ಪುತ್ತೂರು: ಸಹಾಯಕ ಕೂಲಿ ಕಾರ್ಮಿಕನ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆಯ ಮುಂದಿನ ರಸ್ತೆ ಸಮೀಪ ಮಲಗಿಸಿ ಹೋದ ಘಟನೆಯೊಂದು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಸಮೀಪದ ಕೆರೆಮೂಲೆಯಲ್ಲಿ ನ.16ರಂದು ನಡೆದಿದ್ದು, ಘಟನೆಗೆ ಸಂಬಂಧಿಸಿ ಮಾಲಕರ ವಿರುದ್ಧ ಮನೆ ಮಂದಿ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಲು ದಲಿತ ಸಂಘಟನೆಗಳು ಹಾಗೂ ಹಿಂದೂ ಮುಖಂಡರು ಪುತ್ತೂರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.ಇದೇ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ದಲಿತ ಸಂಘಟನೆಗಳ ಪ್ರಮುಖರು ಪೊಲೀಸರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಪೊಲೀಸರು, ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಸಾಲ್ಮರ ತಾವ್ರೋ ಇಂಡಸ್ಟ್ರೀಸ್ ಮಿಲ್ ಗೆ ತೆರಳಿದ್ದಾರೆ. ಇದೇ ವೇಳೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮುಚ್ಚಿದ್ದ ಮಿಲ್ ನ ಗೇಟ್ ತೆರೆದು ಮೃತದೇಹ ಸಾಗಿಸಿದ ಪಿಕಪ್ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಹಿನ್ನೆಲೆ
ಸಾಲ್ಮರ ಕೆರೆಮೂಲೆ ನಿವಾಸಿ ಸಿಮೆಂಟ್ ಸಾರಣೆ ಮೇಸಿ ಜೊತೆ ಸಹಾಯಕರಾಗಿ ಹೋಗುತ್ತಿದ್ದ ಕೂಲಿ ಕಾರ್ಮಿಕ, ಪರಿಶಿಷ್ಟ ಜಾತಿಗೆ ಸೇರಿದ ಶಿವಪ್ಪ (69ವ)ರವರು ನ.16ರಂದು ಬೆಳಿಗ್ಗೆ ಮನೆಯಲ್ಲಿದ್ದ ಸಂದರ್ಭ ಸಾಲ್ಮರ ತಾವ್ರೋ ಇಂಡಸ್ಟ್ರೀಸ್ನ ಹೆನ್ರಿ ತಾವ್ರೋ ಅವರು ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ವೇಳೆ ಅದೇ ಪಿಕಪ್ ವಾಹನದಲ್ಲಿ ಅವರನ್ನು ಕರೆದುಕೊಂಡು ಬಂದು ರಸ್ತೆ ಬದಿಯಲ್ಲಿ ಮಲಗಿಸಿ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ಇದ್ದು ತಕ್ಷಣ ರಸ್ತೆ ಬದಿ ಹೋಗಿ ನೋಡಿದಾಗ ತಂದೆ ಶಿವಪ್ಪ ಮೃತಪಟ್ಟಿದ್ದರು. ಬಳಿಕ ಸ್ಥಳೀಯರು ಸೇರಿ ಮೃತ ದೇಹವನ್ನು ಮನೆಯೊಳಗೆ ತಂದಿದ್ದೇವೆ.ಶಿವಪ್ಪ ಅವರು ಆರೋಗ್ಯವಂತರಾಗಿದ್ದು ಆಕಸ್ಮಿಕವಾಗಿ ಅವರು ಮೃತಪಟ್ಟಿರುವುದು ಸಂಶಯಕ್ಕೆ ಎಡೆ ಮಾಡಿದೆ. ಅದೂ ಅಲ್ಲದೆ ಮೃತಪಟ್ಟವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಬಿಟ್ಟು ರಸ್ತೆ ಬದಿ ಮಲಗಿಸಿ ಹೋಗಿರುವುದು ಮನಸ್ಸಿಗೆ ಆಘಾತ ಉಂಟು ಮಾಡಿದೆ ಎಂದು ಮೃತರ ಪುತ್ರಿ ಉಷಾ ಅವರು ಪೊಲೀಸರಿಗೆ ದೂರು ನೀಡಿದ್ದರು.