ಕಡಬ: ಕೊಯಿಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಸಾರ್ವಜನಿಕರಿಗೆ, ಪೋಷಕರಿಗೆ, ಹಳೆ ವಿದ್ಯಾರ್ಥಿಗಳಿಗೆ ಸಾಮೂಹಿಕ ಕ್ರೀಡಾಕೂಟ ನ.17ರಂದು ಶಾಲಾ ಮೈದಾನದಲ್ಲಿ ನಡೆಯಿತು.
ಕೊಯಿಲ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಲಿಂಗಪ್ಪ ಗೌಡ ಕಡೆಂಬ್ಯಾಲು ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯು ಕಲಿತ ಶಾಲೆಗೆ ತನ್ನಿಂದಾದ ಕೊಡುಗೆ ನೀಡಿದಾಗ ಶಾಲೆಯ ಶೈಕ್ಷಣಿಕ ಚಟುವಟಿಕೆ ಅಭಿವೃದ್ದಿಯಾಗುತ್ತದೆ. ಆ ಮೂಲಕ ನಾವು ಮುಂದಿನ ಪೀಳಿಗೆಗೆ ನಮ್ಮ ಶಾಲೆಯನ್ನು ಉಳಿಸಿದಂತಾಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಆಯೋಜಿಸುವ ಕ್ರೀಡಾಕೂಟದಿಂದ ಆ ಊರಿನಲ್ಲಿ ಸೌಹಾರ್ದತೆ ವೃದ್ದಿಸುತ್ತದೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಎರ್ಮಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ ಗೌಡ ಕೊಲ್ಯ, ಉಪಾಧ್ಯಕ್ಷೆ ರಮಿತಾ, ಶಾಲಾ ಮುಖ್ಯಗುರು ವಾರಿಜ ಬಿ , ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಇಸ್ಮಾಯಿಲ್ ಕುದುಲೂರು ಉಪಸ್ಥಿತರಿದ್ದರು. ಈ ಸಂದರ್ಭ ಲಿಂಗಪ್ಪ ಗೌಡ ಕಡೆಂಬ್ಯಾಲು ಅವರನ್ನು ಸನ್ಮಾನಿಸಲಾಯಿತು. ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ಸಾಧನೆಗೈದ ಫಾತಿಮತ್ ಅಸ್‌ಲಹ, ಕಾರ್ಯಕ್ರಮಕ್ಕೆ ಸಹಕರಿಸಿದ ಏಣಿತಡ್ಕ ಶಿವಾಜಿ ಗೆಳೆಯರ ಬಳಗದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಶಿಕ್ಷಕ ಪರಮೇಶ್ವರ ಸಬಳೂರು ಸನ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಶೇಖರ ಗೌಡ ಬಲ್ಯ ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ್ ನಿರೂಪಿಸಿ ವಂದಿಸಿದರು.