ್ಲೊಮಾ ಕೋರ್ಸ್ ಆದವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕಾಗಿದೆ.ಸಹಕಾರಿ ಸಂಘಗಳಲ್ಲಿ ಸಹಕಾರಿ ಶಿಕ್ಷಣ ನೀಡಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಶತಮಾನೋತ್ಸವ ಪೂರೈಸಿದ ಸಹಕಾರ ಸಂಘಗಳಿಗೆ ಪುರಸ್ಕಾರ ನೀಡಿದ ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದೆ
ಎಂದರು.
ಸಹಕಾರ ಮಾಣಿಕ್ಯ ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸಿ ‘ಸಹಕಾರ ಮಾಣಿಕ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಜೊತೆಗೆ 5 ಗ್ರಾಂ. ಚಿನ್ನದ ಪದಕ, 10,000ರು. ನಗದು ಹಾಗೂ ಪಾರಿತೋಷಕ ನೀಡಲಾಯಿತು.ಸಾಮಾನ್ಯ ವಿಭಾಗದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಪೈಕಿ ಉಭಯ ಜಿಲ್ಲೆಗಳಲ್ಲಿ ಒಂದರಂತೆ ಹಾಗೂ ಹೈನುಗಾರಿಕೆ, ಕ್ರೆಡಿಟ್ ಸೊಸೈಟಿ, ಮೀನುಗಾರ ಸಹಕಾರ ಸಂಘ, ಸೌಹಾರ್ದ ಸಹಕಾರಿ ಸಂಘ ಹಾಗೂ ಮಹಿಳಾ ಸಹಕಾರಿ ಸಂಘಕ್ಕೆ ಉಭಯ ಜಿಲ್ಲೆಗಳಿಂದ ಒಂದು
ಹಾಗೂ 2023-24ನೇ ಸಾಲಿನಲ್ಲಿ ಶತಮಾನೋತ್ಸವ ಪೂರೈಸಿದ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗೌರವಿಸಲಾಯಿತು.
ನಂದಿನಿ ಪ್ರೀಮಿಯಂ ಮೊಸರು ಬಿಡುಗಡೆ:
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೊರತಂದ ‘ನಂದಿನಿ ಪ್ರೀಮಿಯಂ’ ಮೊಸರು ಪ್ಯಾಕೆಟ್‌ನ್ನು ಸಪ್ತಾಹದಲ್ಲಿ ವಿಶೇಷ ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಆಕರ್ಷಕ ಆವರಣದಲ್ಲಿ ನೇತುಹಾಕಿದ ದೊಡ್ಡ ಮಡಕೆ ಎದುರು ಗೋಪಿಕೆಯರೊಡನೆ ಶ್ರೀಕೃಷ್ಣ ನೃತ್ಯದ ಹಿನ್ನೆಲೆ, ಈ ವೇಳೆ ಸಹಕಾರ ಸಚಿವ ರಾಜಣ್ಣ ಅವರು ಮೊಸರಿನ ಪ್ಯಾಕೆಟ್
ತುಂಬಿದ್ದ ಮಡಕೆಯನ್ನು ಒಡೆಯುವ ಮೂಲಕ ಪ್ರೀಮಿಯಂ ಮೊಸರು ಪ್ಯಾಕೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.ಈ ಪ್ರೀಮಿಯಂ ಮೊಸರನ್ನು 15 ದಿನಗಳವರೆಗೆ
ಬಳಸಬಹುದು.ಜೀರ್ಣಕ್ರಿಯೆ, ಮೂಳೆಸವೆತ ಮುಂತಾದವುಗಳಿಗೆ ಇದರ ಉಪಯೋಗ ಪರಿಣಾಮಕಾರಿ ಎಂದು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರತಿನಿಽ ಜಾನೆಟ್ ಹೇಳಿದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್,ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್‌ಕೌಶಲ್ ಶೆಟ್ಟಿ ಬೆಳ್ಳಿಪ್ಪಾಡಿ, ಬೆಂಗಳೂರಿನ ಸಹಕಾರಿ ಸಂಘಗಳ ಅಪರ ನಿಬಂಧಕ ಕೆ.ಎಸ್.ನವೀನ್, ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್, ಉಡುಪಿ ಜಿಲ್ಲೆಯ ಉಪ ನಿಬಂಧಕಿ ಲಾವಣ್ಯ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ,ಶಶಿಕುಮಾರ್ ರೈ ಬಾಲ್ಯೊಟ್ಟು,ಎಸ್.ಬಿ.ಜಯರಾಮ ರೈ, ಕುಶಾಲಪ್ಪ ಗೌಡ ಪೂವಾಜೆ ಸಹಿತ ನಿರ್ದೇಶಕರು, ಸಿಇಒ ಗೋಪಾಲಕೃಷ್ಣ ಭಟ್ ಮತ್ತಿತರರಿದ್ದರು.ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ವಂದಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು,ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳು, ಎಲ್ಲ ವಿಧದ ಸಹಕಾರ ಸಂಘಗಳು ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಧ್ಯೇಯದಡಿ ಈ ಅಖಿಲ ಭಾರತ ಸಹಕಾರ ಸಪ್ತಾಹ ನಡೆಯಿತು.
ನವೋದಯ ಚಾರಿಟೇಬಲ್ ಟ್ರಸ್ಟ್ ಬೆಳ್ಳಿಹಬ್ಬ
ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಕ್ಷೇತ್ರ ಮಹಿಳೆಯರ ಅಭೂತಪೂರ್ವ ಬೆಂಬಲ ಹಾಗೂ ಸಹಕಾರದಿಂದ ನಡೆಯುತ್ತಿದೆ.ಹಳ್ಳಿ ಹಳ್ಳಿಗಳಲ್ಲೂ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ.ಇವರೆಲ್ಲರ ಶ್ರಮದಿಂದ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ.ಮುಂದೆ ಇನ್ನಷ್ಟು ಸಂಭ್ರಮ ಸಡಗರದಿಂದ ಸಪ್ತಾಹ ಆಚರಣೆಯಾಗಬೇಕು ಎಂದರು.ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯಾಗಿ ಮುಂದಿನ ಫೆಬ್ರವರಿ 24ರಂದು 25 ವರ್ಷ ಪೂರ್ಣಗೊಳ್ಳುತ್ತದೆ.ಇದನ್ನು ಚಾರಿತ್ರಿಕ ಕಾರ್ಯಕ್ರಮವಾಗಿ ರೂಪಿಸಲು, ರಾಷ್ಟ್ರಮಟ್ಟದಲ್ಲಿ ಹೆಸರು ಉಳಿಯುವಂತೆ ಮಾಡಲು ಎಲ್ಲರೂ ಶ್ರಮಪಡಬೇಕು.ಟ್ರಸ್ಟ್‌ಗೆ ಯಾವುದೇ ದೇಣಿಗೆ ಪಡೆಯುತ್ತಿಲ್ಲ, ಗ್ರಾಹಕರಿಗೆ ಚಕ್ರಬಡ್ಡಿಯನ್ನೂ ವಿಽಸುತ್ತಿಲ್ಲ,ಆರನೇ ಬಾರಿಗೆ ಸಮವಸ ವಿತರಿಸಲಾಗುತ್ತಿದೆ ಎಂದರು.